ಕರುನಾಡಿನ ಹೆಮ್ಮೆಯ ಕುಲಪುತ್ರ ಪುಟ್ಟರಾಜ ಗವಾಯಿ

ಕರುನಾಡಿನ ಶ್ರೇಷ್ಠ ಪ್ರವರ್ತಕ, ಸಂಗೀತದ ರಸದೌತಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಕೀರ್ತಿಪತಾಕೆಯನ್ನು ಮುಗಿಲೆತ್ತರ ಕ್ಕೆ ಹಾರಿಸಿದ ಶರಣ ಪುಟ್ಟರಾಜ ಗವಾಯಿಗಳು.

ಬಾಲ್ಯ ಜೀವನ: ಪುಟ್ಟರಾಜ ಗವಾಯಿಯವರ ಜನನ 03.03.1914ರಂದು. 2 ವರ್ಷಕ್ಕೆ ತಂದೆತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆ ತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯಗಳನ್ನಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವು ಗಳನ್ನೂ ಸಹ ಕಲಿತರು.

ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು.ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೇ, ಪುಟ್ಟರಾಜರು ತಬಲಾ, ಪಿಟೀಲು, ಹಾರ್ಮೋನಿಯಮ್, ಸಾರಂಗಿ, ಶಹನಾಯಿ ಮುಂತಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣಿತರಾದರು. ಪುಟ್ಟರಾಜರು ಕೇವಲ 8 ವರ್ಷದ ಬಾಲಕರಾಗಿದ್ದಾಗ ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಆಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು. ಗುರುಗಳ ಆಶೀರ್ವಾದ, ನಿಷ್ಠೆ-ವಿಶ್ವಾಸ, ಸ್ವಚ್ಛಂದ ಮನಸ್ಸಿನೊಂದಿಗೆ ಇಡೀ ಸಂಗೀತ ಪ್ರೇಮಿಗಳ ಮತ್ತು ಮಠದ ಭಕ್ತರ ಮನಸ್ಸುಗಳನ್ನು ಗೆದ್ದರು.

ಮಠದ ಜವಾಬ್ದಾರಿ: 1944ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಸ್ಥಾನಕ್ಕೇರಿದರು. ಪುಟ್ಟರಾಜರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಆಶ್ರಮದ ಅಭಿವೃದ್ಧಿ, ಅಂಧ-ಅನಾಥರ ಕಾಳಜಿಯಲ್ಲಿಯೇ ಸೃಷ್ಟಿ ಕರ್ತನನ್ನು ಕಂಡರು. ಕಾಯಕವೇ ಕೈಲಾಸವಯ್ಯ ಎಂಬ ಶರಣರ ವಾಣಿಯನ್ನು ಅಕ್ಷರಶಃ ತಮ್ಮ ಬದುಕಿನಲ್ಲಿ ಅನುಷ್ಠಾನಗೊಳಿ ಸಿದವರು. ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ನಿತ್ಯಕರ್ಮ ಹಾಗೂ ಯೋಗದ ಅನಂತರ ಬಾವಿ ನೀರಿನ ಸ್ನಾನದೊಂದಿಗೆ ಪೂಜಾ ಕೋಣೆ ಸೇರಿದರೆ ಸಾಕು ಹೊರಗಿನ ಜಗತ್ತನ್ನೇ ಮರೆಯುತ್ತಿದ್ದರು. ಪೂಜಾ ಕೋಣೆಯಲ್ಲಿ ಕಾಯಕ ನಿಷ್ಠರಾಗಿ ನಾಲ್ಕೈದು ಗಂಟೆಗಳವರೆಗೆ ಆರಾಧ್ಯದೈವದಲ್ಲಿ ತನ್ಮಯರಾಗಿ ಪುಟ್ಟರಾಜರು ಕೈಗೊಳ್ಳುತ್ತಿದ್ದ ಇಷ್ಟಲಿಂಗ ಪೂಜೆ ಯನ್ನು ದಿನದಲ್ಲಿ ಎರಡು ಬಾರಿ ಮಾಡುತ್ತಿದ್ದರು. ಮಕ್ಕಳಿಗೆ ಪಾಠ ಹೇಳಿ, ಶರಣರ, ವಿಶ್ವದ ದಾರ್ಶನಿಕರ ಕುರಿತು ಭಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಅಲ್ಲದೇ, ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ ಮಾಡುತ್ತಿದ್ದರು. ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳ ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಯಿ ಗಳು ಅವರಿಗೆ ಸ್ವತಂತ್ರವಾಗಿ ಬದುಕು ಸಾಗಿಸಲು ಆತ್ಮವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಶ್ರಮದ ದೈನಂದಿನ ಖರ್ಚು-ವೆಚ್ಚ ಸರಿದೂಗಿಸಲು ಹಾನಗಲ್ ಕುಮಾರಸ್ವಾಮಿಗಳು ತಮ್ಮ ಪಂಚಾಕ್ಷರ ಗವಾಯಿ ಗುರುಗಳಿಗೆ ನೀಡಿದ್ದ ಜೋಳಿಗೆಯನ್ನು ಹೆಗಲಿಗೇರಿಸಿ ಊರೂರು ಸಂಚಾರಿಸಿದರು, ನಿರಂತರ ಪ್ರವಾಸ ಅವರ ಬದುಕಾಗಿತ್ತು. 97 ವರ್ಷದ ವಯೋಸಹಜ ಕಾಯಿಲೆಗಳಿಂದ ಅವರು ಬಳಲಿದರೂ ಅವರ ಈ ನಿತ್ಯದ ನಡಾವಳಿಗೆ ಯಾವತ್ತೂ ಚ್ಯುತಿ ಬರಲಿಲ್ಲ. ಗುರು ಪಂಚಾಕ್ಷರಿ ನೀಡಿದ ಮಾರ್ಗ ದಂಡ ಯಾವತ್ತೂ ಕೈಯಲ್ಲಿ ಹಿಡಿದು ಪುಟ್ಟಯ್ಯಜ್ಜ ನಡೆದರೆ ನಡೆದಾಡುವ ದೇವರು ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಕಾಣುತ್ತಿರಲಿಲ್ಲ.

ಸಂಗೀತ ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಂಗೀತದಲ್ಲಿ ಪ್ರಭುತ್ವ ಸಾಧಿಸಿ ಉಯಗಾನ ವಿಶಾರದ ಎನಿಸಿದ ಏಕಮೇವ ದಿಗ್ಗಜರೆನಿಸಿಕೊಂಡವರು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಸುಮಾರು 35 ನಾಟಕಗಳನ್ನೂ ರಚಿಸಿದ್ದಾರೆ. ಅದೂ ಅಲ್ಲದೇ, 1969 ನವೆಂಬರ 10ರಂದು ಪಂಚಾಕ್ಷರವಾಣಿ ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾ ಪ್ರಪಂಚಕ್ಕೂ ಸಹ ಪುಟ್ಟರಾಜರು ಕಾಲಿಟ್ಟರು.

