ರಾಜ್ಯದ ಪ್ರವಾಹ ಸಂತ್ರಸ್ತರಿಗೆ ತ್ವರಿತ ಪರಿಹಾರ ನೀಡಿ, ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ

ರಾಜ್ಯದ ಪ್ರವಾಹ ಸಂತ್ರಸ್ತರಿಗೆ ತ್ವರಿತ ಪರಿಹಾರ ನೀಡಿ, ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಅ 29 ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸುವುದರ ಜೊತೆಗೆ ಹಾನಿಗೊಳಗಾದ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಮರು ನಿರ್ಮಾಣ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೀದರ್, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿ ಆಧರಿಸಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಪಡಿಸಿದ್ದಾರೆ.
ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ತುರ್ತಾಗಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು. ಸರ್ಕಾರಕ್ಕೆ ಚುನಾವಣೆಗಳು ಆದ್ಯತೆಯಾಗಿವೆಯೇ ಹೊರತು ಜನರ ಸಂಕಷ್ಟಗಳಲ್ಲ. ಇದು ಜನರಿಂದ ಆಯ್ಕೆಯಾದ ಸರ್ಕಾರದ ಕ್ರೂರ, ದುಷ್ಟ ಸರ್ಕಾರ ಎನ್ನದೆ ಬೇರೆ ದಾರಿಗಳೇ ಇಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ತವರು ಕ್ಷೇತ್ರ ಬಾದಾಮಿ ಕ್ಷೇತ್ರದ ಅನೇಕ ಗ್ರಾಮಗಳಿಗೆ ಹಾಗೂ ಬೀದರ್, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದು ,ಈ ವರ್ಷದ ಹಾನಿ ಹಿಂದೆಂದಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿದೆ ಎಂದು ಹೇಳಿದ್ದಾರೆ. .
ಪೂರ್ಣ ಹಾನಿಯಾದ ಮನೆಗಳಿಗೆ ರೂ.5.00 ಲಕ್ಷ ನೀಡುವುದಾಗಿ ಹೇಳಿ ಇದುವರೆಗೆ ಕೇವಲ ರೂ.1.00 ಲಕ್ಷಗಳನ್ನು ನೀಡಲಾಗಿದೆ
ಕೊರೋನಕ್ಕೆ ತುತ್ತಾಗಿ ಜೀವನವನ್ನು ಕಳೆದುಕೊಂಡು ಹಳ್ಳಿಗಳಿಗೆ ಬಂದ ಜನ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.30 ಕ್ಕಿಂತ ಅಧಿಕ ಭಿತ್ತನೆಯಾಗಿದೆ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭೀಕರ ಮಳೆಯಾಗಿದೆ. ಉಳಿದ ಜಿಲ್ಲೆಗಳ ಜನರ ದು:ಖವೂ ಭಿನ್ನವಾಗಿಲ್ಲ. ಶೇಂಗಾ, ಈರುಳ್ಳಿ, ಅಡಿಕೆ, ಭತ್ತ, ಕಾಫಿ, ಮೆಣಸು, ಜೋಳ, ಹಲವು ದ್ವಿದಳ ಧಾನ್ಯಗಳು, ಹತ್ತಿ, ಮೆಣಸು, ಮೆಣಸಿನಕಾಯಿ, ರಾಗಿ, ಸಜ್ಜೆ ಮುಂತಾದ ಬೆಳೆಗಳೆಲ್ಲ ಕೊಳೆತು ಹಾಳಾಗಿದೆ.
ನಗರಗಳಿಗೆ ವ್ಯಾಪಕವಾಗಿ ವಲಸೆ ಹೋಗುವ ಕಲ್ಯಾಣ ಕರ್ನಾಟಕದ ರೈತಾಪಿ ಮಕ್ಕಳು, ಬಡವರ ಬದುಕು ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಕಳೆದ ವರ್ಷ ಬಿದ್ದ ಮಳೆಯಿಂದಾಗಿ ಹಾನಿಯಾದ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ 2,47,000 ಮನೆಗಳಿಗೆ ಹಾನಿಯಾಗಿದೆ ಎಂದು ಮನವಿ ಸಲ್ಲಿಸಲಾಗಿದೆ. ಆದರೆ ಪರಿಹಾರ ನೀಡಿರುವುದು ಕೇವಲ 1,24,000 ಮನೆಗಳಿಗೆ ಮಾತ್ರ. ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅದರ ಎರಡರಿಂದ ಎರಡೂವರೆ ಪಟ್ಟು ಹೆಚ್ಚು ಹಾನಿಯಾಗಿದೆ. ಆಗಸ್ಟ್ ತಿಂಗಳಲ್ಲಿ 4 ರಿಂದ 8 ಮತ್ತು 15 ರಿಂದ 18 ರವರೆಗೆ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳಲ್ಲಿ ಸುರಿದ ಮಳೆಯಿಂದಾಗಿ ಸುಮಾರು 4.60 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ, . 30,455 ಕಿ.ಮೀ. ರಸ್ತೆ, 5080 ಸರ್ಕಾರಿ ಕಟ್ಟಡಗಳು, 3,481 ಸೇತುವೆ, 1,659 ಕೆರೆಗಳು, 30,000 ಮನೆಗಳು ಹಾನಿಗೊಳಗಾಗಿದ್ದವು.
ಈಗ ಅಕ್ಟೋಬರ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಮುಕ್ಕಾಲು ರಾಜ್ಯವೇ ಕಂಗೆಟ್ಟು ಕೂತಿದೆ. ರೈತ ಬೆಳೆದ ಬೆಳೆ ಕೈಗೆ ಬರದೆ ನೀರು ಪಾಲಾಗಿದೆ.ಕರ್ನಾಟಕ ರೆಡ್ ಗ್ರಾಂ ಬೆಳೆಗಾರರ ಸಂಘದ ಅಂದಾಜಿನಂತೆ 7.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ ಅದರಲ್ಲಿ ಸುಮಾರು 60 ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾದ ದ್ವಿದಳ ಧಾನ್ಯಗಳ ಬೆಳೆಗಳು ನಷ್ಟವಾಗಿವೆ.
ಬೀದರ್ ಜಿಲ್ಲೆಯ ಕೃಷಿ ಇಲಾಖೆಯ ಪ್ರಕಾರ ಬಿತ್ತನೆಯಾದ 3,70,982 ಹೆಕ್ಟೇರ್ಗಳಲ್ಲಿ 2,47,209 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ. ಗುಲ್ಬರ್ಗದಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ 85 ಸಾವಿರ ಹೆಕ್ಟೇರ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳ ಮೊದಲ ವಾರದವರೆಗೆ 1.90 ಸಾವಿರ ಹೆಕ್ಟೇರ್ ಹಾನಿಯಾಗಿದ್ದರೆ, ಅಕ್ಟೋಬರ್ 12 ರಿಂದ 15 ರವರೆಗೆ ಮೂರು ದಿನಗಳ ಅವಧಿಯವರೆಗೆ ಸುಮಾರು 1.54 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಒಟ್ಟು 3,44,085 ಹೆಕ್ಟೇರ್ ಇದರಲ್ಲಿ 1.12 ಲಕ್ಷ ಹೆಕ್ಟೇರ್ ತೊಗರಿ, ಸುಮಾರು 34 ಸಾವಿರ ಹೆಕ್ಟೇರ್ ಹತ್ತಿ ನಾಶವಾಗಿದೆ.

