ಮಿಸ್ಟರ್ ಬೀನ್ ಎಂಬ ಒತ್ತಡ ನಿವಾರಕ ಟಾನಿಕ್!

ಮಿಸ್ಟರ್ ಬೀನ್ ಎಂಬ ಒತ್ತಡ ನಿವಾರಕ ಟಾನಿಕ್!

ಹೊರಗಡೆ ಅಥವಾ ಕಚೇರಿಯಲ್ಲಿ ಕೆಲಸ ಮಾಡಿ ಸುಸ್ತಾಗಿ ಬಂದಾಗ ರಿಲ್ಯಾಕ್ಸ್ ಆಗಲು ಟೀವಿ, ಮೊಬೈಲ್, ಸಂಗೀತ, ವಾಕಿಂಗ್ ಅಂತ ಹೀಗೆ ಏನಾದರೊಂದು ಅವರವರ ದಿಲ್‌ಗೆ ಪಸಂದ್ ಆಗಿದ್ದನ್ನು ಮಾಡ್ತಾರೆ ಅಲ್ಲವೇ? ಮೊಬೈಲ್ ಎಂಬ ಮಾಯಾಂಗಿನಿ ಸವತಿ ಬರುವವರೆಗೂ ಟೆಲಿವಿಷನ್ ಎಂಬ ಮನೆಯೊಡತಿಗೇ ಅನಿವಾರ್ಯವಾಗಿ ಗಂಟು ಬಿದ್ದವರು ನಾವೆಲ್ಲಾ! ಅದಕ್ಕೆ ಮೂರ್ಖರ ಪೆಟ್ಟಿಗೆ ಅಂತ ನಾಮಧೇಯವಿದ್ದರೂ, ಯಾರೇನೇ ಅಂದರೂ ಕಟ್ಟಿಕೊಂಡ ಇದನ್ನು ಸುಲಭಕ್ಕೆ ಬಿಟ್ಟುಬಿಡುತ್ತಿರಲಿಲ್ಲ. ಈ ಅವಿಚ್ಛಿನ್ನ ಬಾಂಡೇಜ್‌ನಿಂದಾಗಿಯೇ ಆಗಾಗ್ಗೆ ಒಂದರೆ ಘಳಿಗೆಯಾದರೂ ಮನೆಗೆ ಬಂದ ತಕ್ಷಣವೇ ಟೀವಿ ನೋಡೋದನ್ನು ಬೈ ಡೀಫಾಲ್ಟ್ ಅಭ್ಯಾಸ ಮಾಡಿಕೊಂಡಿರುತ್ತಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಟೀವಿ ಆನ್ ಮಾಡಿದ್ರೆ ಸಾಕು…

 

