ಹಿರಿಯ ರಾಜಕಾರಣಿ ಸಿ.ಎಂ.ಉದಾಸಿ ನಿಧನ; ಗಣ್ಯರ ಕಂಬನಿ

ಹಿರಿಯ ರಾಜಕಾರಣಿ ಸಿ.ಎಂ.ಉದಾಸಿ ನಿಧನ; ಗಣ್ಯರ ಕಂಬನಿ

ಬೆಂಗಳೂರು, ಜೂ 8  ಹಾನಗಲ್‌ ಶಾಸಕ, ಮಾಜಿ ಸಚಿವ ಸಿ.ಎಂ.ಉದಾಸಿ ಮಂಗಳವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ರಾಜ್ಯದ ಗಣ್ಯರು ಕಂಬನಿ ಮಿಡಿದಿದ್ದಾರೆ.

ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 85 ವರ್ಷದ ಉದಾಸಿ, ಮೇ 25ರಂದು ನಗರದ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದರು.

1983ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಉದಾಸಿ, 1985ರಲ್ಲಿ ಬಿಜೆಪಿ, 1994ರಲ್ಲಿ ಜನತಾದಳದಿಂದ ಆಯ್ಕೆಯಾಗಿದ್ದರು. ನಂತರ ಮತ್ತೊಮ್ಮೆ ಬಿಜೆಪಿ ಸೇರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನಿಕಟವರ್ತಿಯಾಗಿದ್ದರು. 2004, 2008, 2018ರಲ್ಲಿ ಬಿಜೆಪಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು.

ಉದಾಸಿ ಅವರ ನಿಧನಕ್ಕೆ ರಾಜ್ಯದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮೂಲಕ , “ಹಾನಗಲ್ ಕ್ಷೇತ್ರದ ಶಾಸಕರು,ಮಾಜಿ ಸಚಿವರು, ನನ್ನ ದಶಕಗಳ ಒಡನಾಡಿ, ಆತ್ಮೀಯರಾದ ಸಿ.ಎಂ.ಉದಾಸಿ ಇನ್ನಿಲ್ಲ ಎನ್ನುವ ಸುದ್ದಿ ಅತೀವ ಆಘಾತವನ್ನು ಉಂಟುಮಾಡಿದೆ. ನನ್ನ ರಾಜಕೀಯ ಜೀವನದುದ್ದಕ್ಕೂ ಜೊತೆಗಿದ್ದು, ಏಳುಬೀಳುಗಳನ್ನು ಜೊತೆಯಾಗಿ ಎದುರಿಸಿದ್ದೆವು. ಇಂದು ಅವರು ನಮ್ಮಿಂದ ದೂರವಾಗಿರುವುದು, ನನ್ನ ಸಹೋದರನನ್ನು ನಾನು ಕಳೆದುಕೊಂಡಂತಾಗಿದೆ” ಎಂದಿದ್ದಾರೆ.

“ಅವರ ಆತ್ಮಕ್ಕೆ ದೇವರು ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರು, ಬಂಧುಗಳು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೋರುತ್ತಾ, ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಓಂ ಶಾಂತಿ” ಎಂದಿದ್ದಾರೆ.

ವಸತಿ ಸಚಿವ ವಿ.ಸೋಮಣ್ಣ, ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿಯಾಗಿದ್ದ ಉದಾಸಿ ಉತ್ತಮ ಸಂಸದೀಯ ಪಟುವಾಗಿದ್ದರು. ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿದ್ದರು. ಅವರ ನಿಧನದಿಂದ ರಾಜ್ಯ ಒಬ್ಬ ಶ್ರೇಷ್ಠ ಹಾಗೂ ಉತ್ಕೃಷ್ಟ ಗುಣಗಳನ್ನು ಹೊಂದಿದ್ದ ರಾಜಕೀಯ ಪಟುವನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಸಚಿವ ಜಗದೀಶ ಶೆಟ್ಟರ್, ಸಿ ಎಂ ಉದಾಸಿ ಅವರು ಲೋಕೋಪಯೋಗಿ ಇಲಾಖಾ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ವಿಶೇಷವಾಗಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಮತ್ತು ಸುಧಾರಣೆಗೆ ಕೈಗೊಂಡ ಕ್ರಮಗಳು ಇಂದಿಗೂ ಮಾದರಿಯಾಗಿವೆ ಎಂದು ಸ್ಮರಿಸಿದ್ದಾರೆ.

ಸಚಿವ ಡಾ. ನಾರಾಯಣಗೌಡ, ಸಿ.ಎಂ. ಉದಾಸಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕರಾಗಿದ್ದರು. ಅತ್ಯಂತ ಸರಳ, ಸಜ್ಜನ ರಾಜಕಾರಣಿ, ಲೋಕೋಪಯೋಗಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರೈತ ಕುಟುಂಬದಿಂದ ಬಂದ ಅವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದರು. ಅತ್ಯಂತ ಸೌಮ್ಯ ಸ್ವಭಾವದ ಸಿ.ಎಂ. ಉದಾಸಿ ಅವರು 7 ಭಾಷೆಗಳನ್ನು ಸುಲಿತವಾಗಿ ಮಾತನಾಡುತ್ತಿದ್ದುದು ಅವರ ಪಾಂಡಿತ್ಯಕ್ಕೆ ಸಾಕ್ಷಿ ಎಂದಿದ್ದಾರೆ.

