ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹ; ಏತ ನೀರಾವರಿ, ವಿದ್ಯುತ್ ಉತ್ಪಾದನೆಗೆ ನೀರು‌ ಬಿಡುಗಡೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆದೇಶ.!

ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹ; ಏತ ನೀರಾವರಿ, ವಿದ್ಯುತ್ ಉತ್ಪಾದನೆಗೆ ನೀರು‌ ಬಿಡುಗಡೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆದೇಶ.!

 

ಬೆಳಗಾವಿ : ಇತ್ತೀಚೆಗೆ ಸುರಿದ ಮಳೆಯಿಂದ ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯಗಳಲ್ಲಿ ಸದ್ಯಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸಂಗ್ರಹವಾಗುತ್ತಿರುವುದರಿಂದ ಹೆಚ್ಚುವರಿ ನೀರನ್ನು ಏತ ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಂಗಾರು ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಸನ್ನಿವೇಶದಲ್ಲಿ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ.80ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ನೀರನ್ನು ಮುಳವಾಡ, ರಾಂಪೂರ ಮತ್ತಿತರ ಏತ ನೀರಾವರಿ ಯೋಜನೆಗಳಿಗೆ ಬಿಡುಗಡೆಗೊಳಿಸಬೇಕು.
ಅದೇ ರೀತಿ ಕುಡಿಯುವ ನೀರು ಅಗತ್ಯವಿದ್ದರೆ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿದರು. ಮಳೆಗಾಲದ ಆರಂಭದಲ್ಲಿ ಸಂಗ್ರಹವಾಗಿರುವ ನೀರು ಮುಂದಿನ ದಿನಗಳಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿಸುವ ಬದಲು ವಿದ್ಯುತ್ ಉತ್ಪಾದನೆಯನ್ನು ಕೂಡ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರೀಕ್ಷೆಗಿಂತ ಮುಂಚೆಯೇ ಜಲಾಶಯಗಳಲ್ಲಿ ಹೆಚ್ಚಿನ‌ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಈ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಜೂನ್ ಮಾಹೆಯಲ್ಲಿಯೇ ಆಲಮಟ್ಟಿ ಜಲಾಶಯ ಶೇ.80 ರಷ್ಟು ಭರ್ತಿಯಾಗುವ ಸಾಧ್ಯತೆಗಳಿವೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಸಿ.ಡಿ.ಪಾಟೀಲ ತಿಳಿಸಿದರು.
ಸಂಸದರಾದ ಮಂಗಲಾ ಸುರೇಶ್ ಅಂಗಡಿ, ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

,

Leave a Reply

Your email address will not be published. Required fields are marked *