ಕೊರೊನಾ ಕೊರೊನಾ ಎಂದು ಒಂದು ವರ್ಷದಿಂದ ಅದರ ಹಿಂದೆ ಬಿದ್ದು ಗೋಗರೆದ ನಮ್ಮ ಟೀವಿ ಚಾನೆಲ್‌ಗಳ ಛಲಬಿಡದ ಚಾಲೆಂಜಿಗೆ ಹೆದರಿ ಕೊನೆಗೆ ಕೊರೊನಾವೇ ಮುಕ್ಕಾಲುಭಾಗ ಕಾಲ್ಕಿತ್ತಿದ್ದರಿಂದ ವೀಕ್ಷಕರಿಗೆ ಸ್ವಲ್ಪ ಮುಕ್ತಿ ಸಿಕ್ಕಿದೆ ಎನ್ನುವಾಗ ಅಲ್ಲಿಂದ ಜನರನ್ನು ಚಕ್ ಅಂತ ಡ್ರಗ್ ಜಾಲದ ಚಕ್ರವ್ಯೂಹಕ್ಕೆ ಎಳೆದು ಎಳೆದು ಕೂರಿಸಿ ತೋರಿಸಿದ್ದಾಯಿತು. ಅಲ್ಲಿಂದ ಬಿಡುಗಡೆಯಾಗಿ ಸುಧಾರಿಸಿಕೊಂಡು ಮೇಲೇಳುವ ಹೊತ್ತಿಗೆಲ್ಲಾ ಈಗ ಮತ್ತೆ ಮತ್ತೆ ಕಾಣುವ ಸೀನ್‌ಗಳೇ ರಸ್ತೆಯುದ್ದಕ್ಕೂ ಮೀಸಲಿಗಾಗಿ ಸಾಲು ಸಾಲಾಗಿ ಸ್ಪರ್ಧೆಗೆ ಬಿದ್ದವರಂತೆ ಹೋರಾಟಕ್ಕಿಳಿದಿರುವ ಅನೇಕಾನೇಕ ಕಾವಿಧಾರಿಗಳ ಯಾತ್ರೆಯನ್ನು ಅದ್ಭುತವಾಗಿ ವರ್ಣರಂಜಿತವಾಗಿ ಹೇಳುವ ಕಾಮೆಂಟರಿಯನ್ನೋ, ಅನ್ನ ಕೊಡುವವನ ನೈಜ ದುರ್ಗತಿಯನ್ನು ಮರೆಮಾಚಿ ತಮ್ಮ ಟಿಆರ್‌ಪಿಯ ಪ್ರಗತಿಗಾಗಿಯೇ ಈ ವಿಷಯವನ್ನು  ಕಲಾತ್ಮಕವಾಗಿ ಬಳಸಿಕೊಳ್ಳುತ್ತಿರುವ ಸುದ್ದಿವಾಚಕ ಕಲೆಗಾರರ ಪಾಂಡಿತ್ಯವನ್ನೋ…

ಪೆಟ್ರೋಲು ಡೀಸೆಲ್, ಗ್ಯಾಸು, ಫೀಸು… ಎಲ್ಲದರ ಬೆಲೆ ಗಗನಕ್ಕೇರುತ್ತಿದ್ದರೂ, ಆ ಬಗೆಗೆ ವಸ್ತುನಿಷ್ಠ ಚರ್ಚೆಗಳ ಸೀನ್‌ಗಳಿರದೇ, ಮಂದಿರ ಮಸೀದಿ ಚರ್ಚು ಅಂತೆಲ್ಲಾ ಅದೇ ಹಳೇ ಮೂತಿಗಳನ್ನೇ ಟೀವಿ ಮುಂದೆ ಕೂರಿಸಿ ಒಣ ಹರಟೆ, ಬಿಟ್ಟಿ ಚರ್ಚೆಗಳನ್ನು ಕೆಲಸಕ್ಕೆ ಬಾರದ ಮಂಥನದ ಹೆಸರಲ್ಲಿ ಅಬ್ಬರಿಸುವಂತೆ ತೋರಿಸಿ ಜನರನ್ನು ಅರಳಿಸುವ, ಕೆರಳಿಸುವ ನಿಪುಣ ನಿರೂಪಕರನ್ನೋ, ಸರ್ಕಾರಗಳು ಕೊಟ್ಟ ಬಜೆಟ್‌ನಿಂದ ಜನಸಾಮಾನ್ಯರಿಗೆ ಯಾವ ತರಹದ ಅನುಕೂಲ-ಅನನುಕೂಲವಾಗಿದೆ ಎಂಬುದನ್ನು ಗಂಭೀರ ಚರ್ಚೆಗೆ ಒಳಪಡಿಸಿ ವಿಶ್ಲೇಸಿಸುವ ಬದಲು ರಾಗಿಣಿ- ವಿರಾಗಿಣಿಯರ ಅಂತರಂಗಕ್ಕೇ ಹೊಕ್ಕು ಇಲ್ಲದ್ದನ್ನೆಲ್ಲಾ ಕಕ್ಕುವ ತಥಾಕಥಿತ ತಗಡು ಸುದ್ದಿಗಳನ್ನೋ…