ಸಚಿವ ಬಿ.ಸಿ.ಪಾಟಿಲ್, ಹಾವೇರಿ ಜಿಲ್ಲೆಯ ಹಾಗೂ ಬಿಜೆಪಿ ಪಕ್ಷದ ಹಿರಿಯ ಸರಳ ಸಜ್ಜನಿಕೆಯ ರಾಜಕಾರಣಿ ಸಿ.ಎಂ.ಉದಾಸಿ ಅವರ ನಿಧನ ರಾಜ್ಯಕ್ಕೆ ತುಂಬಲಾಗದ ನಷ್ಟವಾಗಿದೆ.ಹಾನಗಲ್ಲಿನಲ್ಲಿ ಅಣ್ಣಾ ಎಂದೇಸಂಬೋಧಿಸಲ್ಪಡುತ್ತಿದ್ದ ರೈತಾಪಿ ಕುಟುಂಬದಿಂದ ಬಂದಿದ್ದಂತಹ ಉದಾಸಿಯವರು ಉತ್ತಮ ರಾಜಕಾರಣಿಯಷ್ಟೇ ಅಲ್ಲದೇ ಮಾರ್ಗದರ್ಶಕರೂ ಸ್ನೇಹಶೀಲರೂ ಆಗಿದ್ದರು ಎಂದು ಸ್ಮರಿಸಿದ್ದಾರೆ.

ಸಚಿವ ಪ್ರಭು ಚವ್ಹಾಣ್, ರಾಜ್ಯ ರಾಜಕಾರಣದಲ್ಲಿ ವಿಶೇಷ ಛಾಪನ್ನು ಮೂಡಿಸಿದ್ದ ಸಿ.ಎಂ ಉದಾಸಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗೆಗಳ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದವರು. ಪಕ್ಷ ಹಿರಿಯ ಮುತ್ಸದ್ದಿ ರಾಜಕಾರಣಿ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದ ಉದಾಸಿಯವರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಸಚಿವ ಅರವಿಂದ ಲಿಂಬಾವಳಿ, ಸಿಎಂ ಉದಾಸಿ ಅವರು ಉತ್ತರ ಕರ್ನಾಟಕದ ಅತ್ಯಂತ ಪ್ರಬಲ ಜನ ನಾಯಕರಾಗಿದ್ದರು. ಹಾವೇರಿ ಜಿಲ್ಲೆ, ಹಾನಗಲ್ಲಿನ ಅಣ್ಣಾ ಎಂದೆ ಪ್ರಖ್ಯಾತರಾಗಿದ್ದ ಸಿ ಎಂ ಉದಾಸಿ, ನಾವು ಕಂಡ ಅತ್ಯಂತ ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಲೋಕೋಪಯೋಗಿ ಸಚಿವ ರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದ ಅವರು, ಇಳಿವಯಸ್ಸಿನಲ್ಲಿಯೂ
ಶಾಸಕರಾಗಿ ತಮ್ಮ ಕ್ಷೇತ್ರದ ಜನಹಿತಕ್ಕಾಗಿ ದುಡಿಯುತ್ತಿದ್ದರು. ರೈತಾಪಿ ಕುಟುಂಬದಿಂದ ಬಂದ ಅವರು ಅಂತಃಕರಣ ಉಳ್ಳ ವ್ಯಕ್ತಿಯಾಗಿದ್ದರು ಎಂದು ಶ್ಲಾಘಿಸಿದ್ದಾರೆ.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ತಮ್ಮೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಸಿ.ಎಂ.ಉದಾಸಿಯವರು ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ಜನತಾ ಪರಿವಾರದ ನಾಯಕರಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದರು. ಅವರ ನಿಧನದಿಂದ ಜನತಾ ಪರಿವಾರದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಸಿ.ಎಂ.ಉದಾಸಿಯವರ ನಿಧನದಿಂದ ಕನ್ನಡ ನಾಡಿಗೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವುದಾಗಿ ಶ್ರೀ ಬಸವರಾಜ ಹೊರಟ್ಟಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಉದಾಸಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಅವರೊಬ್ಬ ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಮಿತಭಾಷಿ ಹಾಗೂ ಸಾತ್ವಿಕ ಮನೋಭಾವದವರು.1983 ರಲ್ಲಿ ಶಾಸನಸಭೆ ಪ್ರವೇಶಿಸಿದ ಅವರು ಆರು ಬಾರಿ ಶಾಸಕರಾಗಿದ್ದರು. ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜನಸೇವೆಗೆ ಸದಾ ತುಡಿಯುತ್ತಿದ್ದ ಅವರು ಕಿರಿಯರಿಗೆ ಮಾರ್ಗದರ್ಶಕರು, ಮಾದರಿಯೂ ಆಗಿದ್ದರು ಎಂದಿದ್ದಾರೆ.

, , , ,

Leave a Reply

Your email address will not be published. Required fields are marked *