ಮಂಡ್ಯ ಉಸ್ತುವಾರಿ ನಾನೇ: ಸಿ.ಪಿ.ಯೋಗೇಶ್ವರ್ ಮಂಡ್ಯದಿಂದ ಗೆದ್ದಿಲ್ಲ: ಸಚಿವ
ಬೆಂಗಳೂರು, ಜ 25 ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ತಾವು
ಯಾರಿಗೂ ಬಿಟ್ಟುಕೊಡುವುದಿಲ್ಲ. ನೂತನ ಸಚಿವ ಸಿ.ಪಿ. ಯೋಗೇಶ್ವರ್ ಗೆ ಈ ಉಸ್ತುವಾರಿ
ನೀಡಲು ಸಾಧ್ಯವೇ ಇಲ್ಲ ಎಂದು ಯುವಜನಸೇವೆ ಮತ್ತು ಕ್ರೀಡಾ ಸಚಿವ
ನಾರಾಯಣಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ತಮಗೆ ವಹಿಸಿರುವ ನೂತನ ಯುವಜನಸೇವೆ ಮತ್ತು ಕ್ರೀಡಾ
ಇಲಾಖೆಯ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮಂಡ್ಯದಿಂದ ನಾನು ಗೆದ್ದು ಬಂದಿದ್ದೇನೆ. ಸಿ.ಪಿ. ಯೋಗೇಶ್ವರ್ ಏನಾದರೂ ಮಂಡ್ಯದಿಂದ
ಗೆದ್ದಿ ಬಂದಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಖಾತೆ ಹಂಚಿಕೆ ನಂತರ ಎದ್ದಿರುವ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ತಾಕಲಾಟ
ನಡೆದಿರುವ ಬೆನ್ನಲ್ಲೇ ಇದೀಗ ಸಚಿವ ನಾರಾಯಣ ಗೌಡ ನೇರವಾಗಿಯೇ ತಮ್ಮ ಆಕ್ರೋಶ
ಹೊರ ಹಾಕಿದ್ದಾರೆ.
ಯೋಗೇಶ್ವರ್ ಅವರನ್ನು ಮಂಡ್ಯ ಉಸ್ತುವಾರಿ ಮಾಡಲು ಹೇಗೆ ಸಾಧ್ಯ?. ನಾನೇ ಮಂಡ್ಯ
ಉಸ್ತುವಾರಿಯಾಗಿರುತ್ತೇನೆ. ಯಾವುದೇ ಕಾರಣಕ್ಕೂ ಮಂಡ್ಯ ಉಸ್ತುವಾರಿ
ಬದಲಾವಣೆಯಾಗುವುದಿಲ್ಲ.ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಹ ತಮ್ಮನ್ನು
ಬದಲಾವಣೆ ಮಾಡುವುದಿಲ್ಲ ಎಂದರು.
ಬೇರೆ ಯಾರಿಗೂ ಮಂಡ್ಯ ಉಸ್ತುವಾರಿ ಕೊಡುವುದಿಲ್ಲ. ಇವಾಗ ನಾನೇ ಮಂಡ್ಯ
ಉಸ್ತುವಾರಿ, ಮುಂದೆಯೂ ನಾನೇ ಉಸ್ತುವಾರಿಯಾಗಿ ಇರುತ್ತೇನೆ. ಇದರಲ್ಲಿ ಯಾವುದೇ
ಅನುಮಾನ ಬೇಡ. ಇಷ್ಟಕ್ಕೂ
ಸಿ.ಪಿ. ಯೋಗೇಶ್ವರ್, ನನ್ನ ಹಾಗೂ ಮುಖ್ಯಮಂತ್ರಿ ಅವರ ಅನುಮತಿ ಇಲ್ಲದೇ ಹೇಗೆ
ಉಸ್ತುವಾರಿಯಾಗುತ್ತಾರೆ ಎಂದರು.
ಸಿಪಿ ಯೋಗೇಶ್ವರ್ ಬೇಕಿದ್ದರೆ ಮಂಡ್ಯಗೆ ಬಂದು ಒಳ್ಳೆಯ ಊಟ ಮಾಡಿಕೊಂಡು
ಹೋಗಲಿ. ನನ್ನದೇನು ಅಭ್ಯಂತರವಿಲ್ಲ. ಅವರ ಇಲಾಖೆಗೆ ಸಂಬಂಧಿಸಿದಂತೆ ಏನು ಕೆಲಸ
ಇದೆಯೋ ಅದನ್ನು ಮಾಡಿಕೊಂಡು ಹೋಗಲಿ. ಆದರೆ ಅವರಿಗೆ ಮಂಡ್ಯ ಉಸ್ತುವಾರಿ
ಕೊಡುವುದಿಲ್ಲ ಎಂದರು.
ಎಲ್ಲ ಖಾತೆಗಳೂ ಒಳ್ಳೆಯದೇ. ಎಲ್ಲ ಖಾತೆಯಲ್ಲೂ ಅನುದಾನ ಇದ್ದೇ ಇದೆ. ತಮಗೆ ಖಾತೆ
ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.
ಮೇಲ್ಮನೆ ಸದಸ್ಯ ವಿಶ್ವನಾಥ್ ಒಬ್ಬಂಟಿ ಅಲ್ಲ. ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣ
ಇದ್ದು, ಅದು ಇತ್ಯರ್ಥ ಆಗುವ ತನಕ ಮಂತ್ರಿಯಾಗುವಂತಿಲ್ಲ. ಪ್ರಕರಣ ಇತ್ಯರ್ಥವಾದ
ಬಳಿಕ ಅವರು ಮಂತ್ರಿಮಂಡಲ ಸೇರುತ್ತಾರೆ ಎಂದು ಹೇಳಿದರು.
ನಾವು 17 ಮಂದಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ
ಬಂದಿದ್ದೇವೆ. ನಾವೆಲ್ಲ ಒಟ್ಟಾಗಿ ಇದ್ದೇವೆ. ನಾವೆಲ್ಲರೂ ಒಟ್ಟಿಗೆ ಶೀಘ್ರ ಮಾಧ್ಯಮಗಳ
ಮುಂದೆ ಬರುತ್ತೇವೆ ಎಂದು ನಾರಾಯಣಗೌಡ ಹೇಳಿದರು.