ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

ಮೇಲ್ಮನೆಯಲ್ಲಿ ಹಲವು ವಿಧೇಯಕಗಳ ಅಂಗೀಕಾರ
ಬೆಂಗಳೂರು – ಖಾಸಗಿ ಆಸ್ಪತ್ರೆಗಳ ನೋಂದಣಿ ಮತ್ತು ದೂರು ವಿಚಾರಣೆ ಪ್ರಾಧಿಕಾರಕ್ಕೆ ಬಿಬಿಎಂಪಿ ಆಯುಕ್ತರನ್ನು ಅಧ್ಯಕ್ಷರನ್ನಾಗಿ ಮಾಡುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ ಸೇರಿದಂತೆ ಹಲವಾರು ಕಾಯ್ದೆಗಳು ವಿಧಾನ ಪರಿಷತ್‍ನಲ್ಲಿ ಅಂಗೀಕಾರಗೊಂಡವು.
ಕೆಲವು ಕಾಯ್ದೆಗಳು ಹೆಚ್ಚು ಚರ್ಚೆಯಾಗದೆ ಅಂಗೀಕಾರಗೊಂಡವು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು, ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕವನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದರು. ಖಾಸಗಿ ಆಸ್ಪತ್ರೆಗಳ ನೋಂದಣಿ ಮತ್ತು ಅವುಗಳ ವಿರುದ್ಧ ಕೇಳಿ ಬರುವ ದೂರುಗಳಿಗೆ ಈವರೆಗೂ ಜಿಲ್ಲಾಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಕೊರೊನಾ ಸಂದರ್ಭದಲ್ಲಿ ಕಂಟೈನ್‍ಮೆಂಟ್ ಜೋನ್ ನಿರ್ಧರಿಸುವಾಗ ತಾಂತ್ರಿಕ ಅಡಚಣೆ ಎದುರಾಗಿದ್ದರಿಂದ ಪ್ರಾಧಿಕಾರದ ಅಧ್ಯಕ್ಷ ಅಧಿಕಾರವನ್ನು ಜಿಲ್ಲಾಧಿಕಾರಿಯಿಂದ ಬಿಬಿಎಂಪಿ ಆಯುಕ್ತರಿಗೆ ನೀಡಲು ಸುಗ್ರೀವಾಜ್ಞೆ ಮೂಲಕ ಕಾನೂನು ತಿದ್ದುಪಡಿ ತರಲಾಯಿತು. ಆ ಮಸೂದೆಯನ್ನು ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರಾದ ಮಹಂತೇಶ್, ತಿಪ್ಪೇಶ್ವಾಮಿ, ಪಿ.ಆರ್.ರಮೇಶ್, ನಾರಾಯಣಸ್ವಾಮಿ, ಪ್ರಕಾಶ್ ರಾಥೋಡ್ ಮತ್ತಿತರರು ತಿದ್ದುಪಡಿ ಮಸೂದೆಗೆ ತೀವ್ರ ಅಕ್ಷೇಪ ವ್ಯಕ್ತ ಪಡಿಸಿದರು. ಈಗಾಗಲೇ ಬಿಬಿಎಂಪಿ ಆಯುಕ್ತರಿಗೆ ಬಿಡುವಿಲ್ಲದಷ್ಟು ಕೆಲಸಗಳಿವೆ.
ಈ ನಡುವೆ ಹೊಸದಾಗಿ ಈ ಜವಾಬ್ದಾರಿಯನ್ನು ಹೊರಿಸಿದರೆ ಕಷ್ಟವಾಗುತ್ತದೆ. ಜಿಲ್ಲಾಧಿಕಾರಿಯವರ ಬಳಿಯೇ ಅಧಿಕಾರ ಇದ್ದರೆ ನಷ್ಟವೇನು ಇಲ್ಲ ಅಥವಾ ಅದೇ ಸಮಾನಾದ ಅಧಿಕಾರ ಹೊಂದಿರುವ ಬೇರೆ ಅಧಿಕಾರಿಗೆ ಈ ಜವಾಬ್ದರಿ ನೀಡಿ ಎಂದು ಸಲಹೆ ನೀಡಿದರು.
ಈಗಾಗಲೇ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಯಾಗಿದೆ. ಅದರಿಂದಾಗಿರುವ ಲಾಭ ನಷ್ಟಗಳೇನು ಎಂದು ಪಿ.ಆರ್.ರಮೇಶ್ ಪ್ರಶ್ನಿಸಿದರು. ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡುವುದಷ್ಟೇ ಈ ಮಸೂದೆಯ ಉದ್ದೇಶ. ಬೇರೆನಿಲ್ಲ ಎಂದು ಸಮರ್ಥಿಸಿಕೊಂಡರು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಧ್ವನಿಮತದ ಮೂಲಕ ಮಸೂದೆ ಅಂಗೀಕಾರವಾಗಿದೆ ಎಂದು ಘೋಷಿಸಿದರು.

Leave a Reply

Your email address will not be published. Required fields are marked *