ಯಾರದರೂ ಮೈ ಮುಟ್ಟಿದ್ರೆ ಕೈ ಕತ್ತರಿಸು, ಮಾತಾಡಿದ್ರೆ ನಾಲಗೆ ಕತ್ತರಿಸು ಅಂತ ದಾನವನ ಶೈಲಿಯಲ್ಲಿ ಬಡಬಡಿಸೋ ರಾಜಕೀಯದ ವಿಷಕಂಠರನ್ನೋ, ಅಕ್ರಮ ಸಂಬಂ‘ಗಳ ಬಗ್ಗೆ ಸಕ್ರಮವಾಗಿ ವರದಿ ಬಿತ್ತರಿಸೋ ಕರ್ಮಗಳನ್ನೋ, ವೇದಿಕೆ ಸಿಕ್ಕರೆ ಸಾಕು ಮೊಸಳೆ ಕಣ್ಣೀರು ಸುರಿಸೋ ಭಾವನಾತ್ಮಕರ ಭಾವುಕತೆಗಳನ್ನೋ, ಮೇಲ್ನೋಟಕ್ಕೆ  ಕೈ ಹಿಡಿದು ಸಿದ್ಧರಾದಂತೆ ಕಂಡರೂ ಒಳಗೊಳಗೇ ಕಾಲು ಎಳೆಯುವ ಮಹಾನ್ ತಂತ್ರಗಾರರನ್ನೋ, ಮೈಕ್ ಎಳೆದದ್ದನ್ನು, ಕಾರ್ ಮೇಲೆ ಕಾಗೆ ಕೂತಿದ್ದನ್ನು, ವಾಚ್ ಕಟ್ಟಿದ್ದನ್ನು, ಹಕ್ಕಿ ಪಿಕ್ಕೆ ಹಾಕಿದ್ದನ್ನು, ಕೋಳಿ ಕುರಿ ತಿಂದದ್ದನ್ನು ಸಂಶೋಧನೆಗೊಳಪಡಿಸಿ ಅಲ್ಲಿಂದ ರಿಪೋರ್ಟ್ ಬರೋವರೆಗೂ ಕುಟ್ಟಿದ್ದನ್ನೇ ಕುಟ್ಟಿ ತಟ್ಟುವ ಹಳಸಲು ವರದಿಗಳ ಸ್ವಯಂಘೋಷಿತ ಸೃಷ್ಟಿ ಕರ್ತರ ಆಟೋಟಾಪವನ್ನೋ…

ಯಾರಾದರೂ ಸೆಲೆಬ್ರಿಟಿಗಳು ಸತ್ತರೆ ಅವರ ಉಸಿರು ನಿಂತಲ್ಲಿಂದ ಹಿಡಿದು ಹಿಡಿದು ಅವರ ಶ್ರಾದ್ಧ, ಕರ್ಮ, ಪಿಂಡ ಬಿಡುವುದರಿಂದ ಪುಣ್ಯತಿಥಿ ಆಗೋವರೆಗೂ ಬೆನ್ನು ಬಿಡದ ಭೂತದಂತೆ ಕಾಡಿ ಅವರ ಆತ್ಮಕ್ಕೆ (ಅ)ಶಾಂತಿ ದೊರಕುವವರೆಗೂ ಮತ್ತು ನೋಡುವವರ ಮನದ ಅಶಾಂತಿ ತಾರಕಕ್ಕೇರುವವರೆಗೂ ವಿಚಿತ್ರವಾಗಿ ವೈವಿಧ್ಯಮಯವಾಗಿ ನಿರೂಪಿಸುವುದನ್ನೋ, ಯಾರೋ ಸಿನಿಮಾ ನಟರ ನಟಿಯರ ವೈಯುಕ್ತಿಕ ವಿಚಾರಗಳನ್ನು ದೇಶದ ಸಮಸ್ಯೆಯೆಂಬಂತೆ ಬಿಂಬಿಸಿ, ಎಲ್ಲರಲ್ಲೂ ದೇಶಾಭಿಮಾನ ಉಕ್ಕಿ ಹರಿಯುವಂತೆ ಮಾಡುವುದನ್ನೋ,  ಶತಮಾನಗಳುರುಳಿದರೂ ಮುಗಿಯದ ಕಣ್ಣೀರ ಧಾರಾವಾಹಿಗಳನ್ನೋ, ರಿಯಾಲಿಟಿ ಷೋ ಹೆಸರಲ್ಲಿ ಅನ್ ರಿಯಲಿಸ್ಟಿಕ್ ಆಗಿ ವರ್ತಿಸುವ ರೀಲ್ ಗಿರಾಕಿಗಳ ವರಸೆಗಳನ್ನೋ…

