ಕೇಂದ್ರ ಲೋಕಸೇವಾ ಆಯೋಗ

ಫೇಸ್ಬುಕ್ ಲೇಖನ

ಭಾರತದ ಆಡಳಿತ ವ್ಯವಸ್ಥೆಯ ಕಾರ್ಯಾಂಗದ ಬಹುಮುಖ್ಯ ಅಧಿಕಾರಿಗಳಾದ ಐಎಫ್ಎಸ್, ಐಎಎಸ್, ಐಪಿಎಸ್ ಮತ್ತು ಅದಕ್ಕೆ ಪೂರಕ ಐಆರ್‌ಎಸ್, ಐಬಿಪಿಎಸ್ ಮುಂತಾದ ಉದ್ಯೋಗಗಳಿಗೆ ಮೂರು ಹಂತದಲ್ಲಿ ಪರೀಕ್ಷೆ ಮಾಡಿ ಅತ್ಯುತ್ತಮ ವ್ಯಕ್ತಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಇದರ ನೇರ ಜವಾಬ್ದಾರಿ ಇರುವುದು ಕೇಂದ್ರ ಲೋಕಸೇವಾ ಆಯೋಗದ ಬಳಿ.

ನಮಗೆಲ್ಲಾ ತಿಳಿದಿರುವಂತೆ, ಭಾರತದಲ್ಲಿ ಭ್ರಷ್ಟಾಚಾರ ಎಷ್ಟೊಂದು ವ್ಯಾಪಕವಾಗಿದೆ ಎಂದರೆ ಅದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಆದರೆ, ನನಗಿರುವ ಮಾಹಿತಿಯ ಮಿತಿಯಲ್ಲಿ ಹೇಳಬೇಕೆಂದರೆ, ಇಡೀ ಭಾರತದಲ್ಲಿ ಇರುವ ಕೆಲವೇ ಸ್ವತಂತ್ರ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಭ್ರಷ್ಟಾಚಾರ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ರೀತಿಯಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವುದು ಕೇಂದ್ರ ಲೋಕಸೇವಾ ಆಯೋಗ.

ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂರು ಹಂತಗಳಲ್ಲಿ ಆಯ್ಕೆ ನಡೆಯುತ್ತದೆ. ನಂತರ ತರಬೇತಿ ನೀಡಿ ಉದ್ಯೋಗಕ್ಕೆ ಕಳಿಸಲಾಗುತ್ತದೆ. ಯಾವುದೇ ಪದವಿ ಪಡೆದ ಯಾರು ಬೇಕಾದರೂ ಈ ಪರೀಕ್ಷೆ ಬರೆಯಬಹುದು. ಎಲ್ಲಿಯೂ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಪ್ರಕ್ರಿಯೆ ನಡೆಸಲಾಗುತ್ತದೆ. ತೀರಾ ಆಂತರಿಕ ವಾಗಿ ಕಣ್ಣಿಗೆ ಕಾಣದಂತೆ ಅಪರೂಪಕ್ಕೆ ಸ್ವಜನ ಪಕ್ಷಪಾತ ನಡೆಯಬಹುದೇನೋ. ಅದೂ ಸಹ ತುಂಬಾ ಕಷ್ಟ.

ಆದರೆ, ಉದ್ಯೋಗದ ಸಂದರ್ಶನದ ಸಮಯದಲ್ಲಿ ಬಹುಶಃ ರಾಜಕಾರಣಿಗಳ ಕೈವಾಡ ನಡೆದು ತಮ್ಮ ಅನುಕೂಲಕರ ಸ್ಥಳಗಳಗೆ ಅವರನ್ನು ವರ್ಗಾಯಿಸಿಕೊಳ್ಳಬಹುದು. ಆಯ್ಕೆಯಾದ ವ್ಯಕ್ತಿಗಳು ನಂತರ ಭ್ರಷ್ಟಾ ಚಾರದಲ್ಲಿ ತೊಡಗುತ್ತಾರೆ ಎಂಬುದು ಬೇರೆ ಮಾತು.

ಭಾರತದ ಆ ವರ್ಷದ ಅತ್ಯಂತ ಪ್ರತಿಭಾವಂತ ಸುಮಾರು 600/800 ಜನರನ್ನು ಆಯ್ಕೆ ಮಾಡುವ ಸಂಸ್ಥೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತದೆ ಎಂದು ಕೇಳುವುದೇ ಸಂತೋಷ ಮತ್ತು ರೋಮಾಂಚನವಲ್ಲವೆ. ಇದು ಬಹುತೇಕ ನಿಜ. ಭ್ರಷ್ಟಾಚಾರ ಮಾಡಲು ಬಹಳಷ್ಟು ಅವಕಾಶವಿದ್ದೂ ಕಡಿಮೆ ಭ್ರಷ್ಟಾಚಾರ ಇರುವ ಭಾರತದ ಕೆಲವು ಸರ್ಕಾರಿ ಸಂಸ್ಥೆಗಳೆಂದರೆ, ಭಾರತದ ಸುಪ್ರೀಂಕೋರ್ಟ್, ಚುನಾವಣಾ ಆಯೋಗ, ಭಾರ ತೀಯ ಜೀವ ವಿಮಾ ನಿಗಮ. ಇದು ಈಗಿನ ಬೆಳವಣಿಗೆಯಲ್ಲ. ಭಾರತದ ಸ್ವಾತಂತ್ರ್ಯ ನಂತರದ ಕಾಲದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ.

ಇನ್ನೂ ಕೆಲವು ಸಂಸ್ಥೆಗಳನ್ನು ಹೆಸರಿಸಬಹುದಾದರೂ ಅವುಗಳಲ್ಲಿ ರಾಜಕೀಯ ಬೆರೆತು ಪ್ರತ್ಯಕ್ಷ ಮತ್ತು ಪರೋಕ್ಷ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ. ಏನೇ ಇರಲಿ ಕನಿಷ್ಠ ಈ ಕೆಲವು ಸಂಸ್ಥೆಗಳಾದರೂ ತುಂಬಾ ಕಡಿಮೆ ಭ್ರಷ್ಟಾ ಚಾರ ಇದೆ ಎನ್ನುವುದೇ ನಮ್ಮ ವ್ಯವಸ್ಥೆಯ ಹೆಮ್ಮೆ. ಈ ರೀತಿಯ ಇಡೀ ವ್ಯವಸ್ಥೆಯೇ ಬದಲಾದರೆ…!

  • ವಿವೇಕಾನಂದ ಎಚ್.ಕೆ.,

Leave a Reply

Your email address will not be published. Required fields are marked *