ಸೋದರಿಗೆ ಶಮಿತಾ ಬೆಂಬಲ: ಶಿಲ್ಪಾ ಶೆಟ್ಟಿ ಗಟ್ಟಿ ಮಹಿಳೆ ಎಂದ ಮಾಧವನ್
ಮುಂಬೈ, ಆಗಸ್ಟ್ 03 ನೀಲಿಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿ ರಾಜ್ ಕುಂದ್ರಾ ಬಂಧನದ ನಂತರ ಜಾಲತಾಣದಲ್ಲಿ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶಿಲ್ಪಾ ಶೆಟ್ಟಿಯನ್ನು ಸೋದರಿ ಶಮಿತಾ ಬೆಂಬಲಿಸಿದ್ದಾರೆ.
ಶಮಿತಾ ಶೆಟ್ಟಿಯೊಂದಿಗೆ ಬಂಧಿತ ರಾಜ್ ಕುಂದ್ರಾ ಜೊತೆಗೆ ಶಮಿತಾ ಶೆಟ್ಟಿಗೆ ಉತ್ತಮ ಬಾಂಧವ್ಯ ಇತ್ತು. ರಾಜ್ ಕುಂದ್ರಾ ನಿರ್ಮಿಸಲಿದ್ದ ಸಿನಿಮಾದಲ್ಲಿ ಶಮಿತಾ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಆ ಸಿನಿಮಾ ಇನ್ನೂ ಸೆಟ್ಟೇರಿರಲಿಲ್ಲ. ಬಾಲಿವುಡ್‌ನ ಕಾರ್ಯಕ್ರಮಗಳಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಜೊತೆಗೆ ಶಮಿತಾ ಶೆಟ್ಟಿ ಸಹ ಕಾಣಿಸಿಕೊಳ್ಳುತ್ತಿದ್ದರು.
ಮತ್ತೊಂದೆಡೆ ತಮಿಳು, ಹಿಂದಿ ಚಿತ್ರಗಳ ಖ್ಯಾತ ನಟ ಆರ್.ಮಾಧವನ್ ಸಹ ಶಿಲ್ಪಾ ಶೆಟ್ಟಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ”ನಾನು ನೋಡಿದ ಅತ್ಯಂತ ಗಟ್ಟಿ ಮಹಿಳೆಯರಲ್ಲಿ ನೀವು ಒಬ್ಬರು. ಈ ಸವಾಲಿನ ಸಮಯವನ್ನು ನೀವು ಘನತೆಯಿಂದ ಪಾರಾಗಿ ಬರುತ್ತೀರ ಎಂಬ ವಿಶ್ವಾಸ ನನಗೆ ಇದೆ. ನನ್ನ ಪ್ರಾರ್ಥನೆಗಳು ನಿಮಗೆ ಹಾಗೂ ನಿಮ್ಮ ಕುಟುಂಬ ಪರವಾಗಿ ಸದಾ ಇರುತ್ತದೆ” ಎಂದಿದ್ದಾರೆ.
ಇನ್ನು ಬಾಲಿವುಡ್ ನಟಿ ರೀಚಾ ಚಡ್ಡಾ ಸಹ ಶಿಲ್ಪಾ ಶೆಟ್ಟಿಗೆ ಬೆಂಬಲಿಸಿ ಇತ್ತೀಚೆಗೆ ಟ್ವೀಟ್ ಮಾಡಿ, ”ನಮ್ಮ ದೇಶದಲ್ಲಿ ಪುರುಷರು ಮಾಡುವ ತಪ್ಪಿಗೆ ಮಹಿಳೆಯರನ್ನು ನಿಂದಿಸಲಾಗುತ್ತದೆ. ಇದೊಂದು ರೀತಿ ನಮ್ಮ ರಾಷ್ಟ್ರೀಯ ಕ್ರೀಡೆಯಾಗಿಬಿಟ್ಟಿದೆ. ತಮ್ಮ ವಿರುದ್ಧ ಅಕಾರಣ ನಿಂದನೆ ಮಾಡುವವರ ಮೇಲೆ ಮೊಕದ್ದಮೆ ಹೂಡಲು ಮುಂದಾಗಿರುವುದು ಬಹಳ ಒಳ್ಳೆಯ ಬೆಳವಣಿಗೆ” ಎಂದಿದ್ದರು.