ಕಾಶ್ಮೀರಿ ಪಂಡಿತನ ಹತ್ಯೆ ಖಂಡಿಸಿ ನಿರಂತರ ಪ್ರತಿಭಟನೆ, ಕೇಂದ್ರದ ವಿರುದ್ಧ ಘೋಷಣೆ

ಶ್ರೀನಗರ: ಮೇ 13 (ಉದಯಕಾಲ ನ್ಯೂಸ್) ಕಾಶ್ಮೀರಿ  ಪಂಡಿತರ ಸಮುದಾಯದ 36 ವರ್ಷದ ಸರ್ಕಾರಿ ನೌಕರನ ಹತ್ಯೆಯ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ಸುರಕ್ಷತೆಗೆ ಆಗ್ರಹಿಸಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಿನ್ನೆ ಸಂಜೆಯಿಂದ ಪ್ರತಿಭಟನೆಗಳನ್ನ ನಡೆಸುತ್ತಿದ್ದಾರೆ.

ಪ್ರತಿಭಟನಾಕಾರರ ಗುಂಪು ಶ್ರೀನಗರ ವಿಮಾನ ನಿಲ್ದಾಣದತ್ತ ಸಾಗಲು ಪ್ರಯತ್ನಿಸಿದಾಗ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಮತ್ತು ಲಾಠಿ ಚಾರ್ಜ್ ಮಾಡಿದರು. ಹಲವಾರು ಪ್ರದೇಶಗಳಲ್ಲಿ ಸಮುದಾಯದ ಸದಸ್ಯರು ತಮ್ಮ ಶಿಬಿರಗಳನ್ನು ತೊರೆದು ರಸ್ತೆಗಳನ್ನು ತಡೆದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೋಪಗೊಂಡ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿರುದ್ಧವೂ ಘೋಷಣೆಗಳನ್ನು ಎತ್ತಿದರು. ಹಲವೆಡೆ ಕ್ಯಾಂಡಲ್‌ಲೈಟ್‌ ಮೆರವಣಿಗೆ ನಡೆದಿದೆ.

“ನಾವು ಈ ನಾಚಿಕೆಗೇಡಿನ ಘಟನೆಯನ್ನು ಖಂಡಿಸುತ್ತೇವೆ. ನಾವು ಸರ್ಕಾರವನ್ನು ಕೇಳುತ್ತೇವೆ, ಇದು ಪುನರ್ವಸತಿಯೇ? ಅವರು ಇಲ್ಲಿಗೆ ನಮ್ಮನ್ನು ಕೊಲ್ಲಲು ಕರೆತಂದಿದ್ದಾ? ಇಲ್ಲಿ ಯಾವುದೇ ಭದ್ರತೆ ಇಲ್ಲ,” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾವು ಕೆಲಸ ಮಾಡಲು ಬಂದಿದ್ದೇವೆ, ನಮಗೆ ಬೇರೆ ಯಾವುದಕ್ಕೂ ಸಂಬಂಧವಿಲ್ಲ, ಅವರು ನಮ್ಮನ್ನು ಏಕೆ ಕೊಲ್ಲುತ್ತಿದ್ದಾರೆ? ನಮ್ಮ ಅಪರಾಧ ಏನು ಎಂದು ನಮಗೆ ತಿಳಿಸಿ. ನಮ್ಮನ್ನು ರಕ್ಷಿಸುವಲ್ಲಿ  ಆಡಳಿತ ವಿಫಲವಾಗಿದೆ” ಎಂದು ಕಿಡಿಕಾರಿದರು.

ಪ್ರತಿಭಟನಾ ನಿರತ ಕಾಶ್ಮೀರಿ ಪಂಡಿತರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಬುದ್ಗಾಮ್‌ಗೆ ಭೇಟಿ ನೀಡುವುದನ್ನು ತಡೆಯಲು ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿ ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಸಹ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಅವರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ದೇಶಿತ ದಾಳಿಯಂತೆ ಕಂಡುಬಂದ ಪ್ರಕರಣದಲ್ಲಿ ಭಯೋತ್ಪಾದಕರು ನಿನ್ನೆ ಬುದ್ಗಾಮ್ ಜಿಲ್ಲೆಯ ಚದೂರ ಗ್ರಾಮದ ತಹಸೀಲ್ದಾರ್ ಕಚೇರಿಗೆ ನುಗ್ಗಿ ರಾಹುಲ್ ಭಟ್ ಮೇಲೆ ಗುಂಡು ಹಾರಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಲು ವಿಶೇಷ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡ ನಂತರ 36 ವರ್ಷದ ರಾಹುಲ್ ಭಟ್ ಅವರು ಕಳೆದ 10 ವರ್ಷಗಳಿಂದ ಬುದ್ಗಾಮ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಜಮ್ಮುವಿಗೆ ಕೊಂಡೊಯ್ಯಲಾಯಿತು. ಕಳೆದ ಆರು ತಿಂಗಳಲ್ಲಿ ಹತ್ಯೆಯಾದ ಮೂರನೇ ಕಾಶ್ಮೀರಿ ಪಂಡಿತ ರಾಹುಲ್ ಭಟ್.

2010 ರಲ್ಲಿ ಬಿಡುಗಡೆಯಾದ ವಿಶೇಷ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳನ್ನು ನೀಡಿದ ನಂತರ ನಾಲ್ಕು ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಾಶ್ಮೀರದ ವಿವಿಧ ಭಾಗಗಳಲ್ಲಿ ಟ್ರಾನ್ಸಿಟ್ ಕ್ಯಾಂಪ್‌ಗಳಲ್ಲಿ ವಾಸಿಸುತ್ತಿದ್ದಾರೆ

,

Leave a Reply

Your email address will not be published. Required fields are marked *