ಕಲಬುರ್ಗಿ: ಸಿದ್ದರಾಮಯ್ಯನವರ ಕುರ್ಚಿ ಯಾವಾಗ ಬಲ ಕಳಕೊಳ್ಳುತ್ತದೋ, ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತಿದೆ ಅನಿಸಿದಾಗ, ಅಸ್ಥಿರತೆ ಕಾಡಿದಾಗಲೆಲ್ಲ ಸಮಾವೇಶಗಳನ್ನು ಅವರು ನಿರಂತರವಾಗಿ ಮಾಡುತ್ತ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರಿನ ಕಾಂಗ್ರೆಸ್ ಸಾಧನಾ ಸಮಾವೇಶ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಸಿದ್ದರಾಮಯ್ಯನವರು ಎಂದರೆ ಸಮಾವೇಶ; ಸಮಾವೇಶ ಎಂದರೆ ಸಿದ್ದರಾಮಯ್ಯನವರು. ಸಿದ್ದರಾಮಯ್ಯ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅಹಿಂದ ಸಮುದಾಯಗಳನ್ನು ಮುಂದೆ ಇಡುತ್ತಾರೆ. ಆ ಸಮುದಾಯಗಳನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂಥ ಸಮಾವೇಶ ಮಾಡಿ, ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಬೆದರಿಕೆ ಒಡ್ಡುವ ಕುತಂತ್ರಗಳನ್ನು ಮಾಡುತ್ತಾರೆಯೇ ವಿನಾ ರಾಜ್ಯದ ಮುಖ್ಯಮಂತ್ರಿಯಾಗಿ ಅವರ ಎರಡೂವರೆ ವರ್ಷದ ಆಡಳಿತದಲ್ಲಿ ಸಾಧನೆ ಶೂನ್ಯ ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಸಾಧನೆ ಮಾಡಿದ್ದರೆ ರಾಜ್ಯದ ಉಸ್ತುವಾರಿ ಸುರ್ಜೇವಾಲಾ ಅವರು ಪದೇಪದೇ ಬೆಂಗಳೂರಿಗೆ ಬಂದು ಶಾಸಕರನ್ನು ಮಾತನಾಡಿಸುವ ಮತ್ತು ಅವರ ಅಸಮಾಧಾನ ಹೋಗಲಾಡಿಸುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ. ಶಾಸಕರ ಅಸಮಾಧಾನ ಅರ್ಥ ಮಾಡಿಕೊಳ್ಳಲು ಮತ್ತು ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಯಾರನ್ನು ಮಾಡಬೇಕೆಂದು ಶಾಸಕರ ಅಂತರಾಳದಲ್ಲಿ ಏನಿದೆ ಎಂದು ತಿಳಿಯಲು ಸುರ್ಜೇವಾಲಾ ಅವರು ಪದೇಪದೇ ಬರುತ್ತಿದ್ದಾರೆ. ಸಿದ್ದರಾಮಯ್ಯನವರ ಮುಖ್ಯಮಂತ್ರಿ ಗಾದಿ ವಿಷಯದಲ್ಲಿ ಅನಿಶ್ಚಿತತೆ ಕಾಡುತ್ತಿರುವ ಕಾರಣ ಈ ರೀತಿ ಸಮಾವೇಶ ಮಾಡುವ ಮೂಲಕ ಹೈಕಮಾಂಡ್‍ಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.