ಸುಮಾರು ಒಂದು ಲಕ್ಷ ಮನೆಗಳಿಗೆ ಹಾನಿಯಾಗಿದೆ. ಗುಲ್ಬರ್ಗ ಜಿಲ್ಲಾಧಿಕಾರಿ ಪ್ರಕಾರ ಪ್ರಾಥಮಿಕ ಸಮೀಕ್ಷೆಯಂತೆ, ಗುಲ್ಬರ್ಗ ಜಿಲ್ಲೆಯೊಂದರಲ್ಲೇ ಸುಮಾರು 20 ಸಾವಿರ ಮನೆಗಳಿಗೆ ಹಾನಿಯಾಗಿದೆ. ದವಸ ಧಾನ್ಯ, ಬಟ್ಟೆ ಬರೆ, ಪುಸ್ತಕ ಕೊಚ್ಚಿ ಹೋಗಿವೆ. ಜನರಿಗೆ ರೋಗ ರುಜಿನಗಳು ಬಾಧಿಸುತ್ತಿವೆ. ಔಷಧಿಗಳಿಲ್ಲ ಜನರು ಬಹಳ ತೊಂದರೆ ಪಡುತ್ತಿದ್ದಾರೆ.

ರಾಯಚೂರಿನಲ್ಲಿ 3 ದಿನಗಳ ಮಳೆಗೆ ಸುಮಾರು 80 ಸಾವಿರ ಹೆಕ್ಟೇರ್, ಯಾದಗಿರಿಯಲ್ಲಿ 50 ಸಾವಿರ ಹೆಕ್ಟೇರ್, ಕೊಪ್ಪಳ 8,000 ಹೆಕ್ಟೇರ್, ಬಳ್ಳಾರಿಯಲ್ಲೂ ಸಾವಿರಾರು ಹೆಕ್ಟೇರ್ ಬೆಳೆದ ಬೆಳೆ ಹಾಳಾಗಿದೆ.

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಬೆಳೆದ ಬಹುಪಾಲು ಬೆಳೆಗಳು ಹಾನಿಗೊಳಗಾಗಿವೆ. ಕೊರೋನಾದಿಂದಾಗಿ ಕಂಗೆಟ್ಟು ಕೂತಿದ್ದ ರೈತರು ಮತ್ತು ಜನ ಸಾಮಾನ್ಯರ ಮೇಲೆ ಪ್ರವಾಹ ಮಾರಣಾಂತಿಕ ಹೊಡೆತ ನೀಡಿದೆ. ಜಿಲ್ಲಾಡಳಿತಗಳು ಹಾನಿಯ ಬಗ್ಗೆ ಪೂರ್ಣ ಸಮೀಕ್ಷೆ ಮಾಡಿಲ್ಲ.ಜಿಲ್ಲಾ ಉಸ್ತುವಾರಿ ಸಚಿವರುಗಳು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ.

Leave a Reply

Your email address will not be published. Required fields are marked *