ಮಾನ್ಸಾಂಟೋಗೆ ಬಿಟಿ ಹತ್ತಿ ಪೇಟೆಂಟ್: ನ್ಯಾಯಾಲಯ ಎಡವಿತೇ?

ಮಾನ್ಸಾಂಟೋದ ಬಿಟಿ ತಂತ್ರಜ್ಞಾನಕ್ಕೆ ನೂಜಿವೀಡು ಸೀಡ್ಸ್ ರಾಜಧನ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನಿಂದ ರೈತರ-ಸಾರ್ವಜನಿಕರ ಹಕ್ಕುಗಳಿಗೆ ಧಕ್ಕೆ ಆಗಲಿದೆ. 1970ರ ಪೇಟೆಂಟ್ ಕಾಯಿದೆ ಅನ್ವಯ ಮಾನ್‌ಸ್ಯಾಂಟೋಗೆ ಪೇಟೆಂಟ್ ರಕ್ಷಿಸಿಕೊಳ್ಳಲು ಅನುಮತಿ ಸಿಕ್ಕಿರುವುದರಿಂದ, ಏಕಸ್ವಾಮ್ಯವಲ್ಲದೆ, ಮಾರುಕಟ್ಟೆ ಹಿತಾಸಕ್ತಿಗಳು ಹಿಡಿತ ಸಾಧಿಸಲಿವೆ. ಪೇಟೆಂಟ್‌ಗೆ ಸಂಬಂಧಿಸಿದಂತೆ ಬಹು ಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಇದ್ದ ಅವಕಾಶವೊಂದನ್ನು ನ್ಯಾಯಾಲಯ ಕಳೆದುಕೊಂಡಿದೆ.

ಹೈದರಾಬಾದ್ ಮೂಲದ ನೂಜಿವೀಡು ಸೀಡ್ಸ್ ವಿ/ಎಸ್ ಮಾನ್‌ಸ್ಯಾಂಟೋ ಪ್ರಕರಣ ಕುರಿತು ಜನವರಿ 8ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ದಿಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಅನೂರ್ಜಿತಗೊಳಿಸಿದೆ. ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ. ಮಾನ್‌ಸ್ಯಾಂಟೋದ ಬಿಟಿ ತಂತ್ರಜ್ಞಾನವನ್ನು ಬಳಸಿದ್ದಕ್ಕಾಗಿ ನೂಜಿವೀಡು ರಾಜಧನ ನೀಡಬೇಕೆಂದು ಹೇಳಿದೆ.

ಏನಿದು ಪ್ರಕರಣ?: ಮಾರ್ಚ್ 2002ರಲ್ಲಿ ಮೊದಲ ಕುಲಾಂತರಿ ಬೆಳೆಯನ್ನು ಪರಿಚುಸಲಾಯಿತು. ಬೋಲ್‌ಗಾರ್ಡ್ 1 ಪೇಟೆಂಟ್ ಆಗಿರಲಿಲ್ಲ. ಮಾರ್ಚ್ 2007ರಲ್ಲಿ ಬೋಲ್‌ಗಾರ್ಡ್ 2ನ್ನು ಮಾರಲು ನೂಜಿವೀಡು ಸೀಡ್ಸ್ ಸೇರಿದಂತೆ ಹಲವು ಕಂಪನಿಗಳಿಗೆ ಪರವಾನಗಿ ನೀಡಿತು. ಈ ಕಂಪನಿಗಳು ಮಾನ್‌ ಸ್ಯಾಂಟೋಗೆ ರಾಜಧನ(ರಾಯಲ್ಟಿ) ನೀಡಬೇಕಿತ್ತು. ಮಾನ್‌ಸ್ಯಾಂಟೋದ ಬೀಜವನ್ನು ಸುಧಾರಿಸಿದ ನೂಜಿವೀಡು, ದೇಶಿ ಕೃಷಿ ಮಾರುಕಟ್ಟೆಗೆ ಸೂಕ್ತ ವಾದ ಬೀಜಗಳನ್ನು ಬಿಡುಗಡೆಗೊಳಿಸಿತು. 2015ರಲ್ಲಿ ಸರ್ಕಾರ ಬೆಲೆ ನಿಯಂತ್ರಣವನ್ನು ಜಾರಿಗೊಳಿಸಿದ್ದರಿಂದ, ನೂಜಿವೀಡು ಸೇರಿದಂತೆ ಎಂಟು ಭಾರತೀಯ ಕಂಪನಿಗಳು ಮಾನ್‌ಸ್ಯಾಂಟೋಗೆ ರಾಜಧನ ನೀಡಲು ನಿರಾಕರಿಸಿದವು. ಮೂರು ಭಾರತೀಯ ಕಂಪನಿಗಳು ಪೇಟೆಂಟ್/ಟ್ರೇಡ್‌ಮಾರ್ಕ್ ಉಲ್ಲಂಘಿಸಿವೆ ಹಾಗೂ ಅವು ತನಗೆ ರಾಜಧನ ನೀಡಬೇಕು ಎಂದು ಮಾನ್‌ಸ್ಯಾಂಟೋ ದಿಲ್ಲಿ ಹೈಕೋರ್ಟ್‌ನಲ್ಲಿ ಫೆಬ್ರವರಿ 2016ರಲ್ಲಿ ದಾವೆ ಹೂಡಿತು.

