ರಸ ಹೀರುವ ಹಿಟ್ಟು ತಿಗಣೆ

ಬಿಳಿ ಮೈ ಬಣ್ಣದ ಅಂಟುವ ಕೀಟ ಬಹುತೇಕ ಸಸ್ಯಗಳ ರಸ ಹೀರಿ, ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂದೆ, ಬೆಂಡೆ, ಬದನೆ, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿ?? ಬೆಳೆಗಳಾದ ಮಾವು, ಪಪ್ಪಾಯಿ, ಮೂಸಂಬಿ, ಲಿಂಬೆ,ನೇರಳೆ, ಅನಾನಸು, ಪೇರಳೆ, ಸೀತಾಫಲ, ಕಬ್ಬು, ಹತ್ತಿ, ಮುಂತಾದ ವಾಣಿಜ್ಯ ಬೆಳೆಗಳಿಗೆ, ಎಣ್ಣೆ ಕಾಳು ಬೆಳೆಗಳಾದ ಸೂರ್ಯಕಾಂತಿ, ನೆಲಗಡಲೆ, ಸೋಯಾ ಅವರೆ, ತೊಗರಿ, ಹಿಪ್ಪು ನೇರಳೆ, ದ್ರಾಕ್ಷಿ, ಸೇಬು, ಆಲೂಗಡ್ಡೆ, ಮರಗೆಣಸು ಇತ್ಯಾದಿಗೆ ಹಿಟ್ಟು ತಿಗಣೆ ಕಾಟ ಕೊಡುತ್ತದೆ.

ಹಿಟ್ಟು ತಿಗಣೆ(ಮೀಲಿ ಬಗ್) ಹೂವು, ತರಕಾರಿ, ವಾಣಿಜ್ಯಬೆಳೆಗಳು, ಹಣ್ಣು ಇತ್ಯಾದಿ ಸೇರಿದಂತೆ 200ಕ್ಕೂ ಹೆಚ್ಚು ಬೆಳೆಗಳಿಗೆ ಹಾನಿ ಮಾಡುತ್ತದೆ. ಹಿಟ್ಟು ತಿಗಣೆ ರಸ ಹೀರಿ ಬಾಧಿಸಿದ ಭಾಗವನ್ನು ಘಾಸಿಗೊಳಿಸುತ್ತದೆ.

ಮೀಲಿ ಬಗ್ ಬಹಳ ಸಣ್ಣ ಕೀಟ. ಕೀಟದ ಮೈ ಮೇಲೆ ಯಾವಾಗಲೂ ಬಿಳಿ ಬಣ್ಣದ ಹಿಟ್ಟಿನ ತರಹದ ಪುಡಿ ಇರುವ ಕಾರಣ ಇದಕ್ಕೆ ಹಿಟ್ಟು ತಿಗಣೆ ಎಂಬ ಹೆಸರಿಡಲಾಗಿದೆ. ಕೀಟ ಬೆಳೆದಂತೆ ಅದರಲ್ಲಿ ಬಿಳಿ ಅಂಶ ಹೆಚ್ಚುತ್ತ ಹೋಗುತ್ತದೆ. ಸಸ್ಯಗಳ ಕಾಯಿ, ಹೂವು, ಮೊಗ್ಗು, ಕಾಂಡಗಳಲ್ಲಿ ಕುಳಿತು ರಸ ಹೀರು ತ್ತದೆ. ಕೀಟದ ಮೇಲಿರುವ ಬಿಳಿ ಹುಡಿ ಅದನ್ನು ರಕ್ಷಿಸುತ್ತದೆ. ಗಾಳಿ, ಪಕ್ಷಿ, ನೀರು ಮತ್ತು ಸಾಗಣೆ ಮೂಲಕ ವರ್ಗಾವಣೆಯಾಗುತ್ತದೆ.