ಕಾಮಿಡಿ ಹೆಸರಲ್ಲಿ ಕಾಮುಕರಾಗಿ ಮುಗಿಬಿದ್ದು ಅಭಿನಯದ ಹೆಸರಲ್ಲಿ  ತ್ರಿಬಲ್ ಮೀನಿಂಗ್  ಡೈಲಾಗ್ ಹೊಡೆಯುವ ಕಾಮಡಿ ಕಿಲಾಡಿಗಳನ್ನೋ, ಬಿಗ್ ಬಾಸ್ ಅಂತ ಹೇಳಿ ಅಲ್ಲಿರೋರೆಲ್ಲಾ ಬಿಗ್ ನಾನ್ಸೆನ್ಸ್ ಕ್ರಿಯೇಟ್ ಮಾಡೋ ಸೀನ್‌ಗಳಿಗೆ ಕ್ಷಣಗಣನೆಗೆ ಕಾದಿರುವ ಕೌತುಕವನ್ನೋ, ಸಂಗೀತ ಸರಿಗಮದ ಹೆಸರಿನಲ್ಲಿ ಸಂಗೀತದ ಮಂತ್ರಕ್ಕಿಂತ ಎಮೋಷನಲ್  ಉಗುಳನ್ನೇ ಹೊರಹಾಕಿ ರೇಟಿಂಗ್ ಹಿಂದೆ ಮೋಡಿ ಮಾಡುವ ಕಲೆಗಾರರನ್ನೋ, ಜ್ಯೋತಿಷ್ಯದ ಹೆಸರಲ್ಲಿ  ಬುರುಡೆ ಬೊಗಳೆ ಬಿಟ್ಟು ಟೀವಿ ಮುನ್ನೆಲೆಗೆ ಬಂದು ಮುಗ್ಧರ – ಅಮಾಯಕರ ತಲೆಯಲ್ಲಿ ಇಲ್ಲಸಲ್ಲದ ಹುಳು ಬಿಡುತ್ತಾ ಬೆಳ್ಳಂಬೆಳಿಗ್ಗೆಯೇ ಮಿರಮಿರ ಮಿಂಚುವ ನಿತ್ಯ ಭವಿಷ್ಯಗಾರರನ್ನೋ, ಒಂದು ರಾಜಕೀಯ ಪಕ್ಷಕ್ಕೆ ನಿಷ್ಠೆ ತೋರುತ್ತಾ ಅವರ ತುತ್ತೂರಿಯಂತೆ ಸೃಜನಶೀಲ ಕೆಲಸ ಮಾಡುವ ಕಲೆಗಾರರನ್ನೋ, ಮಹಾನ್ ಸರ್ವಜ್ಞನಂತೆ ರಂಗುರಂಗಾಗಿ ಮಾತನಾಡುತ್ತಾ ಸುದ್ದಿಯನ್ನು ನಾತ ವಬ್ಬಿಸುವವರನ್ನೋ… ಹೀಗೆ ಹೇಳುತ್ತಾ ಹೋದರೆ  ಕೊನೆ ಮೊದಲೆಂಬುದೇ ಇಲ್ಲ…!