ಮಾರ್ಚ್ 2017ರಲ್ಲಿ ದಿಲ್ಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ, ನೂಜಿವೀಡು ಮಾನ್‌ಸ್ಯಾಂಟೋಗೆ ರಾಜಧನ ಕೊಡಬೇಕು ಎಂದು ಆದೇಶಿಸಿತು. ನೂಜಿ ವೀಡು ಆದೇಶವನ್ನು ಪ್ರಶ್ನಿಸಿ, ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿತು. ಅರ್ಜಿಯನ್ನು ಎತ್ತಿಹಿಡಿದ ವಿಭಾಗೀಯ ಪೀಠ, ರಾಜಧನ ಕೊಡಬೇಕಿಲ್ಲ ಹಾಗೂ ಮಾನ್‌ಸ್ಯಾಂಟೋ ಒಪ್ಪಂದವನ್ನು ರದ್ದುಗೊಳಿಸಿದ್ದು ಅಕ್ರಮ. ಕಂಪನಿಗಳು ಬಿಟಿ ತಂತ್ರಜ್ಞಾನವನ್ನು ಬಳಸಬಹುದು ಎಂದು ತೀರ್ಪಿತ್ತಿತು. ಜತೆಗೆ, ಮಾನ್‌ಸ್ಯಾಂಟೋ ಸಸ್ಯ ವೈವಿಧ್ಯ ಮತ್ತು ರೈತರ ಹಕ್ಕುಗಳ ರಕ್ಷಣೆ ಕಾಯಿದೆ(ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಆಂಡ್ ಫಾರ್ಮರ‍್ಸ್ ರೈಟ್ಸ್‌, ಪಿಪಿವಿಎಫ್‌ಆರ್ ಕಾಯಿದೆ)ಯಡಿ ತಳಿಯನ್ನು ನೋಂದಣಿ ಮಾಡಬೇಕು ಎಂದು ಸೂಚಿಸಿತು. ಒಂದು ವೇಳೆ ಮಾನ್‌ಸ್ಯಾಂಟೋ ಬಿಟಿ ಬೀಜವನ್ನು ಕಾಯಿದೆಯಡಿ ನೋಂದಣಿ ಮಾಡಿದ್ದರೆ, ಅದು ಪೇಟೆಂಟ್ ಹಕ್ಕು ಕಳೆದುಕೊಳ್ಳುತ್ತಿತ್ತು.

