ಡಿಕೆ “ ಮೇಕೆ” ಅಬ್ಬರ; ಲಿಂಗಾಯತರ ಮಹಾವಲಸೆಗೆ ಬೀಳುವುದೇ ಬ್ರೇಕ್‌ ?

‌                                 ಹುಳ್ಳಿ ಪ್ರಕಾಶ್

ಮೇಕೆದಾಟು ಪಾದಯಾತ್ರೆ ಸ್ಥಗಿತಗೊಂಡಿದೆ. ಆದರೆ ಈ ಯಾತ್ರೆಯ ಹೆಸರಿನಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಅವರು ಅಬ್ಬರಿಸಿ, ಬೊಬ್ಬಿರಿದ ಪರಿ ಮತ್ತು  ಮಾಧ್ಯಮಗಳಲ್ಲಿ ಪಡೆದುಕೊಂಡ ಮೈಲೇಜ್ ನೋಡುತ್ತಿದ್ದರೇ  ಕೈಪಕ್ಷದ ಘಟಾನುಘಟಿ ನಾಯಕರೆಲ್ಲರನ್ನೂ  ಒಂದೇ ಏಟಿಗೆ ಸೈಡ್ ಗೆ ತಳ್ಳಿ  ಪಕ್ಷದಲ್ಲಿ  ನಂಬರ್ ಒನ್  ಸ್ಥಾನವನ್ನು ಆಕ್ರಮಿಸಿರುವುದಂತೂ ದಿಟ.

ಚುನಾವಣೆಯ ಹೊಸ್ತಿಲಿನಲ್ಲಿರುವಾಗಲೇ ಪಾದಯಾತ್ರೆ ನೆಪದಲ್ಲಿ  ಆಗುತ್ತಿರುವ ಬೆಳವಣಿಗೆಗಳು  ಬಹುಮುಖ್ಯವಾಗಿ ವೀರಶೈವ ಸಮುದಾಯದಲ್ಲಿ ತಲ್ಲಣವನ್ನುಂಟು ಮಾಡಿದೆ.  ಏಕೆಂದರೆ, ಬಿಜೆಪಿ ತೊರೆದು ಕೈನತ್ತ ಮಹಾ ವಲಸೆ ಹೋಗಿ  2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಜಾತಿ ಕಾರ್ಡ್ ಪ್ಲೆ ಮಾಡಿ ಜನಾಂಗಕ್ಕೆ ಸಿಎಂ ಹುದ್ದೆಯನ್ನು ಪಡೆದುಕೊಳ್ಳುವ ಮಹಾದಾಸೆ ಕರ್ನಾಟಕದ ವೀರಶೈವರದ್ದಾಗಿತ್ತು.  ಆದರೆ, ಮೇಕೆದಾಟು ಪಾದಯಾತ್ರೆಯುದ್ದಕ್ಕೂ ಡಿಕೆ ಶಿವಕುಮಾರ್ ಅವರ ನಾನೇ ಮುಂದಿನ ಸಿಎಂ ಎನ್ನುವ ರೀತಿಯ ವರಸೆ ಲಿಂಗಾಯತರು ಕೈನತ್ತ ಮಹಾವಲಸೆ ಆರಂಭಿಸುವ ಕಾರ್ಯಕ್ಕೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಹಾಕಿಸಲಿವೆ ಎಂಬ ಮಾತೇ ರಾಜಕೀಯ ರಂಗದಲ್ಲಿ ಕೇಳಿಬರುತ್ತಿದೆ.

