ಮಹಾರಾಷ್ಟ್ರದ ಪುಣೆಯ ಮಾವಲ್ ನಲ್ಲಿ ಪಾವ್ನಾ ಡ್ಯಾಮ್ ಬಳಿ ಇರುವ ತಿಕೋನಾ ಗ್ರಾಮದಲ್ಲಿ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಅವರ ಮಾಜಿ ಪತ್ನಿ ಹಾಗೂ ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರ ಫಾರ್ಮ್‌ಹೌಸ್‌ನಲ್ಲಿ ಕಳ್ಳತನವಾಗಿದೆ.
ಮನೆಯಲ್ಲಿ ಕಳ್ಳತನವಾಗಿದೆ.ಸಂಗೀತಾ ಬಿಜಲಾನಿ ಅವರ ಫಾರ್ಮ್ ಹೌಸ್ ಗೆ ನುಗ್ಗಿದ ದುಷ್ಕರ್ಮಿಗಳು ಸುಮಾರು 57 ಸಾವಿರ ರೂ. ಮೌಲ್ಯದ ಸ್ವತ್ತು ಕಳ್ಳತನ ಮಾಡಿದ್ದು, ಹಲವು ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಸುಮಾರು 4 ತಿಂಗಳ ನಂತರ ಸಂಗೀತಾ ಬಿಜಲಾನಿ ಶನಿವಾರ ಫಾರ್ಮ್ ಹೌಸ್ ಗೆ ಭೇಟಿ ನೀಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 7 ಸಾವಿರ ರೂ. ಮೌಲ್ಯದ ಟೀವಿ, 50 ಸಾವಿರ ರೂ. ನಗದು ಹಾಗೂ ಇತರೆ ವಸ್ತುಗಳನ್ನು ದೋಚಲಾಗಿದೆ.
ಪುನಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂಗೀತಾ ಬಿಜಲಾನಿ ದೂರು ನೀಡಿದ್ದು, ಮನೆಗೆ ಭೇಟಿ ನೀಡಿದಾಗ ಬಾಗಿಲು, ಕಿಟಕಿಗಳನ್ನು ಮುರಿಯಲಾಗಿದ್ದು, ಹಾಸಿಗೆ, ರೆಫ್ರಿಜರೇಟರ್ ಗಳನ್ನು ಹಾನಿಗೊಳಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ತಂದೆ ಅನಾರೋಗ್ಯಕ್ಕೆ ಒಳಗಾಗಿರುವ ಕಾರಣ ಫಾರ್ಮ್ ಹೌಸ್ ಗೆ ಹಲವು ತಿಂಗಳಿನಿಂದ ಭೇಟಿ ನೀಡಲು ಆಗಿರಲಿಲ್ಲ. ಇದೀಗ ಭೇಟಿ ನೀಡಿದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ ಎಂದು ವಿವರಿಸಿದ್ದಾರೆ.