ಇದಕ್ಕೊಪ್ಪದ ಮಾನ್‌ಸ್ಯಾಂಟೋ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಪೇಟೆಂಟ್ ಕಾಯಿದೆಯ ವಿಭಾಗ 3(ಜೆ) ಸೂಕ್ಷ್ಮ ಜೀವಿಗಳ ಪೇಟೆಂಟ್‌ಗೆ ಒಪ್ಪಿಗೆ ನೀಡಿರುವುದರಿಂದ, ಉತ್ಪನ್ನ ಹಾಗೂ ಉತ್ಪಾದನೆ ಪ್ರಕ್ರಿಯೆ ಮೇಲಿನ ಪೇಟೆಂಟ್ ಕಂಪನಿಯದು ಹಾಗೂ ತನ್ನ ಪೇಟೆಂಟ್ ತಿದ್ದಿದ ವಂಶವಾಹಿಗೆ ಸೀಮಿತವಾದದ್ದು, ಇಡೀ ಗಿಡಕ್ಕಲ್ಲ ಎಂದು ಮಾನ್‌ಸ್ಯಾಂಟೋ ವಾದಿಸಿತು. ಪ್ರತಿಯಾಗಿ ನೂಜಿವೀಡು, ಪೇಟೆಂಟ್ ಕಾಯಿದೆಯ ವಿಭಾಗ 3(ಜೆ) ಪ್ರಕಾರ ಸಸ್ಯಗಳಿಗೆ ಪೇಟೆಂಟ್ ನೀಡುವಂತಿಲ್ಲ. ತಿದ್ದಿದ ವಂಶವಾಹಿಯುಳ್ಳ ಬೀಜ ಸಸ್ಯದ ಒಂದು ಅಗತ್ಯ ಭಾಗವಾಗಿರುವುದರಿಂದ ಅದನ್ನು ಸಸ್ಯದ ಭಾಗ ವೆಂದೇ ಪರಿಗಣಿಸಬೇಕು. ಬಿಟಿ ಹತ್ತಿಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಜೀವಶಾಸ್ತ್ರೀಯವಾದದ್ದು. ಏಕೆಂದರೆ, ಸಸ್ಯ ಬೆಳೆದಾಗ ಮಾತ್ರ ವಂಶವಾಹಿ ಯ ಗುಣಗಳು ಪ್ರಕಟಗೊಳ್ಳುತ್ತವೆ. ಹೀಗಾಗಿ ಇದೊಂದು ಜೀವಶಾಸ್ತ್ರೀಯ ಪ್ರಕ್ರಿಯೆ; ಮನುಷ್ಯರ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ವಾದಿಸಿತು.

ಸುಪ್ರೀಂ ಕೋರ್ಟ್ ಬಿಟಿ ತಂತ್ರಜ್ಞಾನಕ್ಕೆ ಪೇಟೆಂಟ್ ನೀಡಬಹುದೇ ಅಥವಾ ಪೇಟೆಂಟ್ ದೇಶ ಅಂಗೀಕರಿಸಿದ ನಾನಾ ಅಂತಾರ್ಟ್ರೋಯ ಒಪ್ಪಂದ ಗಳಿಗೆ ಅನುಗುಣವಾಗಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಲಿಲ್ಲ. ಬದಲಿಗೆ, ಇಂಥ ಸಂಕೀರ್ಣ ವಿಷಯವನ್ನು ಸಾಕ್ಷ್ಯಗಳನ್ನು ಪರಿಶೀಲಿಸದೆ ಹಾಗೂ ಪಾಟಿಸವಾಲು ನಡೆಸದೆ ತರಾತುರಿಯಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ. ಕೃಷಿ ಇಲಾಖೆಯಲ್ಲಿನ ವಿಶೇಷ ಏಜೆನ್ಸಿ ರಾಜಧನ ಕುರಿತು ನಿರ್ಣುಸಬೇಕು ಎಂದು ಹೇಳಿತು.

ರೈತರ ಹಕ್ಕುಗಳ ರಕ್ಷಣೆಗೆ ಆದ್ಯತೆ: ದೇಶದಲ್ಲಿ 2001ರಿಂದಲೇ ಸಸ್ಯ ವೈವಿಧ್ಯ ಮತ್ತು ರೈತರ ಹಕ್ಕು ರಕ್ಷಣೆ ಕಾಯಿದೆ(ಪಿಪಿವಿಎಫ್‌ಆರ್) ಜಾರಿಯಲ್ಲಿದೆ.

