ಸರ್ಕಾರದ ಯೋಜನೆಗಳಿಂದ ಉಪ ಚುನಾವಣೆಯಲ್ಲಿ ಗೆಲುವು : ಕೆ.ಹೆಚ್ ಮುನಿಯಪ್ಪ
ಕೋಲಾರ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದಾಗಿಯೇ ಉಪಚುನಾವಣೆಯ ಮೂರೂ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾತನಾಡಿ, ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರ ಸೇರಿ ಮೂರಕ್ಕೆ ಮೂರೂ ಸ್ಥಾನ ಗೆಲ್ಲುವುದಾಗಿ ಈ ಮೊದಲು ಹೇಳಿದ್ದೆ. ಅಂದುಕೊಂಡಂತೆ ಉತ್ತಮ ಅಂತರದಲ್ಲಿ ಗೆಲುವು ಸಿಕ್ಕಿದೆ’ ಎಂದರು.
ಜನ ಕಾಂಗ್ರೆಸ್ ಪರವಾಗಿದ್ದಾರೆ, ಗ್ಯಾರಂಟಿಗಳಿಂದ ನಮಗೆ ಅವರ ಆಶೀರ್ವಾದ ಸಿಕ್ಕಿದೆ. 56 ಸಾವಿರ ಕೋಟಿಯನ್ನು ಬಡವರ ಕಲ್ಯಾಣಕ್ಕಾಗಿ ನೀಡಿದ್ದೇವೆ. ಕಡುಬಡವರಿಗೆ ನಾವು ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ, ನಮ್ಮ ಕಾರ್ಯಕ್ರಮಗಳನ್ನು ಮೆಚ್ಚಿ ಮತದಾರರು ನಮಗೆ ಮತ ನೀಡಿದ್ದಾರೆ’ ಎಂದು ನುಡಿದರು.
‘ಬಿಜೆಪಿ ಎಷ್ಟೇ ಬೊಬ್ಬೆ ಹೊಡೆದರೂ ಜನರು ಅದಕ್ಕೆ ಮರಳಾಗಿಲ್ಲ. ರಾಜಕೀಯವಾಗಿ ಬೇರೆ ಬೇರೆ ವಿಚಾರಗಳನ್ನು ಅವರು ಹರಿಬಿಟ್ಟರು. ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಜನ ನಮ್ಮ ಪರವಾಗಿದ್ದಾರೆ ಎನ್ನುವುದು ಈ ಫಲಿತಾಂಶದಿಂದ ಗೊತ್ತಾಗಿದೆ. ಅವರು ತಮ್ಮ ಕಾರ್ಯವೈಖರಿ ಬದಲಾಯಿಸಿಕೊಳ್ಳಬೇಕು, ಸಲಹೆ ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.
‘ಕಾಂಗ್ರೆಸ್ ಯೋಜನೆಗಳಿಂದ ನಮಗೆ ಜನಾದೇಶ ಸಿಕ್ಕಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳನ್ನು ನಾಲ್ಕೂವರೆ ಕೋಟಿ ಜನರಿಗೆ ತಲುಪಿಸುತ್ತಿದ್ದೇವೆ. ಸ್ವಾತಂತ್ರ್ಯ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ದಿಟ್ಟ ಹೆಜ್ಜೆ ಇಟ್ಟಿದ್ದು ನಮ್ಮ ರಾಜ್ಯ ಸರ್ಕಾರ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿತು. ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿತು. ಎಲ್ಲಾ ವರ್ಗದವರಿಗೆ ಕೆಲಸ, ಆಹಾರ ಸಿಗಬೇಕೆಂಬುದು ಇದರ ಉದ್ದೇಶ’ ಎಂದು ವಿವರಿಸಿದರು.
ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ಭರವಸೆ ಫಲ ನೀಡಲಿಲ್ಲವೇಕೇ ಎಂಬ ಪ್ರಶ್ನೆಗೆ, ‘ಅಲ್ಲಿನ ವಿಚಾರ ನನಗೆ ಗೊತ್ತಿಲ್ಲ. ಶರದ್ ಪವಾರ್ ನೇತೃತ್ವದ ಎನ್ಸಿಪಿ ವಿಬ್ಭಾಗವಾಗಿದ್ದರಿಂದ ಸಮಸ್ಯೆ ಆಗಿದೆ. ಇದರಿಂದ ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆಯಾಗಿದೆ’ ಎಂದರು.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆಯೇ ಎಂಬ ಪ್ರಶ್ನೆಗೆ, ‘ಸಂಪುಟ ಪುನರಚನೆ ಕುರಿತು ಯಾವುದೆ ಚರ್ಚೆ ಆಗಿಲ್ಲ. ಸದ್ಯಕ್ಕೆ ಅಂತಹ ಯಾವುದೇ ನಿರ್ಧಾರ ಆಗಿಲ್ಲ’ ಎಂದು ಹೇಳಿದರು.
ನಂತರ ಸಚಿವರು ಸಾಯಿ ಬಾಬಾ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.