ಬೆಂಗಳೂರು: ಜುಲೈ 06 ಮಹದಾಯಿ ಯೋಜನೆ ಕುರಿತು ರಾಜ್ಯ ಸರಕಾರ ತಾತ್ಸಾರ ಮಾಡ್ತಿದೆ ಎಂದು ಆರೋಪಿಸಿ ಆ ಭಾಗದ ಹೋರಾಟಗರರು ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಶಿವಾನಂದ ಸರ್ಕಲ್ ಬಳಿಯಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ ಹೋರಾಟಗಾರರು, ಮಹದಾಯಿ ಯೋಜನೆ ಬಗ್ಗೆ ರಾಜ್ಯ ಸರಕಾರ ತಾತ್ಸಾರ ಮಾಡುತ್ತಿದೆ. ಹೀಗಾಗಿ ಸರಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಸೊಬರದ ಮಠ, ಮಹದಾಯಿ ನೀರು ಹಂಚಿಕೆಯಾಗಿದೆ. ಮಲಪ್ರಭಾ ನದಿಗೆ ನೀರು ಜೋಡಣೆಯಾಗಬೇಕು. ಆದರೆ ಪರಿಸರ ಇಲಾಖೆ ಕ್ಲಿಯರೆನ್ಸ್ ಇಲ್ಲ ಅಂತಾರೆ. ಸರ್ಕಾರ ಯಾಕೆ ಕ್ಲಿಯರೆನ್ಸ್ ಕೊಡಿಸ್ತಿಲ್ಲ ಎಂದು ಪ್ರಶ್ನಿಸಿದ ಅವರು, ಎರಡೂ ಕಡೆ ಅವರದ್ದೇ ಸರ್ಕಾರ ಇದೆ. ಗೋವಾದ ಮೇಲೆ ಬೆರಳು ತೋರಿಸ್ತಾರೆ. ಅಲ್ಲಿನವರು ಅಧಿಕಾರ ಇಲ್ಲದಾಗ ಮಾತನಾಡ್ತಾರೆ. ಅವರದೇ ಸರ್ಕಾರ ಇದ್ದಾಗ ಏಕೆ ಮಾತನಾಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತ್ಯೇಕ ಉತ್ತರ ಕರ್ನಾಟಕ ಅಂತಾರೆ. ಯಾಕೆ ಈಗ ಅವರು ಮಾತನಾಡ್ತಿಲ್ಲ. ಯಾವ ಪಕ್ಷದವರೂ ಅಷ್ಟೇ ಮಾತನಾಡಲ್ಲ ಎಂದು ಸಿಟ್ಟು ಹೊರ ಹಾಕಿದ ಸೊಬರದಮಠ, ಮಹದಾಯಿ ಯೋಜನೆ ಶೀಘ್ರ ಜಾರಿಯಾಗಬೇಕು ಎಂದರು.
ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು ಉತ್ತರ ಕರ್ನಾಟಕದವರು. ನೂರಾರು ಕಿಮೀ ಪಾದಯಾತ್ರೆ ಮಾಡಿದವ್ರು. ಈಗ ಅವರೇ ಸಿಎಂ ಆಗಿದ್ದಾರೆ. ೫ ಟಿಎಂಸಿಯಲ್ಲಿ ೪ ಟಿಎಂಸಿ ಕುಡಿಯೋಕೆ ಕೊಡಬೇಕು. ಗೋವಾದವರ ಕಡೆ ಬೆರಳು ತೋರಿಸ್ತಾರೆ. ಚುನಾವಣೆವರೆಗೆ ಅವರು ಕಾಯ್ತಾ ಕೂತಿರಬಹುದು. ಆದರೆ ನಾವು ಸುಮ್ಮನಿರಲ್ಲ. ಸರ್ಕಾರಕ್ಕೆಎಚ್ಚರಿಕೆ ಕೊಡೋಕೆ ಬಂದಿದ್ದೇವೆ. ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರದ ಮೇಲೆ ಒತ್ತಡ ತರುವಂತೆ ಹೇಳಿದ್ದೇವೆ ಎಂದು ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ಹೇಳಿದರು.