ಇವಕ್ಕೆ ಸಸ್ಯದ ರಸವೇ ಆಹಾರ. ನೋಡಲು ಮೃದು ಕೀಟದಂತೆ ಕಂಡರೂ, ಬಲಿಷ್ಟ ಹಲ್ಲುಗಳನ್ನು ಹೊಂದಿದೆ. ಬೇಗ ಸಂತಾನಾಭಿವೃದ್ದಿಗೊಂಡು ಸಂಖ್ಯೆ ಹೆಚ್ಚುತ್ತದೆ. ಹೆಣ್ಣು ತಿಗಣೆ ಒಮ್ಮೆ 300ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ಬಿಳಿ ಹೊದಿಕೆಯ ಕೆಳ ಭಾಗದಲ್ಲಿಟ್ಟು ರಕ್ಷಿಸುತ್ತವೆ. ಮೊಟ್ಟೆ ಇಟ್ಟು ಅರ್ಧ ಗಂಟೆಯಿಂದ ಅರ್ಧ ದಿನದ ಒಳಗೆ ಮರಿಯಾಗುತ್ತದೆ. ಮರಿಗಳು 6 ವಾರಗಳಲ್ಲಿ ಬೆಳೆಯುತ್ತವೆ. ಈ ಕೀಟಕ್ಕೆ ರೆಕ್ಕೆ ಇಲ್ಲ. ಗಂಡು ಇಲ್ಲದಿದ್ದರೂ ಸಂತಾನೋತ್ಪತ್ತಿ ಮಾಡುತ್ತದೆ. ಗಂಡಿಗೆ ರೆಕ್ಕೆ ಇರುತ್ತದೆ.

ಮೊದಲು ಸ್ವಲ್ಪ ಪ್ರಮಾಣದಲ್ಲಿ ಕಂಡರೂ, ಒಂದೆರಡು ದಿನದಲ್ಲಿ ಎರಡು ಮೂರು ಪಟ್ಟು ಹೆಚ್ಚಳವಾಗು ತ್ತದೆ. ಆಶ್ರಯಿಸಿದ ಭಾಗಗಳಿಂದ ರಸ ಹೀರಿ, ಬೆಳೆಗೆ ಆಹಾರದ ಕೊರತೆಯಾಗುವಂತೆ ಮಾಡುವುದ ರಿಂದ ಎಲೆ, ಕಾಯಿ, ಹಣ್ಣು ಸಮರ್ಪಕವಾಗಿ ಬೆಳೆಯುವುದಿಲ್ಲ. ಮುಟ್ಟಿದರೆ ಮೇಣದಂತೆ ಇರುವ ಈ ಕೀಟಗಳನ್ನು ನಾಶ ಮಾಡದಿದ್ದರೆ ಬೆಳೆಗಳ ಗುಣಮಟ್ಟ ಕ್ಷೀಣಿಸುತ್ತದೆ. ಮಾರುಕಟ್ಟೆಯಲ್ಲಿ ಉತ್ಪನ್ನ ತಿರಸ್ಕರಿಸಲ್ಪಡುತ್ತದೆ. ಇದನ್ನು ತಿನ್ನಲು ಬರುವ ಕೆಂಪು ಇರುವೆ, ಕರಿ ಇರುವೆಗಳು ಗಿಡದಿಂದ ಗಿಡಕ್ಕೆ ಪ್ರಸಾರವಾಗಲು ನೆರವಾಗುತ್ತವೆ. ಸ್ವಾಭಾವಿಕವಾಗಿ ಇದನ್ನು ಭಕ್ಷಿಸುವ ಪಕ್ಷಿಗಳು, ಕೀಟಗಳು ಇವೆ. ಇರುವೆಗಳನ್ನು ನಾಶ ಮಾಡುವುದರಿಂದ ಹಿಟ್ಟು ತಿಗಣೆಯನ್ನು ಕಡಿಮೆ ಮಾಡಬಹುದು. ಕೆಂಪು, ಕಪ್ಪು ಇರುವೆಯ ಗೂಡನ್ನು ಗುರುತಿಸಿ ನಾಶ ಮಾಡ ಬೇಕು.

ಹತೋಟಿ ಅಗತ್ಯ: ಬೆಳೆಸುವ ಹೆಚ್ಚಿನೆಲ್ಲ ಬೆಳೆಯಲ್ಲಿ ಈ ಕೀಟ ಕಂಡು ಬರುವುದು ಸಾಮಾನ್ಯ. ಹತೋಟಿ ಮಾಡದೇ ಇದ್ದಲ್ಲಿ, ಸಂಖ್ಯೆ ಹೆಚ್ಚಳವಾಗಿ ಬೆಳೆ ಹಾಳಾಗಬಹುದು. ತಿಗಣೆ ನಾಶಕಗಳಾದ ಡೈಕ್ಲೋರೋ ವಾಸ್, ಮೆಲಾಥಿಯಾನ್ ಅಥವಾ ಅಸಿಫೇಟ್ ಮುಂತಾದ ಕೀಟನಾಶಕ ಸಿಂಪಡಿಸಿ ಹತೋಟಿ ಮಾಡಬ ಹುದು. ಆಹಾರದ ಬಳಕೆಗಲ್ಲದ ಬೆಳೆಗಳಿಗೆ ಕ್ಲೋರೋಫೆರಿವಾಸ್ ಚೆನ್ನಾಗಿ ಕೆಲಸ ಮಾಡುತ್ತದೆ.

