ಎಸ್.ಸಿ.ಪಿ/ ಟಿ.ಎಸ್.ಪಿ ಅನುದಾನ ಬಳಕೆ ಮಾಡದ ಅಧಿಕಾರಿಗಳನ್ನು ಜೈಲಿಗಟ್ಟಿ- ಪ್ರಿಯಾಂಕ್ ಖರ್ಗೆ ಆಗ್ರಹ

ಎಸ್.ಸಿ.ಪಿ/ ಟಿ.ಎಸ್.ಪಿ ಅನುದಾನ ಬಳಕೆ ಮಾಡದ ಅಧಿಕಾರಿಗಳನ್ನು ಜೈಲಿಗಟ್ಟಿ- ಪ್ರಿಯಾ‌ಂಕ್ ಖರ್ಗೆ ಆಗ್ರಹ

ಕಲಬುರಗಿ, ಜೂ.23  ಎಸ್ ಸಿ ಪಿ / ಟಿ ಎಸ್ ಪಿ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಆಯಾ ವರ್ಷದಲ್ಲಿಯೇ ಬಳಕೆ ಮಾಡದ ಅಧಿಕಾರಿಗಳನ್ನು ಜೈಲಿಗೆ ಕಳಿಸಿ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಕಲಬುರಗಿ ವಿವಿಯ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ‌ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ‌ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ ಮೂರು ವರ್ಷದ ಹಿಂದೆ ಮಾನ್ಯ ಲೋಕಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಬಿಡುಗಡೆಯಾದ ಎಸ್ ಸಿ ಪಿ / ಟಿ ಎಸ್ ಪಿ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನ ಬಳಕೆ ಮಾಡದೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನೇ ಪೂರ್ಣಗೊಳಿಸದ ಕೆಬಿಜೆಎನ್ ಎಲ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಕಾನೂನು ಪ್ರಕಾರ ಆಯಾ ವರ್ಷದ ಬಿಡುಗಡೆಯಾದ ಅನುದಾನ ಬಳಕೆ ಮಾಡದ ಅಧಿಕಾರಿಗಳನ್ನು ಜೈಲಿಗೆ ಕಳಿಸಲು ಅವಕಾಶವಿದೆ. ಒಂದಿಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳಿಸಿ ಜಿಲ್ಲೆಯಲ್ಲಿ ಹೊಸ ಇತಿಹಾಸ ನಿರ್ಮಿಸಿ ಎಂದು ಸಚಿವರನ್ನು ಆಗ್ರಹಿಸಿದರು.
ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಟೆಂಡರ್ ಆರಂಭಿಸಿಲ್ಲ.ಕಾಮಗಾರಿಗೆ ಅಬ್ಜೆಕ್ಷನ್ ಬಂದಿದ್ದರಿಂದ ಮುಂದಿನ ಪ್ರಕ್ರಿಯೆಗಾಗಿ ನಿರ್ದೇಶನ ನೀಡಲು ಎಂ.ಡಿ. ಅವರಿಗೆ ಪತ್ರ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಗ ಮಧ್ಯೆ ಪ್ರವೇಶಿಸಿದ ಸಚಿವರು ಈ ಕೂಡಲೇ, ಟೆಂಡರ್ ಆರಂಭಿಸಿ ಉದ್ದೇಶಿತ ಕಾಮಗಾರಿಗಳನ್ನು ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಲ್ಲಾಮಾರಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು ಈ ಹಿಂದಿನ‌ ಕೆಡಿಪಿ ಸಭೆ ನಡೆಸಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಈ ಕುರಿತು 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದರು. ಈ ಕುರಿತು ವರದಿ ಏನಾಯಿತು ? ಜೊತೆಗೆ ಈ ಮುನ್ನ ವಿಧಾನಸಭೆಯ ಅಧಿವೇಶನದಲ್ಲಿ ನಾನು ಹಾಗೂ ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಅವರು ಪ್ರಶ್ನಿಸಿದಾಗ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸಚಿವರು ಉತ್ತರಿಸಿದ್ದರು. ಆದರೂ ತನಿಖೆ ಏನಾಯಿತು? ಎಂದು ಖರ್ಗೆ ಅವರು ಸಭೆಯಲ್ಲಿ ಪ್ರಶ್ನಿಸಿದರು.
ಹಿರಿಯ ಅಧಿಕಾರಿಯ ಅನುಪಸ್ಥಿತಿಯಲ್ಲಿ ಸಭೆಗೆ ಉತ್ತರಿಸಿದ ಕಿರಿಯ ಇಂಜಿನಿಯರ್ 2018 ರಲ್ಲಿ ಪ್ರಾರಂಭವಾದ ಯೋಜನೆಗೆ ಒಟ್ಟು ರೂ 124 ಕೋಟಿ ನಿಗದಿಯಾಗಿದೆ. ಸದ್ಯ 90 ಕೋಟಿ ರೂ ಅನುದಾನ ಖರ್ಚಾಗಿ ಶೇ 90 ಕಾಮಗಾರಿ ಮುಗಿದಿದ್ದು ಮುಂದಿನ ನಾಲ್ಕೈದು ತಿಂಗಳಲ್ಲಿ ಕೆಲಸ ಮುಗಿಸುವುದಾಗಿ ಹೇಳಿದರು. ಆಗ ಮಧ್ಯೆ ಪ್ರವೇಶಿಸಿದ ಎಂ ಎಲ್ ಸಿ ಸುನಿಲ್ ವಲ್ಯಾಪುರೆ, ಈ ಯೋಜನೆ ಪ್ರಾರಂಭವಾದ‌ ದಿನದಿಂದಲೂ ಕಳಪೆಯಾಗಿದೆ. ಈ ಕುರಿತು ಸಮಗ್ರ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸಬೇಕು ಎಂದು ಆಗ್ರಹಿಸಿದರು. ಆಗ ಉತ್ತರಿಸಿದ, ಸಚಿವರು ಹಿರಿಯ ಅಧಿಕಾರಿ ಸಭೆಗೆ ಬಂದಿಲ್ಲ ಅವರನ್ನು ಕರೆಸಲಾಗುತ್ತಿದೆ. ಕೆಡಿಪಿ ಸಭೆ ಮುಗಿದ ನಂತರ ಶಾಸಕರು ಅಧಿಕಾರಿಗಳ ಸಭೆಯಲ್ಲಿ ಇಂದೇ ಒಂದು‌ ನಿರ್ಧಾರಕ್ಕೆ ಬರಲಾಗುವುದು ಎಂದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಸರ್ಕಾರದ ಸಭೆ ಸಮಾರಂಭಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಪರಿಗಣಿಸಲಾಗುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ನಡೆದ ಸಮಾರಂಭದಲ್ಲಿ ಕಲಬುರಗಿ ಉತ್ತರ ಶಾಸಕರಾದ ಕನೀಜ್ ಫಾತೀಮಾ ಅವರ ಹೆಸರನ್ನೇ ಕೈಬಿಡಲಾಗಿದೆ. ಮೊನ್ನೆ ನಡೆದ ಕೋವಿಡ್ ಲಸಿಕೆ ಸಮಾರಂಭದಲ್ಲಿ ಶಾಸಕ ಎಂ ವೈ ಪಾಟೀಲ್ ಅವರನ್ನು ಕರೆದಿಲ್ಲ. ಅಚ್ಚರಿಯೆಂದರೆ, ಅಫಜಲ್ ಪುರದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಖಾಸಗಿ ತೋಟದಲ್ಲಿ ನಡೆಸಲಾಗಿದೆ ಎಂದು ಸಚಿವರ ಗಮನ ಸೆಳೆದರು.
ಇಂದಿನ ಕೆಡಿಪಿ ಸಭೆಯಲ್ಲಿ ವೇದಿಕೆಯ ಮೇಲೆ ಸರ್ಕಾರದ ಸಚೇತಕ ಹಾಗೂ ಶಾಸಕರಾದ ಅಜಯ್ ಸಿಂಗ್ ಅವರ ಆಸನ ಹಾಕಿಲ್ಲ ಇದು ಶಿಷ್ಟಾಚಾರದ ಉಲ್ಲಂಘನೆ ಅಲ್ಲವೇ ? ನಾವೂ ಕೂಡಾ ಈ ಹಿಂದೆ ಅಧಿಕಾರದಲ್ಲಿ ಇದ್ದವರೇ ಆದರೆ ನಾವು ಈ ರೀತಿ ಮಾಡಿಲ್ಲ. ಕೇವಲ ಒಂದೇ ಪಕ್ಷದ ಶಾಸಕರನ್ನು ಪರಿಗಣಿಸಿದರೆ ಹೇಗೆ ಎಂದು ಖರ್ಗೆ ಅಸಮಧಾನ ವ್ಯಕ್ತಪಡಿಸಿದರು.
