ವಿದೇಶಿ ದೇಣಿಗೆ ನಿಯಂತ್ರಣಾ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು

ನವದೆಹಲಿ, ಸೆ 23: ಎನ್ ಜಿಒಗಳು ಪಡೆಯುವ ವಿದೇಶಿ ನಿಧಿಗಳನ್ನು ನಿಯಂತ್ರಿಸಲು ಅವಕಾಶ ಮಾಡಿಕೊಡುವ ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ-2020ನ್ನು ರಾಜ್ಯಸಭೆ ಇಂದು ಅಂಗೀಕರಿಸುವುದರೊಂದಿಗೆ ಮಸೂದೆಗೆ ಸಂಸತ್‍ನ ಅನುಮೋದನೆ ದೊರೆತಿದೆ.
ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಸದನದಲ್ಲಿ ಮಸೂದೆಯನ್ನು ಪರಿಗಣನೆ ಮತ್ತು ಅಂಗೀಕಾರಕ್ಕೆ ಮಂಡಿಸಿದರು.
ಈ ತಿಂಗಳ 20ರಂದು ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ-2010ಕ್ಕೆ ಈ ಮಸೂದೆ ತಿದ್ದುಪಡಿ ತರಲಿದೆ. ಮಸೂದೆಯು ಕಂಪನಿಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳು ಪಡೆಯುವ ಮತ್ತು ಬಳಸಿಕೊಳ್ಳುವ ವಿದೇಶಿ ದೇಣಿಗೆಯನ್ನು ನಿಯಂತ್ರಿಸಲಿದೆ.
ಮಸೂದೆಯು ಯಾವುದೇ ವಿದೇಶಿ ದೇಣಿಗೆ ಪಡೆಯುವುದಕ್ಕೆ ಸರ್ಕಾರಿ ನೌಕರರನ್ನು ನಿಷೇಧಿಸಲಿದೆ. ವಿದೇಶಿ ದೇಣಿಗೆ ಪಡೆಯುವುದಕ್ಕೆ ಸಂಸ್ಥೆಗಳು ಇಲ್ಲವೆ ಕಂಪನಿಗಳ ಎಲ್ಲ ಪದಾಧಿಕಾರಿಗಳು ಮತ್ತು ನಿರ್ದೇಶಕರಿಗೆ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಿದೆ.
ಕೇಂದ್ರ ಸರ್ಕಾರ ಸೂಚಿಸಿದ ಬ್ಯಾಂಕ್‍ನಲ್ಲಿ ಮಾತ್ರ ವಿದೇಶಿ ದೇಣಿಗೆ ಪಡೆಯಲು ಖಾತೆ ತೆರೆಯಬಹುದಾಗಿದೆ. ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ವಿದೇಶಿ ನಿಧಿಗಳು ದೇಶದ ಸಾಮಾಜಿಕ ಮತ್ತು ರಾಜಕೀಯ ವಲಯಗಳ ಮೇಲೆ ಪರಿಣಾಮ ಬೀರದಿರುವ ಉದ್ದೇಶದಿಂದ ಮಸೂದೆ ಜಾರಿಗೆ ತರಲಾಗುತ್ತಿದೆ. ಹೊಸ ಮಸೂದೆಯಿಂದ ವಿದೇಶಿ ನಿಧಿ ಕಾರ್ಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಸಾಧ್ಯವಾಗಲಿದೆ ಎಂದರು.

Leave a Reply

Your email address will not be published. Required fields are marked *