ಕೃಷಿ ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಕೃಷಿ ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ನವದೆಹಲಿ, ಜ 12 ಹೊಸ ಕೃಷಿ ಕಾನೂನುಗಳ ಜಾರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶ ನೀಡುವವರೆಗೆ ತಡೆಯಾಜ್ಞೆ ಮುಂದುವರಿಯಲಿದೆ ಎಂದು ನ್ಯಾಯಪೀಠ ಹೇಳಿದೆ. ಬಿಕ್ಕಟ್ಟು ಪರಿಹಾರಕ್ಕಾಗಿ ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದೆ.
ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಮಂಗಳವಾರ ಮಧ್ಯಾಹ್ನ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತು. ಮುಖ್ಯ ನ್ಯಾಯ ಮೂರ್ತಿ ಶರದ್ ಅರವಿಂದ್ ಬೋಬ್ಡೆ ನೇತೃತ್ವದ ನ್ಯಾಯಪೀಠ, ತಮಗಿರುವ ಹಕ್ಕುಗಳನ್ನು ಚಲಾಯಿಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ, ಕಾಯ್ದೆಗಳನ್ನು ಅಮಾನತುಗೊಳಿಸಿ, ಸಮಿತಿ ರಚಿಸುವುದು ತನಗಿರುವ ಅಧಿಕಾರಗಳಲ್ಲಿ ಒಂದಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ.
ಕೃಷಿ ಕಾನೂನುಗಳ ಕ್ರಮ ಬದ್ದತೆ, ಪ್ರತಿಭಟನೆಗಳಿಂದಾಗಿ ಜನರ ಜೀವ ಹಾಗೂ ಆಸ್ತಿ ರಕ್ಷಣೆಯಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು. ತಮಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದರು. ‘ ಈ ಸಂಬಂಧ ಸಮಿತಿಯನ್ನು ರಚಿಸಿದರೆ ಸ್ಪಷ್ಟತೆ ಮೂಡಲಿದೆ ಎಂದು ಹೇಳಿದರು. ರೈತರು ಸಮಿತಿಯ ಬಳಿಗೆ ಹೋಗುವುದಿಲ್ಲ ಎಂಬ ವಾದಗಳನ್ನು ನಾವು ಆಲಿಸಲು ಬಯಸುವುದಿಲ್ಲ, ನೀವು (ರೈತರು) ಅನಿರ್ದಿಷ್ಟ ಪ್ರತಿಭಟನೆ ಮುಂದುವರಿಸಲು ಬಯಸಿದರೆ ಅದನ್ನು ಮಾಡಬಹುದು ಎಂದು ಅವರು ಹೇಳಿದರು.

ರೈತರ ಪರವಾದ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ವಕೀಲ ಎಂ.ಎಲ್.ಶರ್ಮಾ. ತಮ್ಮ ವಾದ ಮಂಡಿಸಿ ನ್ಯಾಯಾಲಯ ರಚಿಸಿದ ಯಾವುದೇ ಸಮಿತಿಯ ಮುಂದೆ ತಾವು ಹಾಜರಾಗಲು ಬಯಸುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸಾಕಷ್ಟು ಮಾತುಕತೆ ನಡೆದರೂ ಮುಖ್ಯ ವ್ಯಕ್ತಿಯಾಗಿರುವ ಪ್ರಧಾನ ಮಂತ್ರಿ ಮುಂದೆ ಬರುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ ಎಂದು ನ್ಯಾಯಾಲಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ, ಮಾತುಕತೆಗೆ ಹೋಗುವಂತೆ ಪ್ರಧಾನಿಗೆ ನ್ಯಾಯಾಲಯ ಸೂಚಿಸಲು ಸಾಧ್ಯವಿಲ್ಲ, ಈ ಪ್ರಕರಣದಲ್ಲಿ ಅವರು ಪಾರ್ಟಿಯಲ್ಲ ಎಂದರು. ನ್ಯಾಯಾಲಯ ತನಗಿರುವ ಅಧಿಕಾರ ವ್ಯಾಪ್ತಿಯೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬಹುದು, ಸಮಿತಿಯು ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿದೆ. ಒಳ್ಳೆಯ ಉದ್ದೇಶದಿಂದ ಪರಿಹಾರ ಬಯಸುವ ರೈತರು ಸಮಿತಿಯ ಮುಂದೆ ಹೋಗಬಹುದು ಎಂದು ಸಿಜೆಐ ಹೇಳಿದರು.
ರೈತರ ಪ್ರತಿಭಟನೆಗೆ ನಿಷೇಧಿತ ಸಂಸ್ಥೆ ಯೊಂದು ಸಹಕರಿಸುತ್ತಿದೆ ಎಂದು ಆರೋಪಿಸಿರುವ ಅರ್ಜಿ ತಮ್ಮ ಮುಂದಿದೆ ಎಂದು ಮುಖ್ಯನ್ಯಾಯಮೂರ್ತಿಗಳು ಹೇಳಿದಾಗ, ಅಟಾರ್ನಿ ಜನರಲ್‌ ಪ್ರತಿಕ್ರಿಯಿಸಿ, ಖಲಿಸ್ತಾನಿಗಳು ಪ್ರತಿಭಟನೆಯಲ್ಲಿ ನುಸುಳಿದ್ದಾರೆಂದು ಮಾತ್ರ ತಾವು ಹೇಳಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Leave a Reply

Your email address will not be published. Required fields are marked *