ರಾಮಜನ್ಮ ಭೂಮಿ ಹಗರಣ; ಇಡೀ ದೇಶಕ್ಕೆ ಮಾಡಿದ ಅಪಮಾನ; ಡಿ.ಕೆ ಶಿವಕುಮಾರ್ ಕಿಡಿ

ರಾಮಜನ್ಮ ಭೂಮಿ ಹಗರಣ; ಇಡೀ ದೇಶಕ್ಕೆ ಮಾಡಿದ ಅಪಮಾನ; ಡಿ.ಕೆ ಶಿವಕುಮಾರ್ ಕಿಡಿ

ಮಂಡ್ಯ: ರಾಮಮಂದಿರ ಭೂಮಿ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಇದು ಇಡೀ ದೇಶ ಹಾಗೂ ಜನರ ಭಾವನೆಗೆ ಮಾಡಿರುವ ಅಪಮಾನ. ಈ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ಮಂಗಳವಾರ ನಡೆದ 100 ನಾಟ್ ಔಟ್ ಆಂದೋಲನದ ಅಂತಿಮ ದಿನದ ಪ್ರತಿಭಟನೆ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು:

‘ರಾಮ ಮಂದಿರ ನಿರ್ಮಾಣಕ್ಕೆ ಜನಸಾಮಾನ್ಯರು ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದರು. ಇಟ್ಟಿಗೆಗಳನ್ನು ಕೊಟ್ಟಿದ್ದಾರೆ. ಆದರೆ ರಾಮಮಂದಿರ ನಿರ್ಮಾಣದಲ್ಲೇ ಅಕ್ರಮ ಎಸಗಿರುವುದು ದೇಶಕ್ಕೇ ದೊಡ್ಡ ಅಪಮಾನ. ಭಾರತೀಯ ಸಂಸ್ಕೃತಿಗೆ, ನಮ್ಮ ಭಾವನೆಗೆ, ಧರ್ಮಕ್ಕೆ ಮಾಡಿದ ಅಪಚಾರ. ರಾಮ ಮಂದಿರ ನಿರ್ಮಾಣಕ್ಕಾಗಿ ಹಳ್ಳಿ, ಹಳ್ಳಿಗಳಲ್ಲಿ ಜನ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಹೀಗಿರುವಾಗ ಇವರು ಭೂಮಿ ಖರೀದಿಯಲ್ಲಿ ಅವ್ಯವಹಾರ ಮಾಡಿ ದ್ರೋಹ ಬಗೆದಿದ್ದಾರೆ. ಇದನ್ನು ಇಡೀ ದೇಶ ಖಂಡಿಸಬೇಕು. ಜನ ಕೊಟ್ಟಿರುವ ದೇಣಿಗೆಯನ್ನು ಹಿಂದಿರುಗಿಸಬೇಕು. ಈ ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಆಗ್ರಹಿಸುತ್ತೇವೆ.

100 ನಾಟೌಟ್ ಪ್ರತಿಭಟನೆಯಲ್ಲಿನ ಮಾತು:

ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ಜನಸಾಮಾನ್ಯರ ಕಾರ್ಯಕ್ರಮ. ಇದು ರೈತರು, ವರ್ತಕರ ಕಾರ್ಯಕ್ರಮ. ಹೈರಾಣಾಗಿರುವ ಜನರ ಬದುಕು ಬದಲಿಸಲು ಈ ಹೋರಾಟ. 35 ರೂ ಬೆಲೆಯ ಪೆಟ್ರೋಲ್ ಗೆ 65 ರೂ. ತೆರಿಗೆ ಸೇರಿಸಲಾಗಿದೆ. ಎಲ್ಲ ಪಕ್ಷದವರೂ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸಿಕ್ಕಿದೆ. ಕೆಲವು ಕಡೆ ಬೆಲೆ ವ್ಯತ್ಯಾಸ ಕುರಿತು ಜನರಿಗೆ ಅರಿವು ಮೂಡಿಸಲು, ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡವರಿಗೆ 50 ರುಪಾಯಿ ನೀಡಿ ಪ್ರತಿಭಟಿಸುತ್ತಿದ್ದಾರೆ. ಕೆಲವರು ಸಿಹಿ ಹಂಚಿದರೆ, ಮತ್ತೆ ಕೆಲವರು ಜಾಗಟೆ ಬಾರಿಸಿ ಪ್ರತಿಭಟಿಸಿದ್ದಾರೆ.

ಪೆಟ್ರೋಲ್ ಬೆಲೆ 52 ರುಪಾಯಿ ಆದಾಗ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಸೈಕಲ್ ತುಳಿದಿದ್ದ ಫೋಟೋ ನಮ್ಮ ಬಳಿ ಇದೆ. ಅದನ್ನು ಈಗ ಅವರಿಗೆ ಗಿಫ್ಟ್ ಆಗಿ ಕಳುಹಿಸಿ ಕೊಡುತ್ತೇನೆ. ಶೋಭಾ ಕರಂದ್ಲಾಜೆ ಅವರು ಗ್ಯಾಸ್ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತುಕೊಂಡು ಹೋರಾಟ ಮಾಡಿದ್ದೇ ಮಾಡಿದ್ದು. ಈಗ ಅವರು ಏನು ಹೇಳುತ್ತಾರೆ?