ಇದು ಸಸ್ಯ ವೈವಿಧ್ಯವನ್ನಲ್ಲದೆ, ರೈತರು ಮತ್ತು ಬೀಜ ಉತ್ಪಾದಕರ ಹಕ್ಕುಗಳನ್ನು ರಕ್ಷಿಸುತ್ತದೆ. ಈ ಕಾಯಿದೆಯು ಸಸ್ಯ ವೈವಿಧ್ಯವನ್ನು ಪೇಟೆಂಟ್ ಇಲ್ಲವೇ ಸುಯಿ ಜನೆರಿಸ್ ವ್ಯವಸ್ಥೆ ಅಥವಾ ಎರಡನ್ನೂ ಒಟ್ಟಾಗಿ ಬಳಸಿ ರಕ್ಷಣೆ ನೀಡಬೇಕೆಂಬ ಟ್ರಿಪ್ಸ್‌(ಟ್ರೇಡ್ ರಿಲೇಟೆಡ್ ಇಂಟೆಲೆಕ್ಚುಯಲ್ ಪ್ರಾಪಟ್ರಿ ರೈಟ್ಸ್‌) ಒಪ್ಪಂದಕ್ಕೆ ಅನುಗುಣವಾಗಿದೆ. ಪಿಪಿವಿಎಫ್‌ಆರ್ ಸಂಶೋಧಕರ ಹಕ್ಕುಗಳನ್ನೂ ರಕ್ಷಿಸುತ್ತದೆ. ಆದರೆ, ಜ.8ರ ಸುಪ್ರೀಂ ಕೋರ್ಟ್ ತೀರ್ಪು ಮಾನ್‌ಸ್ಯಾಂಟೋದ ಬಿಟಿ ತಂತ್ರಜ್ಞಾನವು ಪಿಪಿವಿಎಫ್‌ಆರ್ ಕಾಯಿದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದಿದೆ. ಪಿಪಿವಿಎಫ್‌ಆರ್‌ನ ಒಟ್ಟಾರೆ ಉದ್ದೇಶವನ್ನು ಕೋರ್ಟ್ ಪರಿಗಣಿಸಿಲ್ಲ.

ಸುಪ್ರೀಂ ಕೋರ್ಟ್ ತೀರ್ಪು ದೀರ್ಘಗಾಮಿ ಪರಿಣಾಮ ಉಂಟುಮಾಡಲಿದೆ. 1970ರ ಪೇಟೆಂಟ್ ಕಾಯಿದೆಯನ್ವಯ ಪೇಟೆಂಟ್‌ನ್ನು ಉಳಿಸಿಕೊಳ್ಳಲು ಮಾನ್‌ಸ್ಯಾಂಟೋಗೆ ಅವಕಾಶ ನೀಡಿರುವುದರಿಂದ ಹಾಗೂ ತಂತ್ರಜ್ಞಾನದ ಲಾಭವನ್ನು ಎಲ್ಲರೂ ಹಂಚಿಕೊಳ್ಳಲು ಅವಕಾಶ ನೀಡದೆ ಇರುವುದರಿಂದ, ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಬದಲು ಲಾಭ ಮಾಡಿಕೊಳ್ಳಲು ಖಾಸಗಿಯವರಿಗೆ ಅವಕಾಶ ನೀಡಿದಂತಾಗಿದೆ.

ದೇಶವೊಂದು ತನ್ನದೇ ಆದ ಸುಯಿಜನೆರಿಸ್ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಮೂಲಕ ಸಸ್ಯ ವೈವಿಧ್ಯ/ಪ್ರಭೇದಗಳನ್ನು ರಕ್ಷಿಸಿಕೊಳ್ಳಲು ಉತ್ಪಾ ದಕನಿಗೆ ಟ್ರಿಪ್ಸ್ ಅವಕಾಶ ನೀಡುತ್ತದೆ. ಪಿಪಿವಿಎಫ್‌ಆರ್ ರೈತರ ಹಕ್ಕುಗಳನ್ನು ರಕ್ಷಿಸಲು ರೂಪುಗೊಂಡಿದ್ದು, ರೈತರು ಹೊಸ ತಳಿಗಳನ್ನು ನೋಂದಣಿ ಮಾಡಿಕೊಂಡು, ಅವುಗಳ ಪ್ರಯೋಜನ ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಪಿಪಿವಿಎಫ್‌ಆರ್‌ನಲ್ಲಿ ನೋಂದಣಿಯಾದ ತಳಿಯೊಂದನ್ನು ಬಳಸ ದಂತೆ ಬ್ರೀಡರ್(ತಳಿ ಅಭಿವೃದ್ಧಿಪಡಿಸಿದಾತ) ರೈತರಿಗೆ ತಡೆಯೊಡ್ಡಿದರೆ, ಪ್ರಾಧಿಕಾರ ಆತನ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಪೇಟೆಂಟ್ ಕಾಯಿದೆಯ ವಿಭಾಗ 3(ಜೆ) ಪ್ರಕಾರ, ಪ್ರಾಣಿಗಳು ಹಾಗೂ ಸಸ್ಯಗಳು ಇಲ್ಲವೇ ಅವುಗಳ ಭಾಗಗಳನ್ನು ಪೇಟೆಂಟ್ ಮಾಡಲಾಗದು. ಆದರೆ, ಸೂಕ್ಷ್ಮ ಜೀವಿಗಳನ್ನು ಒಳಗೊಂಡ ಪ್ರಕ್ರಿಯೆಗಳಿಗೆ ಪೇಟೆಂಟ್ ಪಡೆಯಬಹುದು. ಸಮಸ್ಯೆ ಇರುವುದು ಇಲ್ಲೇ. ಬಿಟಿ ಹತ್ತಿ ಗಿಡ ಬ್ಯಾಸಿಲ್ಲಸ್ ತುರಿಂಜೆನ್ಸಿಸ್ ಬ್ಯಾಕ್ಟೀರಿಯದ ವಂಶವಾಹಿಗಳನ್ನು ಒಳಗೊಂಡಿರುತ್ತದೆ. ಈ ವಂಶವಾಹಿಗಳು ಉತ್ಪಾದಿಸುವ ವಿಷ ಕಾಯಿಕೊರಕದ ಶತ್ರು.

