ಶಹಜಹಾನ್ಪುರ್/ಉತ್ತರಪ್ರದೇಶ: ಜನೆವರಿ 23 (ಉದಯಕಾಲ) “ನನ್ನ ನಿದ್ದೆ ಸಂಪೂರ್ಣವಾಗಿಲ್ಲ. ನಾನು ಸದ್ಯ ರೈಲು ಚಲಾಯಿಸುವುದಿಲ್ಲ.” ಉತ್ತರ ಪ್ರದೇಶದ ಶಹಜಹಾನ್ಪುರ ರೈಲು ನಿಲ್ದಾಣದಲ್ಲಿ ಶುಕ್ರವಾರ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಬಲಮೌ ಪ್ಯಾಸೆಂಜರ್ ರೈಲಿನ ಚಾಲಕ ನಿದ್ರೆಯ ಕೊರತೆಯಿಂದಾಗಿ ರೈಲನ್ನು ಓಡಿಸಲು ನಿರಾಕರಿಸಿದ್ದಾನೆ. ಇದರಿಂದಾಗಿ ರೈಲು ಸುಮಾರು ಎರಡೂವರೆ ಗಂಟೆಗಳ ಕಾಲ ನಿಲ್ದಾಣದಿಂದ ಕದಲಿಲ್ಲ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.
ಆಗಿದ್ದೇನೆಂದರೆ? ಬಾಲಾಮೌ ಪ್ಯಾಸೆಂಜರ್ ಗುರುವಾರ ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಮೂರೂವರೆ ಗಂಟೆ ತಡವಾಗಿ ಶಹಜಹಾನ್ಪುರ ರೈಲು ನಿಲ್ದಾಣವನ್ನು ತಲುಪಿತು. ಬಲಮೌವಿಗೆ ರೈಲು ತಂದಿದ್ದ ಚಾಲಕ ಬೆಳಗ್ಗೆ ಅದೇ ರೈಲನ್ನು ವಾಪಸ್ ಬಲಮೌವಿಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ರಾತ್ರಿ ತಡವಾಗಿ ಬಂದ ಕಾರಣ ಚಾಲಕನಿಗೆ ನಿದ್ರೆ ಸಂಪೂರ್ಣ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಹೊರಡಬೇಕಿದ್ದ ರೈಲನ್ನು ಚಲಾಯಿಸಲು ನಿರಾಕರಿಸಿದ್ದಾನೆ.
ಶಹಜಹಾನ್ಪುರ ರೈಲ್ವೆ ಸೂಪರಿಂಟೆಂಡೆಂಟ್ ಅಮರೇಂದ್ರ ಗೌತಮ್ ಮಾತನಾಡಿ, ರೋಜಾ ಜಂಕ್ಷನ್ನಲ್ಲಿ ರಾತ್ರಿ ವಿಶ್ರಾಂತಿ ಪಡೆದ ನಂತರ ಅದೇ ಡ್ರೈವರ್ ಬೆಳಗ್ಗೆ ರೈಲನ್ನು ವಾಪಸ್ ತೆಗೆದುಕೊಂಡು ಹೋಗುತ್ತಾನೆ. ರೈಲು ಚಾಲಕನಿಗೆ ರಾತ್ರಿ ಸಂಪೂರ್ಣ ನಿದ್ದೆಯಾಗದ ಕಾರಣ ನಿರಾಕರಿಸಿದ್ದಾನೆ. ಅವರ ನಿದ್ರೆ ಪೂರ್ಣಗೊಂಡ ಬಳಿಕ ರೈಲು ಚಾಲಕ ಟ್ರೈನ್ ಹತ್ತಿದ್ದಾನೆ ಎಂದು ಗೌತಮ್ ತಿಳಿಸಿದ್ದಾರೆ.