ಮಂಡ್ಯ ಸಿಎಂ ಯಡಿಯೂರಪ್ಪನವರು ಹುಟ್ಟಿದ ಜಿಲ್ಲೆಯಾದ ಕಾರಣ ನಾನು ಅಂತಿಮ ದಿನದ ಪ್ರತಿಭಟನೆಗೆಂದಯ ಇಲ್ಲಿಗೇ ಬಂದಿದ್ದೇನೆ. ಇಂಧನ ಬೆಲೆ ಏರಿಕೆಯಿಂದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ದಿನಬಳಕೆ ವಸ್ತುಗಳಿಂದ ಹಿಡಿದು ಕಬ್ಬಿಣ, ಸಿಮೆಂಟ್, ರಸಗೊಬ್ಬರ ಎಲ್ಲದರ ಬೆಲೆಯೂ ಹೆಚ್ಚಾಗಿದೆ.

ಹೀಗೆ ಬೆಲೆ ಏರಿಕೆ ಮಾಡಿದವರು ಜನರ ಆದಾಯವನ್ನು ಮಾತ್ರ ಹೆಚ್ಚಳ ಮಾಡಲಿಲ್ಲ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನರ ಜೇಬನ್ನು ಪಿಕ್ ಪಾಕೆಟ್ ಮಾಡುವ ಸರ್ಕಾರಗಳಾಗಿವೆ. ನೆರೆ ರಾಷ್ಟ್ರಗಳಂತೆ ನಮ್ಮ ದೇಶದ ಸರ್ಕಾರವೂ ತೆರಿಗೆ ಕಡಿಮೆ ಮಾಡಿ ಜನರ ಹೊರೆ ಇಳಿಸಬೇಕು. ಸರ್ಕಾರ ಜನರ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಳ್ಳದೇ ಈ ರೀತಿ ಬೆಲೆ ಏರಿಕೆ ಮಾಡುತ್ತಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ.

ಮಂಡ್ಯದಲ್ಲಿ ಇಂದು 5ನೇ ದಿನದ 100 ನಾಟ್ ಔಟ್ ಪ್ರತಿಭಟನಾ ಆಂದೋಲನ ನಡೆಸಲಾಗುತ್ತಿದೆ. ಒಟ್ಟು 5 ಸಾವಿರ ಕಡೆಗಳಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ನಿನ್ನೆ ವೇಳೆಗೆ 4300ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆ ಮಾಡಲಾಗಿತ್ತು, ಇಂದು 5 ಸಾವಿರ ಗಡಿ ದಾಟಲಿದೆ.

ಈ ಪ್ರತಿಭಟನೆಗೆ ಸಹಕರಿಸಿದ ಸಾರ್ವಜನಿಕರು, ನಾಯಕರು ಜಿಲ್ಲಾ, ತಾಲೂಕು, ಹೋಬಳಿ, ಪಂಚಾಯಿತಿ ಮಟ್ಟದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ತಿಂಗಳು 17 ಬಾರಿ ಏರಿಕೆ ಮಾಡಿದ್ದಾರೆ. ಈ ವರ್ಷ ಒಟ್ಟು 51 ಬಾರಿ ಹೆಚ್ಚಳ ಮಾಡಿದ್ದಾರೆ. ಮಾರ್ಚ್, ಏಪ್ರಿಲ್ ನಲ್ಲಿ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡಿರಲಿಲ್ಲ.

ಬಿಜೆಪಿ ಕಲಹದ ಬಗ್ಗೆ ಮಾತನಾಡುವುದಿಲ್ಲ:

ಈಶ್ವರಪ್ಪನವರ ಹೇಳಿಕೆ ಬಗ್ಗೆ ನಾನ್ಯಾಕೆ ಮಾತನಾಡಲಿ. ಅವರ ಪಕ್ಷದ ಕತೆ, ಅವರ ಪರಿಸ್ಥಿತಿಯೇ ದೊಡ್ಡ ಕತೆಯಾಗಿದೆ. ಅದರ ಬಗ್ಗೆ ವ್ಯಾಖ್ಯಾನ ಮಾಡಲೂ ಸಾಧ್ಯವಿಲ್ಲ. ನಾಯಕತ್ವ ಬದಲಾವಣೆ ಅವರ ಪಕ್ಷದ ವಿಚಾರ, ನಾವು ಅದರ ಬಗ್ಗೆ ಮಾತನಾಡುವುದಿಲ್ಲ.’

, , , ,

Leave a Reply

Your email address will not be published. Required fields are marked *