ಕಟ್ಟಡ ತೆರವು ವಿರೋಧಿಸಿ ಎಎಪಿ ಶಾಸಕನ ಹೋರಾಟ; ಪಕ್ಷದ MLA ಬಂಧನವಾದ್ರೂ ಎಎಪಿ ಮೌನವೇಕೆ?

ನವದೆಹಲಿ: ಮೇ 13 (ಉದಯಕಾಲ ನ್ಯೂಸ್) ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಬಂಧನ ವಿರೋಧಿಸಿ ಅವರು ಪ್ರತಿನಿಧಿಸುವ ಕ್ಷೇತ್ರದ ಹಲವಾರು ಪ್ರದೇಶಗಳಲ್ಲಿ ಇಂದು ಮಾರುಕಟ್ಟೆಗಳನ್ನ ಮುಚ್ಚಿ ಸ್ವಯಂಘೋಷಿತ ಬಂದ್ ವಾತಾವರಣ ನಿರ್ಮಿಸಲಾಗಿದೆ.

ತಮ್ಮ ಚುನಾಯಿತ ಪ್ರತಿನಿಧಿಗೆ ಒಗ್ಗಟ್ಟಿನಿಂದ ಬೆಂಬಲ ಸೂಚಿಸಲು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವ್ಯಾಪಾರ- ವಹಿವಾಟಿನ ಅಂಗಡಿ ಮುಚ್ಚುವಂತೆ  ಓಖ್ಲಾ ಜನರಿಗೆ ಅಮಾನತುಲ್ಲಾ ಖಾನ್ ಅವರ ಪತ್ನಿ ಶಫಿಯಾ ಮನವಿ ಮಾಡಿದ್ದರು. ಆಗ್ನೇಯ ದೆಹಲಿಯಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ವಿರೋಧಿಸಿ ಮಧ್ಯಪ್ರವೇಶಿಸಿದ್ದ ಶಾಸಕ ಅಮಾನತುಲ್ಲಾ ಖಾನ್  ಬಿಜೆಪಿ ಆಡಳಿತದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಿರ್ಧಾರದ ವಿರುದ್ಧ ಪ್ರತಿಭಟಿಸಿದ್ದರು.

ಕಾನೂನುಬಾಹಿರವೆಂದು ಪರಿಗಣಿಸಿದ ಹಲವಾರು ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯ ವೇಳೆ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ  ಅಮಾನತುಲ್ಲಾ ಖಾನ್ ಅವರನ್ನ ನಿನ್ನೆ ದೆಹಲಿ ಪೊಲೀಸರು ಬಂಧಿಸಿದ್ದರು.

ಆದರೆ ಗಮನಾರ್ಹ ಅಂಶವೆಂದರೆ  ಅಮಾನತುಲ್ಲಾ ಖಾನ್  ಬಂಧನದ ಒಂದು ದಿನದ ನಂತರವೂ ಎಎಪಿ ಅಥವಾ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಈ ಬಗ್ಗೆ ಇದುವರೆಗೂ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡದೇ ಇರುವುದರಿಂದ ಅಮಾನತುಲ್ಲಾ ಖಾನ್ ಅವರಿಗೆ ಹಿನ್ನಡೆ ಉಂಟಾಗಿದೆ.

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇಂದು ಬೆಳಗ್ಗೆ ಬಂಧನದ ಬಗ್ಗೆ ಎಎಪಿ ಮೌನವಾಗಿರುವುದು “ವಿಸ್ಮಯಕಾರಿ” ಎಂದು ಬಣ್ಣಿಸಿದ್ದಾರೆ. ವಿವಾದಾತ್ಮಕ ಪೌರತ್ವ ಕಾನೂನು ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕುರಿತು ಎಎಪಿ ಬಿಜೆಪಿಯನ್ನು ಬೆಂಬಲಿಸಿದರೆ, ಖಾನ್ ಅವರನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ ಎಂದು ಅವರು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

ಮದನ್‌ಪುರ ಖಾದರ್ ಪ್ರದೇಶದಲ್ಲಿ ಗುರುವಾರ ನಡೆದ ಧ್ವಂಸ ಅಭಿಯಾನದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಎಎಪಿ ನಾಯಕ ಮತ್ತು ಅವರ ಬೆಂಬಲಿಗರನ್ನು ಬಂಧಿಸಲಾಯಿತು. ಅತಿಕ್ರಮಣ ವಿರೋಧಿ ಅಭಿಯಾನವು ಮದನ್‌ಪುರ ಖಾದರ್ ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಕಲ್ಲು ತೂರಾಟಕ್ಕೆ ಕಾರಣವಾಯಿತು.  ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು.

Leave a Reply

Your email address will not be published. Required fields are marked *