ಇದನ್ನೆಲ್ಲಾ  ನೋಡಿ ನೋಡಿ ಸಾಕಾಗಿ ಹೋಗಿ ಟೀವಿ ನೋಡೋ ಅಭ್ಯಾಸಕ್ಕೆ ಹೆಚ್ಚು ಕಡಿಮೆ ತಿಲಾಂಜಲಿ ಕೊಟ್ಟ ಹಾಗಿದೆ. ಹಾಗಂತ ಸುಮ್ಮನೆ ಕೂರ್ಲಿಕ್ಕೆ ಆಗಲ್ವೇ ! ಸೋ, ಸದಾ ನಮ್ಮೊಂದಿಗೆ ಇರುವ ಅವಿಭಾಜ್ಯ ಅಂಗವೆಂದರೆ ಮೊಬೈಲ್. ಆದರೆ, ಅದರದ್ದೂ ಅದೇ ಕಥೆಯೇ! ಅದರಲ್ಲೂ ಈಚೆಗೆ ವಾಟ್ಸಾಪ್, ಫೇಸ್‌ಬುಕ್ ಆನ್ ಮಾಡಿ ನೋಡಿದ್ರೆ ಬರೀ ಫಾರ್ವರ್ಡ್ ಮಾಡಿ ಕಳಿಸಿದ ಹಳಸಲು, ಹರಕಲು ಮೆಸೇಜ್‌ಗಳು, ಧರ್ಮಾಂಧರ, ಜಾತ್ಯಾಂಧರ, ರಾಜಕೀಯ ಪಕ್ಷಗಳ ಬಾಲಂಗೋಚಿಗಳ ಕಡೆಯಿಂದ ಫಾರ್ವರ್ಡ್ ಆಗಿಬಂದ ಕಿತ್ತೋಗಿರುವ ಸಂದೇಶಗಳು ಅಥವಾ ತಮ್ಮ ತಮ್ಮ  ಮಹಾನ್ ನಾಯಕರ ಬಗ್ಗೆ ಗುಣಗಾನ ಇಲ್ಲವೇ ತಮಗಾಗದವರ ಬಗೆಗೆ ಅಶ್ಲೀಲ ಪದ ಪ್ರಯೋಗ, ಕೆಲಸಕ್ಕೆ ಬಾರದ ವಿಚಾರಗಳಲ್ಲಿ ಅನಗತ್ಯ ವಿವಾದದ ಕಾಮೆಂಟ್‌ಗಳು, ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ, ಧರ್ಮಾಂಧರ ವಿಕೃತಿಗಳು, ಕೈಚಳಕದಿಂದ ಹರಿಬಿಟ್ಟ ನಕಲೀ ಚಿತ್ರಗಳು, ಅವರನ್ನು ಇವರು, ಇವರನ್ನು ಅವರು ಸಗಣಿ ಎರಚಿಕೊಳ್ಳೋದು, ವಿಷದ ಬಾಟಲಿ ಹಿಡಿದು ಲೈವ್‌ಆಗಿ ಫೇಸ್‌ಬುಕ್ಕಿಗೆ ಬಂದು ವಿಕೃತಿ ಮೆರೆಯೋದು…. ಇತ್ಯಾದಿಯೇ ತುಂಬಿ ತುಳುಕುತ್ತವೆ ಅಲ್ಲವೇ..??

ಮಧ್ಯೆ ಮಧ್ಯೆ ಕೆಲವೊಂದು ಉತ್ತಮವಾದದ್ದೂ ಇವೆಯೆನ್ನಿ! ಆದರೂ, ಕಳಪೆ ಸರಕುಗಳ ಹಾವಳಿಯಲ್ಲಿ ಅವೆಲ್ಲ ಕಾಣಲಾರದಷ್ಟು ಮುಚ್ಚಿಹೋಗಿವೆ!

ಹಾಗಾದ್ರೆ ರಿಲ್ಯಾಕ್‌ಸ್‌ ಆಗಲು ಏನು ಮಾಡಬೇಕು? ನನ್ನ ಹವ್ಯಾಸ ಹೇಳಿ ಬಿಡುತ್ತೇನೆ ಕೇಳಿ. ರಿಲ್ಯಾಕ್ಸ್ ಅನ್ನೋ ಪದ ನಮ್ಮ ಹಣೇಲಿ ಹೆಚ್ಚಾಗಿ ಬರೆದಿಲ್ಲವಾದರೂ ಸ್ವಲ್ಪ ಕಾಲವಾದರೂ ರಿಲ್ಯಾಕ್ಸ್ ಆಗಿರಲು ನನಗೆ ಸಪೋರ್ಟ್ ಮಾಡುವ  ತುಂಬಾ ಇಷ್ಟವಾದ ಅಂಶ ಅಂದ್ರೆ… ಮಿಸ್ಟರ್ ಬೀನ್‌ನ ಎಲ್ಲಾ ಕಾಮೆಡಿ ಸೀರಿಯಲ್‌ಗಳು ಹಾಗೂ ಎಲ್ಲಾ ಭಾಷೆಯ ಹಳೆಯ ಚಿತ್ರಗೀತೆಗಳು.

