ಭ್ರಷ್ಟಾಚಾರ ನಡೆದಿಲ್ಲ.. ತನಿಖೆಯ ಮಾತೇ ಇಲ್ಲ; ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಕೋವಿಡ್-19 ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರು, ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ.

Ashwat narayan

ವಿಕಾಸಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಪರಿಕರವನ್ನು ಆಯಾ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿಯೇ ಖರೀದಿ ಮಾಡಲಾಗಿದೆ. ಇದರಲ್ಲಿ ಒಂದು ನಯಾ ಪೈಸೆಯಷ್ಟೂ ಅಕ್ರಮ ನಡೆದಿಲ್ಲ. ಕೇವಲ ದುರುದ್ದೇಶದಿಂದ ಮಾತ್ರ ಪ್ರತಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆಂದು ತಿರುಗೇಟು ನೀಡಿದರು.
ಕೋವಿಡ್‌ ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬುದು ಪ್ರತಿಪಕ್ಷ ನಾಯಕರ ಕಪೋಲಕಲ್ಪಿತ ಊಹೆ ಮಾತ್ರ. ಕೇವಲ ಆರೋಪ ಮಾಡಲಿಕ್ಕೆ ಮಾತ್ರವೇ ಅವರು ಹೀಗೆ ಹೇಳಿರುವುದು ತಿರುಗೇಟು ನೀಡಿದ್ದಾರೆ.
ಅಂಕಿ-ಅಂಶಗಳನ್ನು ಹೇಳುವ ಭರದಲ್ಲಿಯೇ ಪ್ರತಿಪಕ್ಷ ನಾಯಕರು ಸುಳ್ಳು ಲೆಕ್ಕ ಹೇಳಿದ್ದಾರೆ. 2,220 ಕೋಟಿ ರೂ. ಅಕ್ರಮ ನಡೆದಿದೆ ಎಂದು ಅವರು ಹೇಳಿದ್ದಾರೆ. ಆದರೆ, ಇಡೀ ಕೋವಿಡ್​ಗಾಗಿ ಸರಕಾರ ಖರೀದಿ ಮಾಡಿರುವ ಪರಿಕರಗಳ ಒಟ್ಟಾರೆ ಮೊತ್ತ 290.6 ಕೋಟಿ ರೂ. ಮಾತ್ರ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 33 ಕೋಟಿಯಷ್ಟು ಮೊತ್ತದ ಪರಿಕರಗಳನ್ನು ಖರೀದಿಸಲಾಗಿದೆ. ಹಾಗಾದರೆ ಉಳಿದ ಲೆಕ್ಕದ ಬಗ್ಗೆ ಅವರು ಏನು ಹೇಳುತ್ತಾರೆ? ಅವರು ಜನರನ್ನು ದಿಕ್ಕು ತಪ್ಪಿಸಲು ಹಾಗೂ ಸರ್ಕಾರಕ್ಕೆ ಮಸಿ ಬಳಿಯಲು ಇಂಥ ಲೆಕ್ಕಗಳನ್ನು ಸೃಷ್ಟಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೋವಿಡ್-19 ಬಂದಾಗ ಒಂದು‌ ಕಂಪನಿ ಮಾತ್ರ ವೆಂಟಿಲೇಟರ್​ಗಳನ್ನು ತಯಾರು ಮಾಡುತ್ತಿತ್ತು. ಹೀಗಾಗಿ ಆಗಲೇ 130 ವೆಂಟಿಲೇಟರ್‌ಗೆ ಆದೇಶ ನೀಡಲಾಗಿತ್ತು. ಅದನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೂ ಆರ್ಡರ್ ಮಾಡಲಾಗಿತ್ತು. ಆ ಕಂಪನಿ 130 ವೆಂಟಿಲೇಟರ್ ಪೈಕಿ 80 ಮಾತ್ರ ಪೂರೈಸಿತ್ತು. ಪ್ರತಿಯೊಂದರ ಬೆಲೆ 5.65 ಲಕ್ಷ. 18 ಲಕ್ಷ ರೂ. ಗಳಿಗೆ ಐಸಿಯು‌ನಲ್ಲಿ‌ ಬಳಸಬಹುದಾದ ಉತ್ಕೃಷ್ಟ ಗುಣಮಟ್ಟದ ವೆಂಟಿಲೇಟರ್ ಖರೀದಿಯಾಗಿದೆ.
