ಜೈಸ್ವಾಲ್-ರಾಹುಲ್ ದಾಖಲೆ ಜೊತೆಯಾಟ: ಆಸ್ಟ್ರೇಲಿಯಾ ಪರದಾಟ!
ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅಜೇಯ ಶತಕದ ಜೊತೆಯಾಟದಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೃಹತ್ ಮುನ್ನಡೆಯತ್ತ ಸಾಗಿದೆ.
ಪರ್ತ್ ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ೬೭ ರನ್ ಗೆ 7 ವಿಕೆಟ್ ನಿಂದ ಆಟ ಮುಂದುವರಿದಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 104 ರನ್ ಗೆ ಪತನಗೊಂಡಿತು.
46 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆಡಲಿಳಿದ ಭಾರತ ತಂಡ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 172 ರನ್ ಪೇರಿಸುವ ಮೂಲಕ ಭರ್ಜರಿ ಆರಂಭ ನೀಡಿದ್ದೂ ಅಲ್ಲದೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. ಭಾರತ ಒಟ್ಟಾರೆ 218ರನ್ ಗಳ ಮುನ್ನಡೆ ಪಡೆದಿದೆ.
ಔಟಾಗದೇ ಉಳಿದ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ವೈಯಕ್ತಿಕ ಅರ್ಧಶತಕ ಬಾರಿಸಿದ್ಧೂ ಅಲ್ಲದೇ ಶತಕದತ್ತ ದಾಪುಗಾಲಿರಿಸಿದ್ದಾರೆ. ಜೈಸ್ವಾಲ್ 193 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 90 ರನ್ ಬಾರಿಸಿದ್ದರೆ, ಕೆಎಲ್ ರಾಹುಲ್ 153 ಎಸೆತಗಳಲ್ಲಿ 4 ಬೌಂಡರಿ ಸಹಿತ 62 ರನ್ ಗಳಿಸಿದ್ದಾರೆ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 79ರನ್ ಗೆ 9 ವಿಕೆಟ್ ಕಳೆದುಕೊಂಡಿತ್ತು. ಆದರೆ ಮಿಚೆಲ್ ಸ್ಟಾರ್ಕ್ 112 ಎಸೆತಗಳಲ್ಲಿ 2 ಬೌಂಡರಿ ಒಳಗೊಂಡ 26 ರನ್ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಿಸಿದರು.
ಭಾರತದ ಪರ ಜಸ್ ಪ್ರೀತ್ ಬುಮ್ರಾ 5 ವಿಕೆಟ್ ಗೊಂಚಲು ಪಡೆದರೆ, ಪದಾರ್ಪಣಾ ಪಂದ್ಯವಾಡಿದ ರಾಣಾ 3 ಮತ್ತು ಸಿರಾಜ್ 2 ವಿಕೆಟ್ ಗಳಿಸಿದರು.