ಡಾಕ್ಟರ್, ಇಂಜಿನಿಯರಿಂಗ್ ಓದಿದ್ದರೂ ಮೌಢ್ಯ, ಕಂದಾಚಾರ ಬಿಡೋದೇ ಇಲ್ಲ: ಸಿಎಂ ಸಿದ್ದರಾಮಯ್ಯ
ಡಾಕ್ಟರ್ ಓದಿರ್ತಾರೆ, ಎಂಜಿನಿಯರಿಂಗ್ ಓದಿರ್ತಾರೆ. ಆದರೆ ಮೌಡ್ಯ, ಕಂದಾಚಾರ ಬಿಡೋದೇ ಇಲ್ಲ. ಇಂಥಾ ಶಿಕ್ಷಣ ಬೇಕಾ? ಕರ್ಮ ಸಿದ್ಧಾಂತ ತಿರಸ್ಕರಿಸಿದ್ದ ಬಸವಣ್ಣನವರ ಹೆಸರಲ್ಲೇ ಈಗ ಕರ್ಮ ಸಿದ್ಧಾಂತ ಪಾಲಿಸುವವರು ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಶುಕ್ರವಾರ ಸಿದ್ಧಾರ್ಥ ಎಜುಕೇಷನ್ ಸೊಸೈಟಿಯ ಕ್ವೆಸ್ಟ್ ಶಿಕ್ಷಣ ಅಕಾಡೆಮಿ ಉದ್ಘಾಟಿಸಿ ಮಾತನಾಡಿದ ಅವರು, ಬರೀ ಶಿಕ್ಷಣ ಸಿಕ್ಕರೆ ಸಾಲದು. ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ನಮ್ಮ ವಿಕಾಸ ಆಗಲು, ಸ್ವಾಭಿಮಾನಿಗಳಾಗಲು ಶಿಕ್ಷಣ ಅತ್ಯಗತ್ಯ. ಬಹಳ ಮಂದಿ ಶಿಕ್ಷಿಣ ಪಡೆದಿರುತ್ತಾರೆ, ಆದರೆ ಅವರಲ್ಲಿ ಸಾಮಾಜಿಕ ಸ್ಪಂದನೆ, ಮಾನವೀಯ ಸ್ಪಂದನೆ ಇರುವುದಿಲ್ಲ. ಶಿಕ್ಷಣ ಕಲಿತೂ ಜಾತಿವಾದಿಗಳಾದು, ಧಾರ್ಮಿಕ ತಾರತಮ್ಯ ಪಾಲಿಸೋದು ಮಾಡಿದ್ರೆ ಅಂಥಾ ಶಿಕ್ಷಣದಿಂದ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.
ಕೆಲವರು ಮಾತ್ರ ಸಮಾಜದ ಸವಲತ್ತುಗಳನ್ನು ಅನುಭವಿಸಬೇಕಾ? ಸಮಾಜದ ಪ್ರತಿಯೊಬ್ಬರಿಗೂ ಈ ಸವಲತ್ತುಗಳು ಸಿಗಬೇಕು ತಾನೇ? ಸಾಮಾಜಿಕ ತಾರತಮ್ಯ ಹೋಗಬೇಕು ತಾನೇ? ಬಸವಣ್ಣನವರು ಜಾತಿ ವ್ಯವಸ್ಥೆ ವಿರುದ್ಧ ಸಂದೇಶ ಕೊಟ್ಟು 850 ವರ್ಷ ಆಯ್ತು. ಆದರೆ ಇವತ್ತೂ ಅವರೆಲ್ಲಾ ಜಾತಿ ಮಾಡ್ತಾನೇ ಇದಾರೆ. ಇದು ತಪ್ಪಲ್ವಾ ಎಂದು ಅವರು ಪ್ರಶ್ನಿಸಿದರು.
ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಈ ಹಕ್ಕು ಸುಮ್ಮನೆ ಬರಲಿಲ್ಲ. ಶೂದ್ರರ ರೀತಿ, ಮಹಿಳೆಯರನ್ನೂ ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಮೂಲೆಯಲ್ಲಿ ಇರಿಸಲಾಗಿತ್ತು. ಆದರೆ ಈಗ ನಿರಂತರ ಹೋರಾಟದ ಫಲವಾಗಿ ಶಿಕ್ಷಣದ ಹಕ್ಕು ಬಂದಿದೆ. ಈ ಶಿಕ್ಷಣ ವೈಚಾರಿಕವಾಗಿರಬೇಕು, ವೈಜ್ಞಾನಿಕವಾಗಿರಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬಸವಣ್ಣನವರು ಕರ್ಮ ಸಿದ್ಧಾಂತ ತಿರಸ್ಕರಿಸಿದ್ದರು
ಬಸವಣ್ಣನವರು ಕರ್ಮ ಸಿದ್ಧಾಂತ ತಿರಸ್ಕರಿಸಿದ್ದರು. ಹಣೆಬರಹ ಅನ್ನೋದನ್ನೆಲ್ಲಾ ಧಿಕ್ಕರಿಸಿದ್ದರು. ಆದರೂ ಈಗಲೂ ಬಸವಣ್ಣನವರ ಹೆಸರಲ್ಲಿ ಕರ್ಮಸಿದ್ಧಾಂತ ಪಾಲಿಸುವ ಶಿಕ್ಷಿತರಿದ್ದಾರೆ. ಇಂಥಾ ಶಿಕ್ಷಣ ಬೇಡವೇ ಬೇಡ ಎಂದರು.
ನಮ್ ಜಾತಿಯವನು ಅದ್ಕೆ ಓಟು ಹಾಕಿ ಅಂತಾರೆ ವಿದ್ಯಾವಂತರು!
ಹೇಳಿಕೊಳ್ಳೋಕೆ ವಿದ್ಯಾವಂತರು. ಆದರೆ, ಇವನು ನಮ್ ಜಾತಿಯವನಲ್ಲ, ಓಟು ಹಾಕೋದು ಬೇಡ ಅಂತಾರೆ. ಮತ್ತೆ ಕೆಲವರು ಇವನು ನಮ್ಮ ಜಾತಿಯವನು ಅದಕ್ಕೇ ಓಟು ಹಾಕಿ ಅಂತಾರೆ. ಅವನಿಗೆ ರಾಜಕೀಯ ಪ್ರಜ್ಞೆ , ತಿಳಿವಳಿಕೆ, ಕಾಳಜಿ ಇದೆಯೊ, ಇಲ್ವೋ ಗೊತ್ತಿಲ್ಲ. ಜಾತಿ ನೋಡು, ಓಟು ಹಾಕು ಅಷ್ಟೆ. ಇದಕ್ಕೆ ವಿದ್ಯೆ ಕಲಿಬೇಕಾ ಎಂದು ಪ್ರಶ್ನಿಸಿದರು.
ಸಿದ್ಧಾರ್ಥ ಸಂಸ್ಥೆಯ ಅಧ್ಯಕ್ಷ ಗೃಹ ಸಚಿವರಾದ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ , ಶಾಸಕರಾದ ತನ್ವೀರ್ ಸೇಠ್ , ಕೃಷ್ಣಮೂರ್ತಿ, ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.