ಇದು ಇನ್ನೂ ಮುಂದುವರಿಯಬೇಕಾ?

ಫೇಸ್ಬುಕ್ ಲೇಖನ

ಆಧುನಿಕ ಭಾರತದ ಪ್ರಜಾಪ್ರಭುತ್ವಕ್ಕೆ ಹೊರೆಯಾಗುತ್ತಿರುವ ರಾಜಕೀಯ ಪಕ್ಷಗಳ ಸಾರ್ವಜನಿಕ ಸಮಾರಂಭಗಳು. ಒಂದು ಪಕ್ಷದ ನಗರ ಪ್ರದೇಶದ ಬೃಹತ್ ಸಾರ್ವಜನಿಕ ಸಮಾರಂಭಕ್ಕೆ ಖರ್ಚಾಗುವ ಹಣವೆಷ್ಟು? ಶ್ರಮವೆಷ್ಟು? ಸಮಯವೆಷ್ಟು? ತೊಂದರೆಯೆಷ್ಟು? ಅಪಾಯವೆಷ್ಟು? ವ್ಯರ್ಥವಾಗುವ ಸಂಪನ್ಮೂಲಗಳೆಷ್ಟು? ಭದ್ರತೆಯ ಅಪಾಯ ವೆಷ್ಟು? ಪೂರ್ವ ತಯಾರಿ ಮತ್ತು ನಂತರದ ಕಸದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳೆಷ್ಟು?

ಇನ್ನೂ ಪ್ರತ್ಯಕ್ಷ ಪರೋಕ್ಷ ತೊಂದರೆಗಳೆಷ್ಟು?
ಸಂಪರ್ಕ ಕ್ರಾಂತಿಯ ಈ ದಿನಗಳಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ, ದಿಲ್ಲಿಯಿಂದ ಹಳ್ಳಿಯವರೆಗೂ ಆಸಕ್ತಿ ಇರುವ ಎಲ್ಲರನ್ನೂ ಏಕಕಾಲಕ್ಕೆ ಸಂಪರ್ಕಿಸಬಹುದು. ಅದು ಬಿಟ್ಟು ಹಳೆಯಕಾಲದ ರೀತಿ ಜನರನ್ನು ಕುರಿಗಳಂತೆ ಒಂದು ಕಡೆ ಸೇರಿಸಿ ಅವರಿಗೆ ಅರ್ಥವಾಗದ ಭಾಷೆಯಲ್ಲಿ ಗಂಟೆಗಟ್ಟಲೆ ಭಾಷಣ ಮಾಡುವುದರ ಅವಶ್ಯಕತೆ ಇದೆಯೇ?
ಅದರಲ್ಲೂ ಅತ್ಯಂತ ಮಹತ್ತರ ಜವಾಬ್ದಾರಿ ಹೊಂದಿರುವ, ಅಸಂಖ್ಯಾತ ಜನರ ಸಮಸ್ಯೆಗಳನ್ನು ಪರಿಹರಿಸಬೇಕಿರುವ, ಯೋಚಿಸಲು ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಪ್ರತಿ ನಿಮಿಷವನ್ನೂ ಉಪಯುಕ್ತವಾಗಿ ಬಳಸಬೇಕಾಗಿರುವ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ತಮ್ಮ ತಮ್ಮ ಪಕ್ಷಗಳ ಪರ ಪ್ರಚಾರ ಮಾಡಲು ಸಮಯ ವಿನಿಯೋಗಿಸಿದರೆ ನಿಜವಾಗಿ ಕೆಲಸ ಮಾಡಲು ಅವರಿಗೆ ಉಳಿಯುವ ಸಮಯವೆಷ್ಟು? ನಮ್ಮಂತ ಸಾಮಾನ್ಯರಿಗೇ ಎಷ್ಟೋ ಬಾರಿ ಸಣ್ಣಪುಟ್ಟ ಕೆಲಸಗಳಿಗೇ ಸಮಯ ಸಾಕಾಗುವುದಿಲ್ಲ.

ಅಂತಹುದರಲ್ಲಿ ಇಡೀ ರಾಜ್ಯ ಅಥವಾ ದೇಶದ ಮುಖ್ಯಸ್ಥನಿಗೆ ಹೇಗೆ ಸಮಯ ಸಿಗುತ್ತದೆ ? ಎಲ್ಲರಿಗೂ ಇರುವುದು ದಿನಕ್ಕೆ 24 ಗಂಟೆ ಮಾತ್ರವಲ್ಲವೇ ? ನನ್ನ ಅನಿಸಿಕೆ ಏನೆಂದರೆ, ಒಮ್ಮೆ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿ ಅಥವಾ ಇನ್ಯಾವುದೇ ಸರ್ಕಾರದ ಜವಾಬ್ದಾರಿ ಸ್ಥಾನ ಪಡೆದ ತಕ್ಷಣ ಆತನ ಮೂಲ ಪಕ್ಷದ ಸದಸ್ಯತ್ವ ರದ್ದಾಗಬೇಕು. ಆತ ಇಡೀ ದೇಶ ಅಥವಾ ರಾಜ್ಯದ ಮುಖ್ಯಸ್ಥ. ಯಾವುದೋ ಒಂದು ಪಕ್ಷದ ಪರವಾಗಿ ಮತ ಕೇಳಬಾರದು. ಮತ ಕೇಳುವ ಕೆಲಸವೇನಿದ್ದರೂ ಪಕ್ಷದ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಕಾರ್ಯ ಕರ್ತರಿಗೆ ಬಿಟ್ಟು ಬಿಡಬೇಕು.

