ಆತ್ಮವಿಶ್ವಾಸದ ಅಧ್ಯಕ್ಷತೆಯಲ್ಲಿ !

ಫೇಸ್ಬುಕ್ ಲೇಖನ

ಕೆಲವೊಮ್ಮೆ ಎಂತಹಾ ಸಂದಿಗ್ಧತೆಗೆ ಸಿಲುಕುತ್ತೇವೆಂದರೆ ಅಂತಹಾ ಸಮಯದಲ್ಲಿ ಮುಜುಗರ, ಆತಂಕ, ಹಿಂಜ ರಿಕೆ ಇಲ್ಲವೇ ಅಭಾಸಗಳೂ ಆಗಬಹುದು. ಮೊನ್ನೆ ಹೀಗಾಯಿತು! ಗುಲ್ಬರ್ಗ ಜಿಲ್ಲಾ ಡಿಸಿಸಿ ಸಭೆಗೆ ನಾನು ಹಾಜರಾಗಬೇಕಿತ್ತು. ಅಂದು 2019-20 ರ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಬಿಡುಗಡೆ ಮಾಡುವ ಸಮಾರಂಭ. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಹ್ವಾನಿತರಾಗಿ ಹಾಗೂ ಜೊತೆಗೆ ನಮ್ಮ ಡಿಜಿಎಂ ಕೂಡಾ ಅಧ್ಯಕ್ಷರಾಗಿ ಸಭೆಗೆ ಬರಬೇಕಿತ್ತು.

ಕಾರ್ಯಕ್ರಮ ನಡೆಯುವ ಹೊತ್ತಿಗೆ ಅಧ್ಯಕ್ಷತೆ ವಹಿಸಬೇಕಿದ್ದ ನಮ್ಮ ಡಿಜಿಎಂ ತಾವು ಬರಲಾಗುವುದಿಲ್ಲವೆಂದು ತಿಳಿಸಿದ್ದರಂತೆ! ಹೀಗಾಗಿ ಅಲ್ಲಿಯೇ ವರ್ಷದ ಕೊನೆಯ ಟಾರ್ಗೆಟ್ ಗಳ ಸಾಧನೆಯ ಗುಂಗಿನಲ್ಲಿ, ಕೊಂಚ ಒತ್ತಡ ದಲ್ಲಿದ್ದ ನನ್ನನ್ನು ಸಾರ್ ನೀವೇ ಇಂದಿನ ಅಧ್ಯಕ್ಷರು ಅಂತ ಅನೌನ್ಸ್ ಮಾಡಿಸಿ ವೇದಿಕೆಗೆ ಆಹ್ವಾನಿಸಿಯೇ ಬಿಡೋದೇ? ಕಾರ್ಯಕ್ರಮದ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದಿದ್ದರೂ ಅಧ್ಯಕ್ಷತೆಯ ಜವಾಬ್ದಾರಿಗೆ ನಾನಂದು ಸಿದ್ಧನಾಗಿ ಬಂದಿರಲಿಲ್ಲ.

ಹೀಗಾಗಿ, ಸಕತ್ ಮುಜುಗರದ ಸನ್ನಿವೇಶವುಂಟಾಯಿತು. ಆದರೂ, ನಾನೂ ಒಂಥರಾ ಗಂಡನಿದ್ದಂತೆ ಕಣ್ರಿ! ಯಾವುದೇ ತಯಾರಿ, ತರಕಾರಿ ಇಲ್ಲದಿದ್ದರೂ ಆ ಸಮಯಕ್ಕೆ ತಕ್ಕಂತೆ ಜವಾಬ್ದಾರಿಯನ್ನು ನಿರ್ವಹಿಸುವ ಕಲೆ ಹಿರಿಯೂರಿನ ಮಣ್ಣಲ್ಲೇ ಕರಗತವಾಗಿ ಬಂದಿರಬಹುದು ಅನ್ಸುತ್ತೆ ! ಈ ಹಿನ್ನಲೆಯಲ್ಲಿ ಇಡೀ ಸಭೆಯನ್ನು ಅತ್ಯಂತ ಜವಾಬ್ದಾರಿ ಹಾಗೂ ಅಚ್ಚುಕಟ್ಟಾಗಿ ನಡೆಯುವಂತೆ ನಾನೂ ಸ್ವಲ್ಪ ಶ್ರಮ ವಹಿಸಿದೆ.

ಅನೇಕ ಉನ್ನತ ಅಧಿಕಾರಿಗಳು ಇದ್ದ ಬಹುಮುಖ್ಯವಾದ ಸಭೆಗಳಿಗೆ ಈ ರೀತಿ ದಿಢೀರ್ ಅಂತ ಕರೆದು ಕೂರಿಸಿ ದಾಗ ನಮ್ಮ ಸ್ಥಿತಿ ಏನಾಗಿರಬೇಡ. ಆದರೂ, ಸ್ವಲ್ಪ ಮಟ್ಟಿನ ಕಾಮನ್ ಸೆನ್ಸ್‌, ವಿಷಯದ ಬಗ್ಗೆ ಅರಿವು ಹಾಗೂ ಸಮಯೋಚಿತ ವರ್ತನೆಗಳಿಂದ ಯಾವುದನ್ನಾದರೂ ಜಯಿಸಬಹುದಲ್ಲವೇ!

ಆರಂಭದಲ್ಲಿ ಕೊಂಚ ಅಳುಕಿದ್ದರೂ ಆನಂತರ ಇಡೀ ಕಾರ್ಯಕ್ರಮವನ್ನೇ ಆವರಿಸಿಕೊಳ್ಳುವ ಆತ್ಮವಿಶ್ವಾಸ ಮೂಡಿ ಬಂತು! ಅಂತೂ ಇಂತೂ ಅನಿರೀಕ್ಷಿತವಾಗಿ ಬಂದ ಅಧ್ಯಕ್ಷತೆಯ ಪಟ್ಟದಲ್ಲಿ ಬಲಿಪಶುವಾಗದೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋದ ಪ್ರಶಂಸೆಯಂತಾಗಿ ನಿಟ್ಟುಸಿರು ಬಿಡುವಂತಾಯಿತು. ಜಿಲ್ಲೆಯ ವಾರ್ಷಿಕ ಸಾಲ ಯೋಜನೆಯ ಕೈಪಿಡಿಯನ್ನು ಬಿಡುಗಡೆ ಮಾಡಿದ್ದೂ ಅಲ್ಲದೇ ಅದರ ಸಾಧಕ ಬಾಧಕಗಳ ಕುರಿತು ಒಂದಷ್ಟು ಹೊತ್ತು ಮಾತನಾಡಿದ್ದು, ಚರ್ಚಿಸಿದ್ದು ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿದ್ದು ಕುತೂಹಲಕಾರಿಯಾಗಿತ್ತು ಹಾಗೂ ಆತ್ಮವಿಶ್ವಾಸದ ಪ್ರತೀಕವಾಗಿತ್ತು…! ಇದೆಲ್ಲಾ ನೋಡಿದ ಮೇಲೆ ಅನ್ನಿಸಿದ್ದು ಆತ್ಮವಿಶ್ವಾಸವೊಂದಿದ್ದರೆ ಈ ಜಗತ್ತಿನಲ್ಲಿ ಏನನ್ನಾದರೂ ಜಯಿಸಬಹುದಲ್ಲವೇ…?

  • ಪ್ರಕಾಶ್ ಹಿರಿಯೂರು

Leave a Reply

Your email address will not be published. Required fields are marked *