ಬಹುಶಃ ಚಾರ್ಲಿ ಚಾಪ್ಲಿನ್ ಮತ್ತು ನಮ್ಮ ನರಸಿಂಹರಾಜು ನಂತರ ಹಾಸ್ಯಕ್ಕೆ ಒಂದು ಸಹಜತೆ, ಗಂಭೀರತೆ, ಟೈಮಿಂಗ್‌ಸ್‌ ಹಾಗೂ ಅಪಾರ ಮಕ್ಕಳ ಅಭಿಮಾನಿಗಳನ್ನು ತಂದು ಕೊಟ್ಟಿರುವ ನಟ ಎಂದರೆ ಅದು ಮಿ. ಬೀನ್ ಮಾತ್ರವೇ. ತನ್ನ ಆಂಗಿಕ ಹಾಗೂ ಅಚ್ಚರಿಯ ರೀತಿಯ ಟೈಮಿಂಗ್‌ಸ್‌‌ನಿಂದಾಗಿ ಬೀನ್‌ನ ಎಲ್ಲಾ  ಸೀರೀಸ್‌ಗಳೂ ನಿಮ್ಮನ್ನು ಕೆಲ ನಿಮಿಷಗಳ ಕಾಲ ಬೇರೆಯದೇ ಆದ ಲೋಕಕ್ಕೆ  ಕರೆದೊಯ್ದು ಒಂದು ಒತ್ತಡ ರಹಿತ ಭಾವದಲ್ಲಿ,  ನಗೆಗಡಲಿನಲ್ಲಿ ನಿಮ್ಮನ್ನು ಮುಳುಗಿಸುತ್ತವೆ.

ಕಾಮಿಡಿ ಎಂದರೆ ಬರೀ ದ್ವಂದ್ವಾರ್ಥ ಕೊಡುವ  ಮಾತುಗಳು, ಪೋಲಿ ಸಂಭಾಷಣೆಗಳು, ಅಶ್ಲೀಲ ಸಾಹಿತ್ಯ ಎನ್ನುವಂತಾಗಿರುವಾಗ ಇಡೀ ಕುಟುಂಬವೇ ಕುಳಿತು ನೋಡುವಂತಹಾ ಹಾಸ್ಯ ಬೀನ್‌ನ ಎಲ್ಲಾ ಎಪಿಸೋಡ್‌ಗಳಲ್ಲೂ ಸಿಗುತ್ತದೆ. ಜೀವನದಲ್ಲಿ ನಗದೇ ಇದ್ದವರೂ ಈತನ ಫಜೀತಿಗಳನ್ನು, ಮುಗ್ಧತೆಯನ್ನು, ಸಂದಿಗ್ಧತೆಯನ್ನು ನೋಡಿ ಹೊಟ್ಟೆ ಹುಣ್ಣಾಗಿಸಿಕೊಳ್ಳುವುದು ನಿಶ್ಚಿತ.

