ತಮಿಳುನಾಡು: ಕೋವಿಡ್ ಸುರಕ್ಷತಾ ನಿಯಮಗಳೊಂದಿಗೆ ಜಲ್ಲಿಕಟ್ಟು ಆರಂಭ

ತಮಿಳುನಾಡು: ಕೋವಿಡ್ ಸುರಕ್ಷತಾ ನಿಯಮಗಳೊಂದಿಗೆ ಜಲ್ಲಿಕಟ್ಟು ಆರಂಭ
ಮ‍ಧುರೈ, ಜ 14 ತಮಿಳುನಾಡಿನ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಕೋವಿಡ್ ಸುರಕ್ಷತಾ ನಿಯಮಗಳೊಂದಿಗೆ ಜಲ್ಲಿಕಟ್ಟು ಸುಪ್ರಸಿದ್ಧ ಸಾಂಪ್ರದಾಯಿಕ ಕ್ರೀಡೆಗೆ ಚಾಲನೆ ನೀಡಲಾಗಿದೆ.
ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಮತ್ತು ಜಿಲ್ಲಾಧಿಕಾರಿ ಟಿ.ಅನ್ಬಳಗನ್ ಗುರುವಾರ ಬೆಳಗ್ಗೆ 8 ಗಂಟೆಗೆ ಚಾಲನೆ ನೀಡಿದ್ದು, ಸಂಜೆ 4ರ ವರೆಗೆ ನಡೆಯಲಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಪೊಂಗಲ್ ಹಬ್ಬದ ಅಂಗವಾಗಿ ಆಯೋಜಿಸಲಾದ ಮೊದಲ ಅಧಿಕೃತವಾಗಿ ಅನುಮತಿಸಲಾದ ಜಲ್ಲಿಕಟ್ಟು ಕಾರ್ಯಕ್ರಮವಾಗಿದ್ದು, ಸುಮಾರು 830 ನೋಂದಾಯಿತ ಎತ್ತುಗಳು ಭಾಗವಹಿಸುತ್ತಿವೆ.
ವಿಧಾನಸಭಾ ಚುನಾವಣೆಗೂ ಮುನ್ನ, ಕಾಂಗ್ರೆಸ್‍ ಪಕ್ಷ ಹಮ್ಮಿಕೊಂಡಿರುವ “ರಾಹುಲಿನ್ ತಮಿಳ್ ವಣಕ್ಕಂ” ಉಪಕ್ರಮದ ಅಂಗವಾಗಿ ತಮಿಳುನಾಡಿಗೆ ಆಗಮಿಸಲಿರುವ ಸಂಸದ ರಾಹುಲ್ ಗಾಂಧಿಯವರು ಅವನಿಯಪುರಂ ನಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ವೀಕ್ಷಿಸಲಿದ್ದಾರೆ.
ಇಂದು ಮಧ್ಯಾಹ್ನ ನವದೆಹಲಿಯಿಂದ ಮಧುರೈಗೆ ವಿಶೇಷ ವಿಮಾನದ ಮೂಲಕ ಆಗಮಿಸುವ ರಾಹುಲ್ ಗಾಂಧಿ ನೇರವಾಗಿ ಅವನಿಯಪುರಂಗೆ ತೆರಳಿ ಒಂದೆರಡು ಗಂಟೆಗಳ ಕಾಲ ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡಿಗೆ ಸಾಕ್ಷಿಯಾಗಲಿದ್ದಾರೆ.
ರಾಹುಲ್ ಗಾಂಧಿಯವರ ಜತೆ ಟಿಎನ್‌ಸಿಸಿ ಅಧ್ಯಕ್ಷ ಕೆ.ಎಸ್.ಅಲಗಿರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಕೆ.ಆರ್.ರಾಮಸಾಮಿ ಮತ್ತು ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿ ಉದಯಾನಿಧಿ ಸ್ಟಾಲಿನ್ ಮತ್ತು ಇತರರು ಭಾಗವಹಿಸಲಿದ್ದಾರೆ. ಪೊಲೀಸ್ ಆಯುಕ್ತ ಪ್ರೇಮ್ ಆನಂದ್ ಸಿನ್ಹಾ ಅವರ ನೇರ ಮೇಲ್ವಿಚಾರಣೆಯಲ್ಲಿ ಜಲ್ಲಿಕಟ್ಟು ಸ್ಥಳದಲ್ಲಿ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಕೋವಿಡ್ -19 ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಜಲ್ಲಿಕಟ್ಟು ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ವೈಯಕ್ತಿಕ ಅಂತರವನ್ನು ಕಾಪಾಡಿಕೊಳ್ಳುವ ಸಲುವಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮತ್ತು ಫೇಸ್ ಮಾಸ್ಕ್ ಧರಿಸಿದ ನಂತರ ಪ್ರೇಕ್ಷಕರಿಗೆ ಅವಕಾಶ ನೀಡಲಾಯಿತು. ಪಲಮೇಡು ಜಲ್ಲಿಕಟ್ಟು ಶುಕ್ರವಾರ ನಡೆಯಲಿದೆ. ಶನಿವಾರ ನಡೆಯಲಿರುವ ವಿಶ್ವಪ್ರಸಿದ್ಧ ಅಲಂಗನಲ್ಲೂರ್ ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಸಾಕ್ಷಿಯಾಗಲಿದ್ದಾರೆ.

Leave a Reply

Your email address will not be published. Required fields are marked *