ಬಹುಮುಖ್ಯವಾಗಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ರಾಜಕೀಯ ತಲ್ಲಣಗಳು ಜೋರಾಗಿವೆ. ಇದಕ್ಕೂ ಬಲವಾದ ಕಾರಣಗಳು ಇವೆ. ಏಕೆಂದರೆ ಈ ಸಮುದಾಯದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಅವಗಣನೆಯ ಗೂಡಿಗೆ ತಳ್ಳಲ್ಪಟ್ಟಿದ್ದಾರೆ. ಆ  ಬಳಿಕ ಬಹು ದೊಡ್ಡ ಸ್ತರದಲ್ಲಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದತ್ತ ಮಹಾ ವಲಸೆ ಆರಂಭಿಸಬೇಕೆನ್ನುವ ಚಿಂತನೆಗಳು ಆ ಸಮುದಾಯದಲ್ಲಿ ಜನ್ಮತಾಳಿದವು.  ಕಳೆದೊಂದು ವರ್ಷದಿಂದಲೇ ಇದಕ್ಕೆ ಸಂಬಂಧಿಸಿದ್ದಂತೆ ವೀರಶೈವ ಸಮುದಾಯದೊಳಗಡೆ ಚರ್ಚೆಗಳು,   ರೂಪರೇಷೆಗಳು   ವ್ಯಾಪಕವಾಗಿಯೇ ಸಿದ್ದವಾಗಲಾರಂಭಿಸಿದವು.

ಯಡಿಯೂರಪ್ಪ ಪದಚ್ಯುತಿ ಬಳಿಕ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದಲ್ಲಿ ಆಗುತ್ತಿರುವ ಮಹತ್ತರವಾದ ವಿದ್ಯಮಾನಗಳ ಕುರಿತಂತೆ ವಿವರಗಳನ್ನು ಎಐಸಿಸಿ ಗಮನಕ್ಕೆ ತರುವ ಕೆಲಸವನ್ನು ವಿಧಾನಪರಿಷತ್ತಿನ ವಿಪಕ್ಷ ನಾಯಕರಾಗಿದ್ದ ಎಸ್ಸಾರ್ ಪಾಟೀಲ್  ಮಾಡುತ್ತಲೆ ಬರುತ್ತಿದ್ದರು.

ಎಐಸಿಸಿ, ಲಿಂಗಾಯತರತ್ತ ಗಂಭೀರವಾಗಿ ನೋಡಲು ಸಕಾರಣವೂ ಇದೆ. 1990ರಲ್ಲಿ ವೀರೇಂದ್ರ ಪಾಟೀಲರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಲಾಯ್ತು. ಆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ  ಲಿಂಗಾಯತ ಸಮುದಾಯದ ಕಡು ವಿರೋಧಿ ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವಂತಾಯ್ತು. ಅಲ್ಲಿಂದ ಈವರೆಗಿನ ತನಕವೂ ಹಳ್ಳಿಗಳಲ್ಲಿ ನಡೆಯುವ ಕೃಷಿ ಸೊಸೈಟಿ  ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆ ತನಕವೂ ವೀರಶೈವ ಮತ ಬ್ಯಾಂಕಿನ ಕಡು ಪ್ರತಿರೋಧದ ಕೆನ್ನಾಲಿಗೆ ಕಾಂಗ್ರೆಸ್ ತುತ್ತಾಗುತ್ತಲೆ ಇದೆ.

ವೀರೇಂದ್ರ ಪಾಟೀಲ್ ನಿರ್ಗಮನದ ಬಳಿಕ ವೀರಶೈವ ಸಮುದಾಯ ಬಹುದೊಡ್ಡ ಸ್ತರದಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ತೊರೆದು ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಇರುವ ತನಕ ಆಗಿನ ಜನತಾದಳ, ನಂತರ ಅವರು ಕಟ್ಟಿದ ಲೋಕಶಕ್ತಿ ಪಕ್ಷಗಳತ್ತ ಮಹಾವಲಸೆ ಬಂತ್ತು. ಬಿಎಸ್.ಯಡಿಯೂರಪ್ಪರನ್ನು ಮುಖ್ಯವಾಹಿನಿಯಲ್ಲಿ ತಂದು ನಿಲ್ಲಿಸುತ್ತಿದ್ದಂತೆಯೇ ಲಿಂಗಾಯತ ಸಮೂಹ ಭಾರೀ ಪ್ರಮಾಣದಲ್ಲಿಯೇ ಕೇಸರಿ ಪಕ್ಷದತ್ತ ಮಹಾವಲಸೆ ಹೊಯ್ತು. ಈ ವಲಸೆಯಿಂದ ಯಡಿಯೂರಪ್ಪಗೂ ಜೊತೆಗೆ ಈ ಬಿಜೆಪಿಗೂ ಅಧಿಕಾರ ಸಿಕ್ತು. ಈ ತನಕವೂ ಅದು ಮುಂದುವರಿದಿದೆ.