ಇನ್ನು ತಮಿಳುನಾಡಿನಲ್ಲಿ ಕೇವಲ 4 ಲಕ್ಷಕ್ಕೆ ವೆಂಟಿಲೇಟರ್ ಕೊಡುತ್ತಾರೆ ಎನ್ನುತ್ತಾರೆ. ಅದು ಮೊಬೈಲ್ ವೆಂಟಿಲೇಟರ್. ಒಂದು‌ ಕಡೆಯಿಂದ ಇನ್ನೊಂದು ಕಡೆ ತೆಗೆದುಕೊಂಡು ಹೋಗಲು, ಕೇವಲ ಅಂಬ್ಯುಲೆನ್ಸ್‌ನಲ್ಲಿ ಬಳಕೆಯಾಗುವ ವೆಂಟಿಲೇಟರ್. ಶಿವಾನಂದ ಪಾಟೀಲ್ ಆರೋಗ್ಯ ಸಚಿವರಾಗಿದ್ದಾಗ 2019ರಲ್ಲಿ ವೆಂಟಿಲೇಟರ್ ಖರೀದಿಯಾಗಿದೆ. ಆಗ 15,12,000 ರೂ. ವೆಚ್ಚ ಮಾಡಲಾಗಿದೆ. ಅಂದಿನ ಪರಿಸ್ಥಿತಿ ಏನಿತ್ತು? ಇದುವರೆಗೆ ಮೂರು ಬಾರಿ ವೆಂಟಿಲೇಟರ್ ಖರೀದಿಯಾಗಿದೆ. ಇದೆಲ್ಲ ಪ್ರತಿಪಕ್ಷ ನಾಯಕರಿಗೆ ಗೊತ್ತಿಲ್ಲವೇ? ಎಂದು ಡಿಸಿಎಂ ಪ್ರಶ್ನಿಸಿದ್ದಾರೆ.
ರಾಜ್ಯ ಈ ವರ್ಷದ ಆರಂಭದಿಂದಲೂ ಕೋವಿಡ್-19 ಎದುರಿಸುವ ಪರಿಸ್ಥಿತಿ ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಬೇಕಿತ್ತು. ಬೇರೆ ಹಂತದಲ್ಲಿ ಹುಷಾರು ತಪ್ಪಿದವರು ಆಸ್ಪತ್ರೆಗೆ ಬರುತ್ತಾರೆ. ಹಿಂದೆ ದುಡ್ಡು ಕೊಟ್ಟರೂ ಸ್ಯಾನಿಟೈಸರ್​, (N-95) ಮಾಸ್ಕ್ ಸಿಗುತ್ತಿರಲಿಲ್ಲ. ಪಿಪಿಇ ಕಿಟ್ ಕೂಡ ಇರಲಿಲ್ಲ. ಎಲ್ಲಾ ಪರಿಕರಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ಸೋಂಕಿನಿಂದ ಏಕಾಏಕಿ ಬೇಡಿಕೆ ಹೆಚ್ಚಾಯಿತು. ಅಂತಹ ಸಂದರ್ಭದಲ್ಲಿ ಚೀನಾ ಕೂಡ ಕೈಕೊಟ್ಟಿತು. ಇವತ್ತು ಒಳ್ಳೆಯ ಪಿಪಿಇ ಕಿಟ್ 3,900 ರೂ. ಇದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದೆ. ಇದರಲ್ಲಿ ತನಿಖೆಯ ಪ್ರಶ್ನೆಯೇ ಇಲ್ಲ. ಅಗತ್ಯ ಬಿದ್ದರೆ ಸದನದಲ್ಲಿ ಉತ್ತರ ನೀಡಲು ಸರಕಾರ ಸಿದ್ಧವಿದೆ. ಸರಕಾರದ್ದು ಎಳ್ಳಷ್ಟು ತಪ್ಪಿಲ್ಲ. ಹೀಗೆ ತಪ್ಪಿಲ್ಲ ಎಂದ ಮೇಲೆ ತನಿಖೆಯ ಮಾತೇ ಬರುವುದಿಲ್ಲ. ಸುಖಾಸುಮ್ಮನೆ ಹಿಟ್ ಅಂಡ್ ರನ್ ಮಾಡಬಾರದು ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.

Leave a Reply

Your email address will not be published. Required fields are marked *