ರೈತ ಸಂಕಷ್ಟ ತೀವ್ರಗೊಳ್ಳುವ ಸಾಧ್ಯತೆ: ಸುಪ್ರೀಂ ತೀರ್ಪಿನಿಂದ ರೈತರ ಸ್ಥಿತಿ ಇನ್ನಷ್ಟು ಹದಗೆಡಲಿದೆ. ಜೀವವೈವಿಧ್ಯಕ್ಕೆ ಧಕ್ಕೆ ತರಲಿದ್ದು, ರೈತರು, ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಹಾರಾಷ್ಟ್ರ ದೇಶದ ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯವಾಗಿದ್ದು, ಬೀಜ-ಕೀಟನಾಶಕದ ಬೆಲೆ ಹೆಚ್ಚಳದ ಜೊತೆಗೆ ಮಳೆ ಕೈಕೊಟ್ಟಿದ್ದು ರೈತರ ಆತ್ಮಹತ್ಯೆಗೆ ಕಾರಣವಾಗಿತ್ತು.

ಮಾನ್‌ಸ್ಯಾಂಟೋ ಜಗತ್ತಿನ ಅತ್ಯಂತ ದೊಡ್ಡ ಬೀಜ ಉತ್ಪಾದನಾ ಸಂಸ್ಥೆ. ಭಾರತೀಯ ಬೀಜೋತ್ಪಾದಕ ಉದ್ಯಮ ಸಂಘಟನೆ ಪ್ರಕಾರ, ಪ್ರತಿ ವರ್ಷ 50 ದಶ ಲಕ್ಷ ಪೊಟ್ಟಣ ಬೀಜವನ್ನು ಉತ್ಪಾದಿಸುತ್ತದೆ. ಭಾರತ ಜಗತ್ತಿನ ಅತ್ಯಂತ ದೊಡ್ಡ ಹತ್ತಿ ಉತ್ಪಾದನೆ ದೇಶವಾಗಿದ್ದು, 2017-18ರಲ್ಲಿ 6.21 ದಶಲಕ್ಷ ಮೆಟ್ರಿಕ್ ಟನ್ ನೂಲು ಉತ್ಪಾದಿಸಿತ್ತು. 2016ರಲ್ಲಿ ಕೇಂದ್ರ ಸರ್ಕಾರ ವಿ/ಎಸ್ ಮಹೈಕೋ ಮಾನ್‌ಸ್ಯಾಂಟೋ ಹಾಗೂ ಇನ್ನಿತರರು ಪ್ರಕರಣದಲ್ಲಿ ಕೇಂದ್ರ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಬಿಟಿ ಹತ್ತಿ ಬೀಜ ರೈತರಿಗೆ ಹೊರೆಯಾಗಿದೆ ಎಂದು ಹೇಳಿತ್ತು.