ಸಮುದಾಯದಲ್ಲಿ ಯಡಿಯೂರಪ್ಪ ಪದಚ್ಯುತಿ ಸಿಟ್ಟು ಇನ್ನೂ ಶಮನಗೊಂಡಿಲ್ಲ. ಇದರಿಂದ ಬಿಜೆಪಿ ಕಡೆಗೆ ತಿರುಗಿರುವ ಸಿಟ್ಟು, ಅಸಮಾಧಾನಗಳ ಪ್ರಮಾಣ ಈ ಕ್ಷಣಕ್ಕೂ ತಗ್ಗಿಲ್ಲ ಎನ್ನುವುದಕ್ಕೆ ಹಾನಗಲ್ ಬೈ ಎಲೇಕ್ಷನ್ ನಲ್ಲಿ,  ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ  ಬಿಜೆಪಿ ಸೋತಿದ್ದು ತಾಜಾ ಉದಾಹರಣೆ.

ಇದರ ನಡುವೆ, ಉತ್ತರ ಕರ್ನಾಟಕದ ಕೈ ಪಕ್ಷದ ಹಿರಿಯ ನಾಯಕ, ವಿಧಾನಪರಿಷತ್ತಿನ ವಿಪಕ್ಷ ನಾಯಕರಾಗಿದ್ದ ಎಸ್.ಆರ್.ಪಾಟೀಲ್ ರವರಿಗೆ ಮಠಗಳತ್ತ ಯಾತ್ರೆ ಮಾಡುವಂತೆ ಎಐಸಿಸಿ ಕಡೆಯಿಂದ ಕಳೆದ ಅಕ್ಟೋಬರ್ ನಲ್ಲಿ ಸೂಚನೆ ಬಂತು.  ಕರ್ನಾಟಕದಲ್ಲಿರುವ ಎಲ್ಲ ವೀರಶೈವಲಿಂಗಾಯತ ಮಠಗಳತ್ತ ಯಾತ್ರೆ ಮಾಡಿ  ಮಠಾಧೀಶರುಗಳನ್ನು ಭೇಟಿ ಮಾಡಿ ಸಿದ್ದರಾಮಯ್ಯರ ಆಡಳಿತಾವಧಿಯಲ್ಲಿ ವೀರಶೈವ ಪ್ರತ್ಯೇಕ ಧರ್ಮದ ವಿಚಾರದಿಂದ ಉಂಟಾಗಿದ್ದ ಅಸಮಾಧಾನವನ್ನು ಸರಿಪಡಿಸುವ ಕೆಲಸವನ್ನು ಎಸ್ಸಾರ್ಪಿ ಪರಿಪೂರ್ಣವಾಗಿಯೇ ಮಾಡಿದ್ರು.

ಮಠಗಳತ್ತ ಯಾತ್ರೆಯ  ತರುವಾಯ  ಕೈ ಪಕ್ಷದ ವಿಚಾರದಲ್ಲಿ   ಬಹುತೇಕ ಲಿಂಗಾಯತ ಮಠಾಧೀಶರುಗಳು ಸಾಫ್ಟ್ ಕಾರ್ನರ್ ಆದ್ರು.  ಬಹುತೇಕ ಮಠಗಳು ಕೂಡ  ಬರಲಿರುವ ಚುನಾವಣೆಯಲ್ಲಿ ಸಮುದಾಯ ಕೈನತ್ತ ಮಹಾ   ವಲಸೆಗೆ ಗ್ರಿನ್ ಸಿಗ್ನಲ್ ಕೊಡಲು ತಯಾರಾಗಿದ್ದವು. ಆದರೆ ಮೇಕೆದಾಟು ಪಾದಯಾತ್ರೆಯ ಬೆಳವಣಿಗಗಳು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೇರುವ ವೀರಶೈವ ಲಿಂಗಾಯತರ ಕನಸನ್ನು ನನಸು ಆಗದಿರುವ ಸ್ಥಿತಿಗೆ ಒಯ್ಯುತ್ತಿವೆ. ಈ ಹಿನ್ನೆಲೆಯಲ್ಲಿ ಬಹುತೇಕ ವೀರಶೈವರು ಪರ್ಯಾಯ ಆಲೋಚನೆ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯಗಳೇ ವ್ಯಕ್ತವಾಗುತ್ತಿವೆ.

ಎಸ್ಸಾರ್ಪಿಗೆ ಟಿಕೆಟ್ ತಪ್ಪಿಸಿದ್ರು:

ಇನ್ನೇನು ಎಲ್ಲವೂ ಸರಿ ಆಗುತ್ತಿದೆ ಎನ್ನುವಾಗಲೇ  ಮೊನ್ನೆಯ ಲೋಕಲ್ ಬಾಡಿ ಚುನಾವಣೆಯಲ್ಲಿ  ಎಸ್ಸಾರ್ ಪಾಟೀಲ್ ರಿಗೆ ವಿಜಯಪುರ- ಬಾಗಲಕೋಟೆ ದ್ವಿ ಸದಸ್ಯ ಕ್ಷೇತ್ರದಲ್ಲಿ ಪಕ್ಷ ಟಿಕೆಟ್ ಕೊಡಲಿಲ್ಲ. ಇಂತಹ ನಾಯಕನಿಗೆ ಅದರಲೂ  ಚಾಲ್ತಿಯಲ್ಲಿರುವ ವಿರೋಧ ಪಕ್ಷದ ನಾಯಕನನ್ನು  ಪಕ್ಷ ಕಡೆಗಣಿಸಿದ್ದೇಕೆ? ಎನ್ನುವ ಪ್ರಶ್ನೆ ವೀರಶೈವ ಜನಾಂಗದಲ್ಲಿ  ಈಗ ಬಹು ದೊಡ್ಡದಾಗಿಯೇ ಮೂಡಿದೆ.

ಈ ಎಲ್ಲ ಅಂಶಗಳು ಲಿಂಗಾಯತ ಸಮುದಾಯದಲ್ಲಿ ಬರಲಿರುವ ಚುನಾವಣೆಗೆ ಕೈಪಕ್ಷದತ್ತ ಮಹಾವಲಸೆ ಹೋಗಬೇಕೆನ್ನುವ ಚಿಂತನೆ, ಪ್ರಸ್ತಾವನೆಗಳನ್ನು ಮರು ಚಿಂತಿಸುವಂತೆ ಮಾಡಿದೆ. ಏಕೆಂದರೆ, ಬಿಜೆಪಿ ಯಡಿಯೂರಪ್ಪರನ್ನು ಕಡೆಗಣಿಸಿದ್ರೂ  ಆ ಪಕ್ಷದಲ್ಲಿ ಸಿಎಂ ಕುರ್ಚಿ ಲಿಂಗಾಯತರಿಗೆ ದೊರೆಯುತ್ತದೆ. ಇದನ್ನು  ಕಾಂಗ್ರೆಸ್ ಪಕ್ಷದಲ್ಲಿ ನಿರೀಕ್ಷಿಸಲಾಗದು ಎನ್ನುವ ಸತ್ಯ ವೀರಶೈವ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ.

Leave a Reply

Your email address will not be published. Required fields are marked *