ರಾಜ್ಯ ಮತ್ತು ದೇಶದ ಮುಖ್ಯಸ್ಥರು ಕೇವಲ ಅಭಿವೃದ್ಧಿ ಮತ್ತು ಅದರ ಅನುಷ್ಠಾನದ ಬಗ್ಗೆ ಮಾತ್ರ ಯೋಚಿಸಬೇಕು. ಈ ಶುಂಕುಸ್ಥಾಪನೆ, ಉದ್ಘಾಟನೆ, ಅನಾವರಣ, ಸಾವುಗಳು, ಸಂಭ್ರಮಗಳಲ್ಲಿ ಭಾಗವಹಿಸಬಾರದು. ಅವುಗಳನ್ನು ಸ್ಥಳೀಯ ಮಟ್ಟದಲ್ಲಿ ನಿರ್ವಹಿಸಬೇಕು. ಕನಿಷ್ಟ ಮೂರು ತಿಂಗಳಿಗೊಮ್ಮೆ ಎಲ್ಲಾ ರೀತಿಯ ಮಾಧ್ಯಮಗಳಲ್ಲೂ ಸರ್ಕಾರದ ಯೋಜನೆಗಳ ಮಾಹಿತಿ ಮತ್ತು ಪ್ರಗತಿಯ ಬಗ್ಗೆ ವಿವರಣೆ ನೀಡಬಹುದು ಅಥವಾ ಇದಕ್ಕಿಂತ ಉತ್ತಮ ಮಾರ್ಗ ಹುಡುಕಬಹುದು. ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅವಶ್ಯಕತೆ ಇರುವ ಪ್ರದೇಶಗಳಿಗೆ ಹೋಗಬಹುದು. ಇಲ್ಲದಿದ್ದರೆ ಲಕ್ಷಾಂತರ ಜನ ಸೇರುವ ಈ ಸಮಾರಂಭಗಳಲ್ಲಿ ವಿಧ್ವಂಸಕ ಕೃತ್ಯ ಎಸಗುವವರಿಗೆ ಅಪಾರ ಸಾವು ನೋವು ಉಂಟು ಮಾಡಲು ನಾವೇ ಅವಕಾಶ ಮಾಡಿ ಕೊಟ್ಟಂತಾಗುತ್ತದೆ. ಪೋಲೀಸರ ಮೇಲೆ ಅನವಶ್ಯಕ ಒತ್ತಡ ಹೇರಿದಂತಾಗುತ್ತದೆ.

ನಮ್ಮಲ್ಲಿ ಸಂಸದೀಯ ಮಾದರಿಯ ಪ್ರಜಾಪ್ರಭುತ್ವದ ಇದ್ದು, ಅನೇಕ ಪಕ್ಷಗಳು ಇರುವುದರಿಂದ ಸಾರ್ವಜನಿಕ ಸಮಾರಂಭಗಳ ಸಂಖ್ಯೆ ತುಂಬಾ ಇರುತ್ತದೆ. ಅಲ್ಲದೆ, ಚುನಾ ವಣಾ ಸಂದರ್ಭ ಹೊರತುಪಡಿಸಿ ವರ್ಷದ ಇತರ ದಿನಗಳಲ್ಲಿಯೂ ಬೇರೆ ಬೇರೆ ಕಾರಣಕ್ಕೆ ಈ ರೀತಿಯ ಬೃಹತ್ ಸಮಾರಂಭಗಳನ್ನು ಏರ್ಪಡಿಸಲಾಗುತ್ತದೆ. ಇದರಿಂದಾಗುವ ದುಷ್ಪರಿಣಾಮಗಳನ್ನು ಗಮನಿಸಿದರೆ ಇದನ್ನು ನಿಷೇಧಿಸುವುದೇ ಸೂಕ್ತ ಎನಿಸುತ್ತದೆ. ಪ್ರಜಾಪ್ರಭುತ್ವದ ದೃಷ್ಟಿಕೋನದಿಂದ ಇದಕ್ಕೆ ಮತ್ತೊಂದು ಸುಲಭ ಮತ್ತು ಸರಳ ಪರ್ಯಾ ಯ ಮಾರ್ಗ ಹುಡುಕುವುದು ಸೂಕ್ತ.

– ವಿವೇಕಾನಂದ ಎಚ್.ಕೆ.

Leave a Reply

Your email address will not be published. Required fields are marked *