ಜೈವಿಕ ಕೀಟನಾಶಕ ಹೆಚ್ಚು ಉಪಯುಕ್ತ: ತರಕಾರಿ ಬೆಳೆಗಳಿಗೆ ಬೆವೇರಿಯಾ ಬೆಸ್ಸಿಯಾನ ಅಥವಾ ವರ್ಟಿಸೀಲಿಯಂ ಲೆಖ್ಯಾನಿ (ಮಾರುಕಟ್ಟೆಯಲ್ಲಿ ಹೆಸರು ಬೇರೆ ಇರುತ್ತದೆ) ಶಿಲೀಂಧ್ರ ಆಧರಿತ ಜೈವಿಕ ಕೀಟನಾಶಕ ಹೆಚ್ಚು ಉಪಯುಕ್ತ. ಉತ್ತಮ ಗುಣಮಟ್ಟದ ಜೈವಿಕ ಶಿಲೀಂಧ್ರ ನಾಶಕಗಳು ರಾಸಾಯನಿಕ ಕೀಟನಾಶಕಗಳಿಗಿಂತ ಪರಿಣಾಮಕಾರಿಯಾಗಿ ಹಿಟ್ಟು ತಿಗಣೆಯನ್ನು ನಾಶ ಮಾಡುತ್ತವೆ. Bug Buster ಎಂಬ ಸಸ್ಯಜನ್ಯ ಔಷಧ ಕೆಲಸ ಮಾಡುತ್ತದೆ. ಗುಲಗುಂಜಿ ಹುಳಗಳು ಹಿಟ್ಟು ತಿಗಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಭಕ್ಷಿಸುತ್ತವೆ. ಆದ ಕಾರಣ ಅವನ್ನು ಬಿಡುವುದು ಉಪಯುಕ್ತ. ಬೇವಿನ ಬೀಜದ ಕಷಾಯ ಮತ್ತು ಹೊಂಗೆ ಎಣ್ಣೆ ಮಿಶ್ರಿತ ಕೀಟನಾಶಕ (ಐಐಎಚ್ ಆರ್)ದಲ್ಲಿ ತಕ್ಕಮಟ್ಟಿಗೆ ಹಿಟ್ಟು ತಿಗಣೆ ಕಡಿಮೆಯಾಗುತ್ತದೆ.

ಸಣ್ಣ ಪ್ರಮಾಣದ ತರಕಾರಿ, ಹೂವಿನ ಸಸ್ಯ ಬೆಳೆಸುವವರು ಸಾಬೂನು ದ್ರಾವಣವನ್ನು ತೊಯ್ಯುವಂತೆ ಸಿಂಪಡಿಸಿ, ಕೀಟಗಳನ್ನು ನಾಶಮಾಡಬಹುದು. ಹಿಟ್ಟು ತಿಗಣೆ ಇದ್ದಲ್ಲಿಂದ ನೆಡು ಸಾಮಗ್ರಿ ತರುವಾಗ ಜಾಗರೂಕತೆ ವಹಿಸಬೇಕು. ಅದು ಅಲ್ಲಿಂದ ವರ್ಗಾವಣೆಯಾಗುತ್ತದೆ. ದೇಶದ ಬಹುತೇಕ ಬೆಳೆ ಗಳಿಗೆ ಹಿಟ್ಟು ತಿಗಣೆ ಉಪಟಳ ಅಧಿಕವಾಗಿದ್ದು, ಜೈವಿಕ ವಿಧಾನದಲ್ಲಿ ನಾಶ ಮಾಡದಿದ್ದರೆ ಇದು ಇನ್ನಷ್ಟು ಹೆಚ್ಚಳವಾಗಬಹುದು.
-ರಾಧಾಕೃಷ್ಣ ಹೊಳ್ಳ, ಮೊ.94482 55026 

Leave a Reply

Your email address will not be published. Required fields are marked *