ಮಾಗಡಿ ತಾಲ್ಲೂಕಿನ ಮರ್ಯಾದೆಗೇಡು ಹತ್ಯೆ: ತಂದೆ, ಸಹೋದರನ ಬಂಧನ

ಮರ್ಯಾದೆಗೇಡು ಹತ್ಯೆ: ತಂದೆ, ಸಹೋದರನ ಬಂಧನ

ರಾಮನಗರ, ಅ.17  ಪರಿಶಿಷ್ಟ ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ
ಮಗಳನ್ನೇ ಹತ್ಯೆ ಮಾಡಿದ್ದ ತಂದೆ ಮತ್ತು ಯುವತಿಯ ದೊಡ್ಡಪ್ಪನ ಮಗನನ್ನು
ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಬೆಟ್ಟದಹಳ್ಳಿ ನಿವಾಸಿ ಕೃಷ್ಣಪ್ಪ (48)
ಹಾಗೂ ಅವರ ಸಹೋದರನ ಮಗ ಚೇತನ್‌ (21) ಬಂಧಿತರು. ಕೊಲೆಗೆ ಸಹಕರಿಸಿದ
ಮತ್ತೊಬ್ಬ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನನ್ನೂ ಪೊಲೀಸರು ವಶಕ್ಕೆ
ಪಡೆದಿದ್ದಾರೆ. ಇದೇ ತಿಂಗಳ 9ರಂದು ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಹೇಮಲತಾ (19)
ಕಾಣೆಯಾಗಿದ್ದಾಳೆ ಎಂದು ಕೃಷ್ಣಪ್ಪ ಎಂಬವರು ಕುದೂರು ಠಾಣೆಯಲ್ಲಿ ದೂರು
ದಾಖಲಿಸಿದ್ದರು. ಅದಾದ ಮರುದಿನವೇ ಅವರ ಸಹೋದರನ ತೋಟದಲ್ಲಿ ಯುವತಿಯ ಶವ
ಪತ್ತೆಯಾಗಿತ್ತು.
ವ್ಯವಸ್ಥಿತ ಕೃತ್ಯ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಹೇಮಲತಾ ಅದೇ ಗ್ರಾಮದ
ಯುವಕನನ್ನು ಪ್ರೀತಿಸುತ್ತಿದ್ದರು. ಈ ಸಂಬಂಧ ಠಾಣೆಯಲ್ಲಿ ಹಿಂದೆಯೂ ರಾಜೀ ಸಂಧಾನ
ನಡೆದಿತ್ತು.
ಮಗಳ ಪ್ರೇಮದ ವಿಷಯದಿಂದ ಸಿಟ್ಟಿಗೆದ್ದ ಕೃಷ್ಣಪ್ಪ ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ
ಬಂದಿದ್ದರು. ಅದರಂತೆ ಇದೇ ತಿಂಗಳ 8ರಂದೇ ಸಂಬಂಧಿಕರ ಜೊತೆಗೂಡಿ ಆಕೆಯನ್ನು ಹತ್ಯೆ
ಮಾಡಿ ಶವವನ್ನು ಸಮೀಪದ ಜಮೀನಿನಲ್ಲಿ ಹೂತಿದ್ದರು. ಮರುದಿನ ಠಾಣೆಗೆ ಬಂದು
ಮಗಳು ಕಾಣೆ ಆಗಿದ್ದಾಗಿ ತಾವೇ ದೂರನ್ನೂ ನೀಡಿದ್ದರು’ ಎಂದು ಕೇಂದ್ರ ವಲಯ ಐಜಿಪಿ
ಸೀಮಂತ್‌ಕುಮಾರ್‌ ಸಿಂಗ್‌ ಮಾಹಿತಿ ನೀಡಿದರು. ಪ್ರಕರಣದಲ್ಲಿ ಇನ್ನಷ್ಟು ಮಂದಿ
ಭಾಗಿಯಾಗಿರುವ ಸಾಧ್ಯತೆ ಇದ್ದು, ಅವರನ್ನೂ ಬಂಧಿಸುವುದಾಗಿ ತಿಳಿಸಿದರು.
‘ಹೇಮಲತಾರನ್ನು ಅತ್ಯಾಚಾರ ಮಾಡಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ’ ಎಂದು
ಅಪಪ್ರಚಾರ ಮಾಡಿದ್ದವರ ಮೇಲೂ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *