ಲಿಂಗಾಯಿತರಿಗೆ ಕಾಂಗ್ರೆಸ್‌ ಎಸಗಿದ ದ್ರೋಹದ ಇತಿಹಾಸ ಎಂಬಿಪಿ ಅವಲೋಕಿಸಲಿ ; ಬಿಜೆಪಿ

ಬೆಂಗಳೂರು, ಜುಲೈ 20– ವೀರೇಂದ್ರ ಪಾಟೀಲ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ಅವಮಾನಕರ ರೀತಿಯಲ್ಲಿ ಬದಲಾಯಿಸುವ ಮೂಲಕ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ದ್ರೋಹ ಬಗೆದಿತ್ತು. ಲಿಂಗಾಯತ ಸಮುದಾಯದವರಿಗೆ ಮುಖ್ಯಮಂತ್ರಿ ಪದವಿಯ ಅವಕಾಶವನ್ನು ಕಾಂಗ್ರೆಸ್‌
ವ್ಯವಸ್ಥಿತವಾಗಿ ತಪ್ಪಿಸಿದ್ದು, ಆ ಪಕ್ಷದ ನಾಯಕ ಎಂ.ಬಿ. ಪಾಟೀಲ್‌ ಮೊದಲು ಈ ದ್ರೋಹದ ಇತಿಹಾಸವನ್ನು ಅವಲೋಕಿಸಲಿ ಎಂದು ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

ಹಗಲು ರಾತ್ರಿ ಎನ್ನದೆ ಜಾತಿ ಜಪ ಮಾಡುವ ಒಬ್ಬ ಮೀರ್‌ ಸಾಧಿಕ್‌ ನ ಮಾತು ಕೇಳಿ ಧರ್ಮವನ್ನೇ ಒಡೆಯುವುದಕ್ಕೆ ಪಣತೊಟ್ಟ, ರಾಜಕೀಯ ಲಾಭಕ್ಕಾಗಿ ವೀರಶೈವ-ಲಿಂಗಾಯಿತ ಎಂಬ ಮತಭೇದ ಸೃಷ್ಟಿಸಿದ ಎಂಬಿ ಪಾಟೀಲ ಈಗ ಪ್ರವಾದಿಯ ಪೋಷಾಕು ತೊಟ್ಟರೆ ಜನ ನಂಬುತ್ತಾರೆಯೇ? ಎಂದು ಬಿಜೆಪಿ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.
ಸುಳ್ಳು ಹಾಗೂ ಕಪಟಕ್ಕೆ ಮತ್ತೊಂದು ಹೆಸರು ಎಂ.ಬಿ. ಪಾಟೀಲ್‌ ಎಂದು ಆರೋಪಿಸಿರುವ ಬಿಜೆಪಿ . ಧರ್ಮ ವಿಭಜನೆಗೆ ಸ್ವಾಮೀಜಿಗಳು ಬೆಂಬಲಿಸಿದ್ದಾರೆ ಎಂಬ ಸುಳ್ಳಿನ ಮೂಲಕ ಸಮಾಜದ ದಾರಿ ತಪ್ಪಿಸಿದ್ದರು. ಯಡಿಯೂರಪ್ಪ ಅವರನ್ನು ಅಗೌರವದಿಂದ ನಡೆಸಿಕೊಂಡಿದ್ದರು. ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವುದರ ಹಿಂದೆ ರಾಜಕೀಯ ಲಾಭ ಪಡೆಯುವ ದುರುದ್ದೇಶವಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಲಿಂಗಾಯತ – ವೀರಶೈವ ಪ್ರತ್ಯೇಕ ಧರ್ಮ ಸ್ಥಾಪನೆ ಸಂದರ್ಭದಲ್ಲಿ ಪ್ರಮುಖ ಮಠಾಧೀಶರು ಹಾಗೂ ಪ್ರಮುಖ ಲಿಂಗಾಯತ ನಾಯಕರಿಗೆ ನೀಡಿದ ಅಗೌರವ, ಆಡಿದ ಮಾತುಗಳನ್ನು ಮತ್ತೆ ನೆನಪಿಸಬೇಕೇ? ಉಂಡ ಮನೆಗೆ ಕನ್ನ ಹಾಕುವ ಎಂ.ಬಿ. ಪಾಟೀಲ್ ಅವರಂತವರು ಕ್ಷಮೆಗೆ ಅನರ್ಹರು ಎಂದು ಹೇಳಿದೆ.
ವೀರಶೈವ – ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಕೈ ಹಾಕಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಈ ಹಿಂದೆ ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದರು. ಆದರೆ, ಧರ್ಮ ವಿಭಜಕ ಎಂಬಿ ಪಾಟೀಲ್‌ ಅದನ್ನು ಸಮರ್ಥಿಸಿಕೊಳ್ಳುವ ಮೂಲಕ ಜಾತಿ ವಿಭಜಕ ನಿಗೆ ತಾವು ತಕ್ಕ ಶಿಷ್ಯ ಎಂದು ನಿರೂಪಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದೆ.
ನಾನು ಆತ್ಮಸಾಕ್ಷಿಯಾಗಿ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದೇನೆ ಎನ್ನುವ ಎಂಬಿ ಪಾಟೀಲ್‌, ಆತ್ಮಸಾಕ್ಷಿ…!? ಹಾಗೆಂದರೇನು ?ನೀವು ಸಚಿವರಾಗಿದ್ದಾಗ ಬಿಜೆಪಿಯ ಅತ್ಯುನ್ನತ ನಾಯಕ ಯಡಿಯೂರಪ್ಪ ಅವರಿಗೆ ಬಳಸಿದ ಪದಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಈಗ ಕಣ್ಣೊರೆಸುವ ತಂತ್ರದ ಹಿಂದಿರುವ ರಾಜಕೀಯ ಕುತಂತ್ರವೇನು!? ಎಂದು ಪ್ರಶ್ನಿಸಿದೆ.
ಮಜಾವಾದಿ ಮೀರ್ ಸಾದಿಕ್ ಹಾಗೂ ಮಹಾನಾಯಕನ ದಿಲ್ಲಿ ಪ್ರವಾಸದ ಉದ್ದೇಶವೇನು? ರಾಜ್ಯದಲ್ಲಿ ವೀರಶೈವ ಮತ್ತು ಲಿಂಗಾಯತ ವಿಭಜನೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿನಾಯಕಿಯ ಒಪ್ಪಿಗೆ ಪಡೆಯುವುದಕ್ಕಾಗಿಯೇ? ಎಂ.ಬಿ. ಪಾಟೀಲರ ಕಸರತ್ತಿನ ಹಿಂದಿರುವ ಗಾಂಧಿ ಕುಟುಂಬದ ಪಾತ್ರವನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಬಹಿರಂಗಪಡಿಸುವರೇ ಎಂದು ಬಿಜೆಪಿ ಪ್ರಶ್ನಿಸಿದೆ.

,

Leave a Reply

Your email address will not be published. Required fields are marked *