ಆಗ ಉತ್ತರಿಸಿದ ನಿರಾಣಿ ಅವರು ಅಚಾತುರ್ಯ ನಡೆದಿದೆ. ಶಿಷ್ಟಾಚಾರ ಪಾಲನೆಗೆ ಕಟ್ಟುನಿಟ್ಟಿನ ಆದೇಶ ನೀಡುತ್ತಿದ್ದೇನೆ ಮುಂದೆ ಲೋಪ ಕಂಡುಬಂದರೆ, ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ. ನನ್ನ ಪರವಾಗಿ ಹಾಗೂ ಜಿಲ್ಲಾಡಳಿತದ ಪರವಾಗಿ ಕ್ಷಮೆಯಾಚಿಸುತ್ತೇವೆ. ದಯಮಾಡಿ ಅಜಯ್ ಸಿಂಗ್ ಅವರು ವೇದಿಕೆಯ ಮೇಲೆ ಬರಬೇಕು ಎಂದು ಆಹ್ವಾನಿಸಿದರು. ಆದರೂ ಕೂಡಾ ವೇದಿಕೆಗೆ ಹೋಗಲು ನಿರಾಕರಿಸಿದ ಅಜಯ್ ಸಿಂಗ್ ಅವರನ್ನು ಸಚಿವರು ಮನವೊಲಿಸಿ ವೇದಿಕೆಗೆ ಕರೆಸಿಕೊಂಡರು.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ರೈತರ ಮೇಲೆ ಸುಳ್ಳು ಕೇಸು ದಾಖಲಾಗಿದೆ ಎಂದು ಸಚಿವರ ಗಮನ ಸೆಳೆದ ಶಾಸಕರು ಚಿತ್ತಾಪುರ ತಾಲೂಕಿನಲ್ಲಿ ಲಾಕ್ ಡೌನ್ ತೆಗೆದುಹಾಕಿದ್ದರ ಉದ್ಘಾಟನೆ ಸಮಾರಂಭ ನಡೆಸಿದ್ದನ್ನು ವಿರೋಧಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ಕಳೆದ ವರ್ಷ ಸಂಸದರ ಭೇಟಿಯ ವೇಳೆ ಪ್ರಶ್ನಿಸಿದ್ದ ರೈತರ ಮೇಲೆ ದೂರು ದಾಖಲಾಗಿದೆ. ಈ ಕುರಿತು ನಾನು ಹಿಂದಿನ ಸಭೆಯಲ್ಲೇ ಪ್ರಶ್ನೆ ಕೇಳಿದ್ದೆ ಎಂದ ಅವರು ಕೇಸ್ ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಸಾರ್ವಜನಿಕರ ಮೇಲೆ ನಿಯಮ ಮೀರಿ 15 % ಕರ ಹೇರಿದ್ದು ಸರಿಯಲ್ಲ. ಈ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಕೊರೋನಾದ ಸಮಯದಲ್ಲಿ ಸಾರ್ವಜನಿಕರ ಜೀವನ‌ ದುರ್ಬರವಾಗಿದೆ. ಉಪಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ‌ ಸಂದರ್ಭದಲ್ಲಿ ಕರ ಹೆಚ್ಚಿಸಿರುವುದು ಸರಿಯಲ್ಲ. 2020-21 ರ ಸಾಲಿನಲ್ಲಿ ವ್ಯಕ್ತಿಯೊಬ್ಬರು 9631 ರೂ. ಕಟ್ಟಿದ್ದರೆ, 2021-22 ರ ಸಾಲಿಗೆ ಅವರು 26,212 ರೂ. ಕಟ್ಟಿದ್ದಾರೆ. ಇದು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ನಿಯಮಗಳ ಪ್ರಕಾರ ಶೇ 5 ಕ್ಕಿಂತ ಜಾಸ್ತಿ ತೆರಿಗೆ ಹೆಚ್ಚಿಸುವಂತಿಲ್ಲ. ಆದರೂ ಇಲ್ಲಿ ನಡೆಯುತ್ತಿರುವುದು ಏನು? ಎಂದರು.

ಕಲಬುರಗಿ ನಗರದ ತರಕಾರಿ ಮಾರುಕಟ್ಟೆ ಸಂಕೀರ್ಣ ಹಳೆಯದಾಗಿದ್ದು ಅದನ್ನು ಡೆಮಾಲಿಷ್ ಮಾಡಲು ಮಹಾನಗರ ಪಾಲಿಕೆ ಮುಂದಾಗಿದ್ದು ಸುಮಾರು 300 ವ್ಯಾಪಾರಿಗಳನ್ನು ಅಲ್ಲಿಂದ ಖಾಲಿ ಮಾಡಿಸಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡದೇ ಅವರನ್ನು ಅಲ್ಲಿಂದ ಖಾಲಿ ಮಾಡಿಸಿದ್ದು ಸರಿಯಾದ ಕ್ರಮವಲ್ಲ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

 

, ,

Leave a Reply

Your email address will not be published. Required fields are marked *