ಸಿರಿಧಾನ್ಯಗಳ ಉತ್ಪಾದನೆಗೆ ಆದ್ಯತೆ

 

ಬೆಂಗಳೂರು: ಆ. 27  ವಿಶ್ವಸಂಸ್ಥೆ 2023 ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಅವರಿಂದು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಪಾರಂಪರಿಕವಾಗಿ ಸಿರಿಧಾನ್ಯಗಳನ್ನು ಬೆಳೆಯುತ್ತಿರುವ ರಾಜ್ಯಗಳಿವೆ. ಆದರೆ ಇವುಗಳಿಗೆ ಪೂರಕ ವಾತಾವರಣ ಇಲ್ಲದಿದ್ದರೂ ಉತ್ತರಕಾಂಡ ರಾಜ್ಯ ಈ ಸಿರಿಧಾನ್ಯಗಳ ಬೆಳೆಗಳನ್ನು ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ಗುಣಮಟ್ಟವನ್ನೂ ಕಾಯ್ದುಕೊಂಡಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಮಳೆಯಾಧಾರಿತ ಕೃಷಿ ಮಾಡುವ ಜಮೀನುಗಳ ವಿಸ್ತೀರ್ಣ ಹೆಚ್ಚು. ಇಲ್ಲಿ ಅತ್ಯಧಿಕ ಪ್ರಮಾಣದ ಸಿರಿಧಾನ್ಯಗಳನ್ನು ಬೆಳೆಯಲು ಸಾಧ್ಯ. ಆದ್ದರಿಂದ ನವಣೆ, ಆರ್ಕ, ಸಾಮೆ, ಊದಲು, ಬರುಗು ಇತ್ಯಾದಿ ಬೆಳೆಗಳನ್ನು ಗಣನೀಯವಾಗಿ ಬೆಳೆದು ರಫ್ತು ಮಾಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು,

ಆಂಧ್ರ ಪ್ರದೇಶದಲ್ಲಿ ಕೃಷಿ ಭರವಸೆ ಯೋಜನೆ ಜಾರಿ ಮಾಡಿದ್ದಾರೆ. ಇಲ್ಲಿ ಒಂದೆಡೆಯೇ ಕೃಷಿಗೆ ಅಗತ್ಯವಾದ ಸಾಮಗ್ರಿಗಳು ದೊರೆಯುವುದರ ಜೊತೆಗೆ ವಿವಿಧ ಕೃಷಿ ಬೆಳೆಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ತಮಿಳುನಾಡಿನಲ್ಲಿ ತರಕಾರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ಶೀತಲ ಘಟಕಗಳ ಸರಣಿ ಸ್ಥಾಪಿಸಿದ್ದಾರೆ. ಈ ಯೋಜನೆಗಳನ್ನು ಕರ್ನಾಟಕ ರಾಜ್ಯ ಸರ್ಕಾರ ಸಹ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಒಳನಾಡಿನ ಮೀನುಗಾರಿಕೆಗೆ ಉತ್ತೇಜನ. ರೇಷ್ಮೆ ಬೆಳೆ ಉತ್ತೇಜನ, ರೇಷ್ಮೆಗೆ ಇ ಮಾರುಕಟ್ಟೆ ಜಾರಿಗೆ ತರಲು ತೀರ್ಮಾನವಾಗಿದೆ. ಶೇ 50 ರಷ್ಟು ರೈತರು ಇ ಪೇಮೆಂಟ್ ವ್ಯವಸ್ಥೆಗೆ ಅಳವಡಿಸಿಕೊಂಡಿದ್ದಾರೆ. ಇದು ಗಮನಾರ್ಹ ಸಂಗತಿ. 57.ಕೋಟಿ ರೈತರಿಗೆ ನೇರವಾಗಿ ಅವರ ಅಕೌಂಟ್ ಗೆ ಬೆಳೆ ವಿಮೆ ಹಣ ತಲುಪಿಸಲಾಗಿದೆ ಎಂದು ವಿವರಿಸಿದರು.

ಆಹಾರ ಮೌಲ್ಯವರ್ಧನಾ ಘಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿ ರಫ್ತು ಮಾಡಲು ಅನುಕೂಲವಾಗುವಂತೆ ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ವಿಂಗ್ ಮಾಡಲು ಮನವಿ ಮಾಡಿದ್ದೇನೆ. ಅವರೊಂದಿಗೆ ಚರ್ಚಿಸಲಾಗುತ್ತಿದೆ. ಈಗಾಗಲೇ ಕೃಷಿಕರ ಆದಾಯ ದ್ವಿಗುಣಗೊಳಿಸುವ ಯೋಜನೆ ಪೂರ್ಣಗೊಳ್ಳಬೇಕಿತ್ತು. ಕೊರೊನಾದಿಂದ ಹಿನ್ನಡೆಯಾಗಿದೆ ಎಂದು ವಿವರಿಸಿದ ಸಚಿವರು ಸದ್ಯದಲ್ಲಿಯೇ ಇದನ್ನು ಸಾಧಿಸಲಾಗುವುದು ಆದರೆ ಇದಕ್ಕೆ ಇನ್ನೂ ಕಾಲಮಿತಿ ನಿಗದಿ ಮಾಡಿಲ್ಲ ಎಂದರು.

ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಮೂರು ಬಿಲ್ ಗಳ ಬಗ್ಗೆ ಬಹಳ ಸ್ಪಷ್ಟತೆ ಹೊಂದಿದೆ. ಮೂವತ್ತು ವರ್ಷಗಳಿಂದ ಅನೇಕ ಸಮಿತಿಗಳು ನೀಡಿರುವ ವರದಿಗಳ ಆಧಾರದಲ್ಲಿ ಕಾಯ್ದೆಗಳನ್ನು ಜಾರಿಗೆ ಜಾರಿಗೆ ತರಲಾಗಿದೆ. ಸ್ವಾಮಿನಾಥನ್ ವರದಿ ಪ್ರಕಾರ ಎಪಿಎಂಸಿ ಯಲ್ಲಿ ರೈತರಿಗೆ ಅನ್ಯಾಯಗುತ್ತಿದೆ ಅಂತ ಹೇಳಿದ್ದಾರೆ. ರೈತರ ಜೊತೆ ಕೇಂದ್ರ ಸರ್ಕಾರ ಮಾತುಕತೆಗೆ ಸಿದ್ದವಿದೆ ಎಂದವರು ತಿಳಿಸಿದರು.

Leave a Reply

Your email address will not be published. Required fields are marked *