ಎನ್.ಇ.ಪಿ ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ನಾಗ್ಪುರ ಶಿಕ್ಷಣ ನೀತಿ: ಡಿ.ಕೆ. ಶಿವಕುಮಾರ್ ಆಕ್ರೋಶ

ಎನ್.ಇ.ಪಿ ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ನಾಗ್ಪುರ ಶಿಕ್ಷಣ ನೀತಿ: ಡಿ.ಕೆ. ಶಿವಕುಮಾರ್ ಆಕ್ರೋಶ

ಬೆಂಗಳೂರು, ಸೆ, 4 ;

ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿರುವ ಎನ್.ಇ.ಪಿ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ಅದು ನಾಗ್ಪುರ ಶಿಕ್ಷಣ ನೀತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ಚರ್ಚೆ ಆಗದೇ ಇರುವ ನೀತಿಯನ್ನು ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ. ನೀವು ಏನೇ ತಿಪ್ಪರಲಾಗ ಹಾಕಿದರೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾಗದೇ ಇದನ್ನು ಜಾರಿಗೊಳಿಸಲು ಅವಕಾಶ ಕೊಡುವುದಿಲ್ಲ’ ಎಂದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಜಿಲ್ಲಾವಾರು ಮುಖಂಡರ ಸಭೆ ನಡೆಸಿದ ಶಿವಕುಮಾರ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶಿಕ್ಷಣ ನೀತಿ ಬಗ್ಗೆ ರಾಷ್ಟ್ರಾದ್ಯಂತ ವ್ಯಾಪಕ ಚರ್ಚೆ ಆಗಬೇಕು. ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್ ಚರ್ಚಿಸಿಲ್ಲ. ಸದನ ಸಮಿತಿ ರಚಿಸಿ, ರಾಜ್ಯದುದ್ದಗಲಕ್ಕೂ ಜನರ ಜತೆ ಚರ್ಚಿಸಿ, ಅಭಿಪ್ರಾಯ ಪಡೆಯುವವರೆಗೂ ರಾಜ್ಯದಲ್ಲಿ ಇದರ ಜಾರಿಗೆ ನಾವು ಅವಕಾಶ ನೀಡುವುದಿಲ್ಲ ಎಂದರು.

ನಾನು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದು, ವಿದ್ಯಾಸಂಸ್ಥೆಗಳನ್ನು ನಡೆಸುತ್ತಾ ಬಂದಿದ್ದೇನೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಟ್ರಸ್ಟಿಯೂ ಆಗಿದ್ದೇನೆ. ಈ ನೂತನ ಶಿಕ್ಷಣ ನೀತಿ ಏನು, ಅದರಿಂದ ಆಗುವ ಪ್ರಯೋಜನೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ನನ್ನಿಂದಲೇ ಸಾಧ್ಯವಾಗುತ್ತಿಲ್ಲ ಎಂದರು.

ಇದನ್ನು ಅರ್ಥ ಮಾಡಿಕೊಳ್ಳಲು ಹಲವು ಬಾರಿ ವಿದ್ಯಾರ್ಥಿಗಳು, ಶಿಕ್ಷಕರು, ತಜ್ಞರ ಜತೆ ಚರ್ಚೆ ಮಾಡಿ ಪ್ರಯತ್ನಪಟ್ಟರೂ ಇದರ ಒಳಗುಟ್ಟು ಏನು ಎಂಬುದೇ ಅರ್ಥವಾಗುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಯಾಕಿಷ್ಟು ಆತುರದಲ್ಲಿ ಇದನ್ನು ಜಾರಿ ತರಲು ಮುಂದಾಗಿದೆಯೋ ತಿಳಿಯುತ್ತಿಲ್ಲ. ಶಿಕ್ಷಕರು ಇಲ್ಲ, ವಿದ್ಯಾರ್ಥಿಗಳು ಶಾಲೆ ಸೇರಲು ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾರ ಜತೆಗೂ ಸರ್ಕಾರ ಈ ನೂತನ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡಿಲ್ಲ. ಸಂಸತ್ತಿನಿಂದ ಹಿಡಿದು, ವಿಧಾನ ಮಂಡಲದ ಉಭಯ ಸದನಗಳವರೆಗೂ ಎಲ್ಲೂ ಚರ್ಚೆ ಆಗಿಲ್ಲ ಎಂದರು.

