ನೂತನ ಸಚಿವರ ಪದಗ್ರಹಣಕ್ಕೆ ನಾಳೆ 4 ಗಂಟೆಗೆ ಮುಹೂರ್ತ ಫಿಕ್ಸ್
ಬೆಂಗಳೂರು, ಜ 12 ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 17 ತಿಂಗಳ ತಮ್ಮ ಸಂಪುಟಕ್ಕೆ ಬುಧವಾರ (ನಾಳೆ) ಹೊಸ ಸಚಿವರ ಸೇರ್ಪಡೆಗೆ ಮುಹೂರ್ತ ಸಿದ್ದಪಡಿಸಿದ್ದು, ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ಬಗ್ಗೆ ಖಚಿತ ಮಾಹಿತಿ ನೀಡಿದ್ದು, ನಾಳೆ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ನೂತನ ಸಚಿವರ ಪಟ್ಟಿಯನ್ನು ನಾಳೆಯೇ ಬಿಡುಗಡೆ ಮಾಡುವುದಾಗಿ ಹೇಳಿ, ಹೆಸರುಗಳನ್ನು ತೇಲಿಬಿಟ್ಟು ಊಹಾಪೋಹಗಳಿಗೆ, ವದಂತಿಗಳಿಗೆ ಅವಕಾಶ ಕೊಡಬೇಡಿ, ನಾನೇ ಪಟ್ಟಿ ಕೊಡುವುದಾಗಿ ಮಾಧ್ಯಮಗಳಿಗೂ ಮನವಿ ಮಾಡಿದರು.
ಕಳೆದ ಭಾನುವಾರ ಯಡಿಯೂರಪ್ಪ ದೆಹಲಿಗೆ ತೆರಳಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಜೊತೆ ದೀರ್ಘ ಸಮಾಲೋಚನೆ ನಡೆಸಿದ್ದರು .
7 ಜನ ಹೊಸಬರಿಗೆ ಸಚಿವ ಸ್ಥಾನ ನೀಡಲು ವರಿಷ್ಠರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಎಸ್ ವೈ ಹೇಳಿದ್ದರು. ಇದಾದ ಬಳಿಕ ಬಾರಿ ಸಚಿವಗಿರಿಗಾಗಿ ಲಾಬಿ ನಡೆಯುತ್ತಿದ್ದು, ಸಂಪುಟ ವಿಸ್ತರಣೆಯೋ ಅಥವಾ ಪನ್ರಚನೆಯೋ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ದೊರಕಿಲ್ಲ .
ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡಿದ ಮುನಿರತ್ನ, ಆರ್. ಶಂಕರ್, ಎಂಟಿಬಿ ನಾಗರಾಜ್ ಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.