Menu

ಪಾಕಿಸ್ತಾನದ ಟಿಆರ್‌ಎಫ್‌ ಜಾಗತಿಕ ಭಯೋತ್ಪಾದಕ ಸಂಘಟನೆಯಾಗಿ ಘೋಷಣೆ

terrorist

ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಅಂಗ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಅಮೆರಿಕವು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

ಈ ನಿರ್ಧಾರವನ್ನು ಭಾರತ ಸರ್ಕಾರವು ಸ್ವಾಗತಿಸಿದೆ. ಡೊನಾಲ್ಡ್ ಟ್ರಂಪ್ ಸರ್ಕಾರವು ಟಿಆರ್‌ಎಫ್ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದು, ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಾಹಿತಿ ನೀಡಿದ್ದಾರೆ.

ಹಲವು ವರ್ಷಗಳಿಂದ ಟಿಆರ್‌ಎಫ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ.

ವಿಶೇಷವಾಗಿ, ಭದ್ರತಾ ಪಡೆಗಳ ಮೇಲಿನ ದಾಳಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಗುರಿಯಿಟ್ಟ ಹತ್ಯೆಗಳು ಟಿಆರ್‌ಎಫ್‌ನ ಕಾರ್ಯತಂತ್ರದ ಭಾಗವಾಗಿವೆ. ಕಾಶ್ಮೀರಿಯೇತರ ನಾಗರಿಕರನ್ನು ಟಿಆರ್‌ಎಫ್ ಗುರಿಯಾಗಿಸಿಕೊಂಡಿತ್ತು.

ಪಹಲ್ಗಾಮ್ ಉಗ್ರದಾಳಿಯ ರೂವಾರಿ

ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಿದ್ದರು.

ಈ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಟಿಆರ್‌ಎಫ್ ಸಂಘಟನೆಯೇ ವಹಿಸಿಕೊಂಡಿತ್ತು. ಪಾಕಿಸ್ತಾನ ಮೂಲದ ಈ ಟಿಆರ್‌ಎಫ್ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯು ೨೦೦೮ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಟಿಆರ್‌ಎಫ್‌ಅನ್ನು ವಿದೇಶಿ ಭಯೋತ್ಪಾದನಾ ಸಂಘಟನೆ ಎಂದು ಗೊತ್ತುಪಡಿಸುವುದರಿಂದ, ಅದರ ಸದಸ್ಯರ ಮೇಲೆ ಕಠಿಣ ಆರ್ಥಿಕ ಮತ್ತು ಪ್ರಯಾಣ ನಿರ್ಬಂಧಗಳನ್ನು ಅಮೆರಿಕ ವಿಧಿಸಲಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಭಾರತದ ಜೊತೆ ನಿಲ್ಲುತ್ತದೆ ಮತ್ತು ಭಾರತಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ರುಬಿಯೊ ತಿಳಿಸಿದ್ದಾರೆ.

ಈ ಕ್ರಮವು ಅಮೆರಿಕದ ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ವಿರುದ್ಧದ ಹೋರಾಟ, ಮತ್ತು ಭಾರತದೊಂದಿಗಿನ ಸಹಕಾರಕ್ಕೆ ಪುರಾವೆಯಾಗಿದೆ ಎಂದು ಅವರು ಹೇಳಿದರು.

ಭಾರತದ ಸ್ವಾಗತ:

ಟಿಆರ್‌ಎಫ್‌ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಅಮೆರಿಕದ ಕ್ರಮವನ್ನು ಭಾರತ ಸ್ವಾಗತಿಸಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ಟಿಆರ್‌ಎಫ್ ಗೊತ್ತುಪಡಿಸಿದ್ದಕ್ಕಾಗಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅಮೆರಿಕವನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಘಿನಲ್ಲಿ ಟ್ವೀಟ್ ಮಾಡಿರುವ ಜೈಶಂಕರ್, “ಭಾರತ-ಅಮೆರಿಕ ಭಯೋತ್ಪಾದನಾ ನಿಗ್ರಹ ಸಹಕಾರದ ಬಲವಾದ ದೃಢೀಕರಣ. ಲಷ್ಕರ್-ಎ-ತೊಯ್ಬಾದ ಅಂಗಸಂಘಟನೆ ಟಿಆರ್‌ಎಫ್‌ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ  ಎಂದು ಗೊತ್ತುಪಡಿಸಿದ್ದಕ್ಕಾಗಿ ಅಮೆರಿಕ ಸರ್ಕಾರವನ್ನು ಶ್ಲಾಘಿಸುತ್ತೇವೆ.

ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಅದು ವಹಿಸಿಕೊಂಡಿದೆ” ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *