ಪುಣೆ: ಮಾರ್ಚ್ 06 (ಉದಯಕಾಲ) ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಭೇಟಿಗಾಗಿ ಪುಣೆಗೆ ಆಗಮಿಸಿದ್ದಾರೆ. ಪುಣೆ ಮಹಾನಗರ ಪಾಲಿಕೆ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದರು. ಈ ವಿಗ್ರಹವನ್ನು 1850 ಕೆಜಿ ಲೋಹದಿಂದ ಮಾಡಲಾಗಿದ್ದು, ಸುಮಾರು ಒಂಭತ್ತೂವರೆ ಅಡಿ ಎತ್ತರವಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಪುಣೆ ಮೇಯರ್ ಮುರಳೀಧರ್ ಮೊಹೋಲ್ ಉಪಸ್ಥಿತರಿದ್ದರು.
ಇದಾದ ನಂತರ ಪ್ರಧಾನಿ ಮೋದಿ ಅವರು ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು. ಬಳಿಕ ಅವರೇ ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಧಾನಿ ಮೋದಿ, ಶಾಲಾ ಮಕ್ಕಳು ಮತ್ತು ಉಳಿದ ಜನರೊಂದಿಗೆ ಸಂವಾದ ನಡೆಸಿದರು.
ಡಿಸೆಂಬರ್ 24, 2016ರಂದು ಪ್ರಧಾನಿ ಮೋದಿ ಈ ಮೆಟ್ರೋ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಯೋಜನೆಯು ಒಟ್ಟು 32.2 ಕಿಮೀ ಆಗಿದ್ದು, ಪ್ರಧಾನಿ ಮೋದಿ ಇಂದು 12 ಕಿಮೀ ಉದ್ದದ ವಿಭಾಗವನ್ನು ಉದ್ಘಾಟಿಸಿದರು. ಇಡೀ ಯೋಜನೆಯ ವೆಚ್ಚ ಸುಮಾರು 11,400 ಕೋಟಿ ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಗಾರ್ವೇರ್ ಮೆಟ್ರೋ ನಿಲ್ದಾಣದಲ್ಲಿ ಪ್ರದರ್ಶನವನ್ನು ಉದ್ಘಾಟಿಸಿ ಪರಿಶೀಲಿಸಿದರು. ಬಳಿಕ ಆನಂದನಗರ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಿದರು.
ಪುಣೆಗೆ ತೆರಳುವ ಮುನ್ನ ಟ್ವೀಟ್ ಮಾಡಿದ ಪ್ರಧಾನಿ ಮೋದಿ, “ಪುಣೆಗೆ ತೆರಳುತ್ತಿದ್ದೇನೆ. ಅಲ್ಲಿ ಮೆಟ್ರೋ ರೈಲು ಯೋಜನೆಯ ಉದ್ಘಾಟನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಆಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ” ಎಂದು ತಿಳಿಸಿದ್ದರು.