ಪುಟ್ಟರಾಜ ಗವಾಯಿಗಳ ಸಾಧನೆಗೆ ಹಾಗೂ ಅವರು ಸಲ್ಲಿಸಿದ ಸೇವೆಗಾಗಿ ಅವರಿಗೆ ಸಂದಿರುವ ಪುರಸ್ಕಾರಗಳು ಅನೇಕ. 1959ರಲ್ಲಿ ಸುತ್ತೂರು ಮಠದಿಂದ ಸಾಹಿತ್ಯ ಸಂಗೀತ ಕಲಾಪ್ರವೀಣ ಪ್ರಶಸ್ತಿ, 1965ರಲ್ಲಿ ಬನವಾಸಿ ವಿರಕ್ತ ಮಠದಿಂದ ಸಮಾಜ ಸೇವಾ ಧುರೀಣ ಪ್ರಶಸಿ, 1970ರಲ್ಲಿ ಶ್ರೀಮ.ನಿ.ಪ್ರ. ನೀಲಲೋಚನ ಸ್ವಾಮಿಗಳಿಂದ ತ್ರಿಭಾಷಾ ಕವಿ ರತ್ನ ಪ್ರಶಸ್ತಿ ಪಡೆದಿದ್ದಾರೆ. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಂಪಾದಿಸಿದವರು. ಅವುಗಳಲ್ಲಿ 1970ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1975ರಲ್ಲಿ ಕರ್ನಾಟಕ ವಿವಿ ಗೌರವ ಡಾಕ್ಟರೇಟ್, 1998ರಲ್ಲಿ ರಾಜ್ಯ ಸರ್ಕಾರದ ಕನಕ ಪುರಂದರ ಪ್ರಶಸ್ತಿ, 1998ರಲ್ಲಿ ಕನ್ನಡ ವಿವಿಯಿಂದ ನಾಡೋಜ, 1999ರಲ್ಲಿ ಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ- 2002ರಲ್ಲಿ ಬಸವಶ್ರೀ ಪ್ರಶಸ್ತಿ- 2000ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆ ಪ್ರಶಸ್ತಿ -1993ರಲ್ಲಿ ದಸರಾ ಸಂಗೀತ ವಿದ್ವಾನ್ ಪ್ರಶಸ್ತಿ -1991ರಲ್ಲಿ ಶಿಕ್ಷಣ ಇಲಾಖೆಯ ಪ್ರಶಸ್ತಿ, 1961ರಲ್ಲಿ ಹಿಂದಿಯಲ್ಲಿ ಬಸವಪುರಾಣ ರಚಿಸಿದ ಪುಟ್ಟರಾಜರಿಗೆ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವ ರಿಂದ ಸತ್ಕಾರ, 2007ರಲ್ಲಿ ಮಧ್ಯಪ್ರದೇಶ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕಾಳಿದಾಸ ಸಮ್ಮಾನ್ ಹಾಗೂ ಭಾರತ ಸರಕಾರದ 2010 ರಲ್ಲಿ ಪದ್ಮಭೂಷಣ ಪ್ರಶಸ್ತಿ. ಹೀಗೆ ಇನ್ನು ಹಲವಾರು ಪ್ರಶಸ್ತಿ ಗೌರವಗಳು ಶ್ರೀಗಳ ಮುಡಿಗೇರಿವೆ.

ವಿಶ್ವ ದಾಖಲೆ: ಪುಟ್ಟರಾಜರು ತುಲಾಭಾರಗಳ ಚಕ್ರವರ್ತಿಗಳು. ರಾಜ್ಯ ಹಾಗೂ ಹೊರ ರಾಜ್ಯದ ಬಹುತೇಕ ಎಲ್ಲಾ ವರ್ಗದ ಭಕ್ತರಿಂದ ಒಟ್ಟು (2280)ಕ್ಕೂ ಅಧಿಕ ತುಲಾಭಾರ ಗಳು ನಡೆದಿದ್ದು, ಆ ತುಲಾಭಾರ ಗಿನ್ನೆಸ್ ದಾಖಲೆಗಳ ಪುಸ್ತಕ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿವೆ. ಶಿಷ್ಯಬಳಗದ ಪ್ರಮುಖರು: ಪಂಡಿತ್ ಬಸವರಾಜ್ ರಾಜ ಗುರು, ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಕಟ್ಟಿ, ಎಂ.ವೆಂಕಟೇಶ ಕುಮಾರ್ ಇನ್ನೂ ಅನೇಕರು. ಕನ್ನಡದ ಮೇರುನಟ ಡಾ.ರಾಜಕುಮಾರ ಗದುಗಿನ ವೀರೇಶ್ವರ ಪುಣ್ಯಾಶ್ರಮ ದಲ್ಲಿ ಮೂರು ತಿಂಗಳಿದ್ದು ಸಂಗೀತ ಅಭ್ಯಾಸ ಮಾಡಿದ್ದಾರೆ. ಸೃಷ್ಟಿಕರ್ತನ ಇಚ್ಛೆಯಂತೆ, 17-09-2010ರಂದು ಮಧ್ಯಾಹ್ನ ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾದರು.

-ಸಂಗಮೇಶ ಜವಾದಿ ಕೊಡಂಬಲ, ಬೀದರ್

Leave a Reply

Your email address will not be published. Required fields are marked *