ಅಂದಹಾಗೆ ಈ ಮಿ.ಬೀನ್ ಯಾರು ಗೊತ್ತೆ? ರೊವಾನ್ ಸೆಬಾಸ್ಟಿಯನ್ ಅಟ್ ಕಿನ್ ಸನ್ ಎನ್ನುವುದು ಈತನ ಹೆಸರು. ಮೊನ್ನೆ ಜನವರಿ ಆರಕ್ಕೆ 65ನೇ ಜನ್ಮದಿನ ಆಚರಿಸಿಕೊಂಡ ಮಿ. ಬೀನ್ ಮೂಲತಃ ಇಂಗ್ಲೆಂಡ್‌ನವರು. ಆಕ್‌ಸ್‌‌ರ್ಡ್ ವಿಶ್ವವಿದ್ಯಾನಿಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್  ಪದವಿ ಪಡೆದ ಇವರಿಗೆ ಕಲೆ ಅನಾಯಾಸವಾಗಿ ಒಲಿದಿದೆ.  ಕಾಲೇಜಿನಲ್ಲಿರುವಾಗಲೇ ಬೀನ್‌ನ ಹಾಸ್ಯದ ಕ್ಯಾರೆಕ್ಟರ್ ಇವರಿಗೆ ಹೊಳೆದದ್ದು. ನಟ ನಿರ್ಮಾಪಕ, ನಿರ್ದೇಶಕ, ಬರಹಗಾರ ಧ್ವನಿಗ್ರಹಣ ಮುಂತಾದ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಇವರು ತೊಂಭತ್ತರ ದಶಕದಲ್ಲಿ ನಟಿಸಿ ನಿರ್ದೇಶಿಸಿದ ಮಿ.ಬೀನ್ ಸೀರೀಸ್‌ಗೆ ವಿಶ್ವದಾದ್ಯಂತ  ಹಲವಾರು ಮೆಚ್ಚುಗೆ ಪ್ರಶಸ್ತಿಗಳು ದಾಖಲಾಗಿವೆ. ಮಕ್ಕಳಿಗಂತೂ ಚೋಟಾ ಭೀಮ್ ನಂತರ  ಮಿ.ಬೀನ್ ಎಂದರೆ ಪ್ರಾಣ. ಬೀನ್‌ನ ಅನಿಮೇಷನ್ ಸೀರೀಸ್ ಕೂಡಾ ಸಾಕಷ್ಟು ಜನಪ್ರಿಯತೆ ಗಳಿಸಿದೆ.

ನಿಮ್ಮ ಮನಸ್ಸು ಹಗುರವಾಗಬೇಕೆಂದರೆ ಮಿ.ಬೀನ್ ನಟಿಸಿರುವ ಎಲ್ಲಾ ಹಾಸ್ಯ ಪ್ರಸಂಗಗಳನ್ನೂ ಒಮ್ಮೆ ನೋಡಿ. ಖಂಡಿತಾ ಅದು ನಿಮಗೆ ಇಷ್ಟವಾಗುತ್ತದೆ.

ಮರೆಯುವ ಮುನ್ನ

ದಿನನಿತ್ಯ ನಮ್ಮ ರಾಜಕಾರಣಿಗಳು, ಟೀವಿ ಜ್ಯೋತಿಷಿಗಳು, ಟೀವಿ ಚಾನಲ್‌ಗಳ ಸುದ್ದಿಗಳು  ಕೊಡುವ ಮಸಾಲಭರಿತ  ಹಾಸ್ಯದ ಮನರಂಜನೆ ಮುಂದೆ ಮಿ.ಬೀನ್ ನಿಮಗೆ ಸಪ್ಪೆಯೆನಿಸಬಹುದು! ಆದರೆ, ಮಸಾಲೆಯ ಕ್ಷಣಿಕ ಸುಖದ ಅನಾರೋಗ್ಯಕ್ಕಿಂತ  ಮಿ.ಬೀನ್‌ನ ಹಾಸ್ಯವೆಂಬ ದೀರ್ಘಾರೋಗ್ಯ ಮನಸಿಗೆ ದೇಹಕ್ಕೆ ಒಳ್ಳೆಯದೆಂಬ  ನಂಬಿಕೆಯಿರುವವರಿಗೆ ಮಿ.ಬೀನ್ ಸಕತ್ ಮಜಾ ಕೊಡುವುದು ಗ್ಯಾರಂಟಿ.

– ಹಿರಿಯೂರು ಪ್ರಕಾಶ್

ಲೇಖಕರು

ಮೊ:9448433279

Leave a Reply

Your email address will not be published. Required fields are marked *