ಸಂಪುಟದಲ್ಲಿ ಕಲಬುರಗಿ ಜಿಲ್ಲೆ ಕಡೆಗಣನೆಗೆ ಪ್ರಿಯಾಂಕ್ ಖರ್ಗೆ ಕಿಡಿ

ಕಲಬುರಗಿ, ಆ.4  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದ ನೂತನ ಸಚಿವರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಡಬಲ್‌ಇಂಜಿನ್ ಸರ್ಕಾರದಿಂದ ಜಿಲ್ಲೆಗೆ ಅನ್ಯಾಯ ನಿರಂತರವಾಗಿ ಮುಂದುವರೆದಿದೆ ಎಂದು ಮಾಜಿ ಸಚಿವ ಹಾಗೂ‌ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಸರ್ಕಾರ ಮತ್ತೊಮ್ಮೆ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ದೋಖಾ ಮಾಡಿದೆ ಎಂದು‌ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕಲ್ಯಾಣ‌ ಕರ್ನಾಟಕ ಪ್ರದೇಶಕ್ಕೆ ಅದರಲ್ಲೂ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸದೇ ಅನ್ಯಾಯವೆಸಗಿದ್ದರು. ಈಗ ಅವರ ಉತ್ತರಾಧಿಕಾರಿ ಬೊಮ್ಮಾಯಿ‌ ಅವರು ಕೂಡಾ ಮತ್ತೊಮ್ಮೆ ಈ ಪ್ರದೇಶವನ್ನು ಕಡೆಗಣನೆ ಮಾಡುವ ಮೂಲಕ ಅನ್ಯಾಯದ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಂಟು ಸಚಿವರನ್ನು ಹೊಂದಿದ್ದ ಕಲಬುರಗಿ ಜಿಲ್ಲೆ ಈಗ ಒಬ್ಬರೇ ಒಬ್ಬ ಸಚಿವರನ್ನೂ ಹೊಂದದೆ ಅನಾಥವಾಗಿರುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯತನ ಮತ್ತು ಬಿಜೆಪಿ ಸಂಸದ ಶಾಸಕರ ಅಸಹಾಯಕತೆ ಕಾರಣವಾಗಿದೆ. ಕಳೆದ‌ ಲೋಕಸಭಾ ಚುನಾವಣೆ ವೇಳೆ ಹಿರಿಯ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ದಿ ಹೊಳೆ ಹರಿಸುವುದಾಗಿ ಹೇಳಿ ಜನರನ್ನು ಮರುಳು ಮಾಡಿ ಓಟು ಗಿಟ್ಟಿಸಿದ್ದ ಕಲಬುರಗಿ ಜಿಲ್ಲೆಯ ಮಹಾನ್ ನಾಯಕರು ಖರ್ಗೆ ಅವರು ಕೇಂದ್ರ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ ಹಲವಾರು ಯೋಜನೆಗೆಳು ವಾಪಸ್ಸು ಹೋದಾಗ ಧ್ವನಿ ಎತ್ತಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಕೆಕೆಆರ್‌ಡಿ‌ಬಿ‌ಗೆ ನಿಗದಿತ ವಾರ್ಷಿಕ ಅನುದಾನ ಬಿಡುಗಡೆ ಮಾಡದಿರುವಾಗ, ನೆರೆಯಿಂದ ಜನರು ತೊಂದರೆಯಲ್ಲಿದ್ದಾಗ ಅವರ ನೆರವಿಗೆ ಧಾವಿಸುವಲ್ಲಿ ವಿಫಲವಾದಾಗ, ಕೊರೋನಾ ಸಾಂಕ್ರಾಮಿಕದಿಂದ ಜಿಲ್ಲೆಯ ಜನರು ಬೆಡ್, ಆಕ್ಸಿಜನ್, ಲಸಿಕೆ, ಆ್ಯಂಬುಲೆನ್ಸ್ ಕೊರತೆಯಿಂದ ನರಳುತ್ತಿರುವಾಗ ಬೆನ್ನೆಲುಬು ಇಲ್ಲದ ಬಿಜೆಪಿ ಸಂಸದ ಶಾಸಕರು ಸರ್ಕಾರದ ಮೇಲೆ‌ ಒತ್ತಡ ತಂದು ಜನರಿಗೆ ವೈದ್ಯಕೀಯ ನೆರವು ಕೊಡಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈಗ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ನೀಡದಿರುವಾಗಲೂ ಬಾಯಿಬಿಡುತ್ತಿಲ್ಲ ಎಂದ ಮೇಲೆ ಜನರು ಅಂತಹ ಮಹಾನ್ ನಾಯಕರಿಂದ ಮತ್ತೇನನ್ನು ನಿರೀಕ್ಷೆ ಮಾಡಬಹುದು? ಎಂದು ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

, , ,

Leave a Reply

Your email address will not be published. Required fields are marked *