ಶಿಕ್ಷಣ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ರಾಷ್ಟ್ರ ಮಟ್ಟದಲ್ಲಿ ನೀತಿ ನಿರೂಪಿಸಬೇಕು ನಿಜ. ಆದರೆ ಅದರ ಬಗ್ಗೆ ಎಲ್ಲ ಕಡೆಗಳಲ್ಲೂ ವ್ಯಾಪಕ ಚರ್ಚೆ ಆಗಬೇಕು. ಚರ್ಚೆಯೇ ನಡೆಯದೇ, ಏಕಾಏಕಿ ಈ ನೀತಿ ಜಾರಿಗೊಳಿಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿರುವುದರಿಂದ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಗಾಬರಿಗೊಂಡಿದ್ದಾರೆ.  ರಾಜ್ಯದಲ್ಲಿ ಈ ನೀತಿ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್, ಶಿಕ್ಷಣ ಸಂಸ್ಥೆಗಳು, ಪೋಷಕರು, ಶಿಕ್ಷಕರ ಮಟ್ಟದಲ್ಲಿ ಸಂಪೂರ್ಣವಾಗಿ ಚರ್ಚೆಯಾಗುವವರೆಗೂ ಈ ನೀತಿ ಜಾರಿಯನ್ನು ತಡೆ ಹಿಡಿಯಬೇಕು. ಅಲ್ಲಿಯವರೆಗೂ ನಾವು ಕೂಡ ಇದನ್ನು ವಿರೋಧಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಈ ನೀತಿಯಲ್ಲಿ ಕೆಲವು ಉತ್ತಮ ಅಂಶಗಳು ಇರಬಹುದು. ಇದು ಮಕ್ಕಳು, ರಾಜ್ಯ, ದೇಶದ ಭವಿಷ್ಯದ ವಿಚಾರ. ಈ ನೀತಿಯಲ್ಲಿ ತ್ರಿಭಾಷಾ ಸೂತ್ರ ಪರಿಚಯಿಸುವ ಮೂಲಕ ಹಿಂಬಾಗಿಲಿನಿಂದ ಹಿಂದಿ ಭಾಷೆ ಹೇರಿಕೆಗೆ ಪ್ರಯತ್ನಿಸಲಾಗುತ್ತಿದೆ. ಈ ವಿಚಾರವಾಗಿ ಕನ್ನಡಪರ ಸಂಘಟನೆಗಳು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಇದೇ ನೀತಿಯನ್ನು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ನಲ್ಲಿ ಯಾಕೆ ಮೊದಲು ಜಾರಿ ಮಾಡಲು ಪ್ರಯತ್ನಿಸುತ್ತಿಲ್ಲ. ಕೇರಳ ಹಾಗೂ ತಮಿಳುನಾಡಿನಲ್ಲಿ ಇದರ ವಿಚಾರದಲ್ಲಿ ಮಾತು ಕೂಡ ಆಡುವ ಸ್ಥಿತಿ ಇಲ್ಲ. ಮಾತನಾಡಿದರೆ, ಅಲ್ಲಿನ ಜನ ಬಡಿಯುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಶಿಕ್ಷಣ ಸಚಿವರಿಗೆ ಸಾಮಾನ್ಯ ಪ್ರಜ್ಞೆಯೇ ಇಲ್ಲ ಎಂದು ಕಾಣುತ್ತದೆ. ಮುಖ್ಯಮಂತ್ರಿಗಳು ಅವರದೇ ಜಂಜಾಟದಲ್ಲಿ ಮುಳುಗಿರಬೇಕು! ಹೀಗಾಗಿ ಸಭೆಗಳ ಮೇಲೆ ಸಭೆ ನಡೆಯುತ್ತಿದ್ದರೂ ಈ ಬಗ್ಗೆ ಅವರು ಗಮನ ಹರಿಸಿಲ್ಲ. ಈ ನೀತಿಯಲ್ಲಿ ವಿದ್ಯಾರ್ಥಿ ಪದವಿ ಅವಧಿಯಲ್ಲಿ ಎರಡು ಮೂರು ವಿಷಯಗಳನ್ನು ವಿದ್ಯಾಭ್ಯಾಸ ಮಾಡಬಹುದಂತೆ. ಇದು ಹೇಗೆ ಸಾಧ್ಯ? ಇದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆಯೇ? ಸರ್ಕಾರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಟ್ಯಾಬ್ ಒದಗಿಸಿದೆಯೇ? ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡಲು ರಾಜ್ಯಾದ್ಯಂತ ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸಿದೆಯೇ? ಈ ಶಿಕ್ಷಣ ನೀತಿ ಕೇವಲ ನಗರದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆಯೇ ಹೊರತು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯಾವುದೇ ಲಾಭವಿಲ್ಲ ಎಂದರು.

ನಮ್ಮಲ್ಲಿ ಎಲ್ಲ ವರ್ಗದ ಜನ ಆತಂಕಕ್ಕೆ ಒಳಗಾಗಿದ್ದು, ಈ ನೀತಿ ಜಾರಿಗೊಳಿಸುವುದನ್ನು ನಿಲ್ಲಿಸಬೇಕು. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತಿದ್ದೇನೆ. ಈ ವಿಚಾರವಾಗಿ ನಾವು ಶಿಕ್ಷಣ ತಜ್ಞರ ಜತೆ ಚರ್ಚೆ ಮಾಡಿ ಅಧಿವೇಶನದಲ್ಲಿ ನಮ್ಮ ಪಕ್ಷದ ಅಭಿಪ್ರಾಯ ಮಂಡಿಸುತ್ತೇವೆ ಎಂದು ಹೇಳಿದರು.

ಭಾನು

,

Leave a Reply

Your email address will not be published. Required fields are marked *