ಸ್ವದೇಶಿ ಜಾಗರಣ ಮಂಚ್, ಸರ್ಕಾರ 2005ರ ಪೇಟೆಂಟ್ ತಿದ್ದುಪಡಿ ಕಾಯಿದೆಯನ್ನು ಪುನರ್ವಿಮರ್ಶಿಸಬೇಕು ಎಂದಿದೆ. ಎಸ್‌ಜೆಎಂ ಪ್ರಕಾರ, ಮಾನ್‌ಸ್ಯಾಂಟೋ ಬಿಟಿ ಹತ್ತಿ ಬೀಜದಿಂದ ಈವರೆಗೆ 7,000 ಕೋಟಿ ರೂ. ರಾಜಧನ ಸಂಗ್ರಹಿಸಿದೆ. ಬಿಟಿ ತಂತ್ರಜ್ಞಾನ ಪರಿಸರಕ್ಕೆ ಹಾನಿಯುಂಟು ಮಾಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಹೇಗೆ ಸಾಬೀತು ಮಾಡಿದೆ ಎನ್ನುವುದನ್ನು ಪರಿಶೀಲಿಸಬೇಕು.

ಪೇಟೆಂಟ್ ತಿದ್ದುಪಡಿ ಕಾಯಿದೆಯ ವಿಭಾಗ 3(ಜೆ) ಪ್ರಕಾರ, ಮನುಷ್ಯರು, ಪ್ರಾಣಿಗಳು ಅಥವಾ ಸಸ್ಯಗಳಿಗೆ ಅಥವಾ ಆರೋಗ್ಯ ಅಥವಾ ಪರಿಸರಕ್ಕೆ ಗಂಭೀರ ಹಾಣಿಯುಂಟು ಮಾಡುವ ಅನ್ವೇಷಣೆಗೆ ಪೇಟೆಂಟ್ ನೀಡುವಂತಿಲ್ಲ. ಮುಖ್ಯ ಪ್ರಶ್ನೆ: ಆದರೆ, ಬಿಟಿ ಹತ್ತಿಗೆ ಪೇಟೆಂಟ್ ನೀಡಬಹುದೇ ಎಂಬ ಕುರಿತು ಹೈಕೋರ್ಟ್‌ನ ಏಕ ಸದಸ್ಯ ಪೀಠದಲ್ಲಿ ಚರ್ಚೆಯಾಗಲಿಲ್ಲ. ಹೀಗಾಗಿ, ವಿಭಾಗೀಯ ಪೀಠದಲ್ಲೂ ಚರ್ಚೆಯಾಗಲಿಲ್ಲ. ಕೃಷಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವ ಅವಕಾಶವನ್ನು ಸುಪ್ರೀಂ ಕೋರ್ಟ್ ಕಳೆದುಕೊಂಡಿತು. ದೇಶದ ಅಗತ್ಯಗಳು ಹಾಗೂ ಸಾಮಾಜಿಕೋ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ, ಪ್ರಕರಣವನ್ನು ರೈತರ ಪರವಾಗಿ ತೀರ್ಮಾನಿಸಬಹುದಿತ್ತು. ಬೇರೆ ದೇಶಗಳ ಸುಪ್ರೀಂಕೋ ರ್ಟ್‌ ಗಳು ಇಂಥ ಕೆಲಸ ಮಾಡಿವೆ. ಅಂಥ ಒಂದು ಸುವರ್ಣಾವಕಾಶ ತಪ್ಪಿಹೋಯಿತು.

ನೂಜಿವೀಡು ಸೇರಿದಂತೆ ದೇಶಿ ಕಂಪನಿಗಳು ಈ ತೀರ್ಪನ್ನು ಪ್ರಶ್ನಿಸಬಹುದು. ಕೊನೆಗೊಮ್ಮೆ ಮಾನ್‌ಸ್ಯಾಂಟೋ ಗೆಲುವು ಸಾಧಿಸಿದರೆ, ಭಾರತದಲ್ಲಿ ಜೈವಿಕವಾಗಿ ಮಾರ್ಪಡಿಸಿದ ಸಸ್ಯ ಪ್ರಭೇದಗಳಿಗೆ ಪೇಟೆಂಟ್ ನೀಡಬಹುದು ಎಂದಾಗುತ್ತದೆ. ನೂಜಿವೀಡು ಗೆದ್ದರೆ, ಅಡ್ಡ ಕಸಿ ಮಾಡುವ ರೈತರ ಹಕ್ಕು ರಕ್ಷಿಸಲ್ಪಡುತ್ತದೆ.
-ಮಾಧವ ಐತಾಳ್

Leave a Reply

Your email address will not be published. Required fields are marked *