ಮತದಾನ ನಮ್ಮ ಹಕ್ಕು: ಚಲಾಯಿಸಿಯೇ ತೀರೋಣ!

ಈ ಸಾರಿಯ ಚುನಾವಣೆಯಲ್ಲಿ ಗರಿಷ್ಟ ಮಟ್ಟದ ಮತ ಚಲಾಯಿಸಿ ಸುಸ್ಥಿರ ಅಭಿವೃದ್ಧಿಶೀಲ ಆಡಳಿತಕ್ಕೆ ಒತ್ತು ಕೊಡುವ ಮೂಲಕ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಒಯ್ಯೋಣ…

ಈಗ ಮೊದಲೇ ಹೇಳಿ ಮಾಡಿಸಿದ ಹಾಗೆ ಬಿರು ಬೇಸಿಗೆ! ಸುತ್ತಲ ವಾತಾವರಣದ ತಾಪ ದಿನೇ ದಿನೇ ಹೆಚ್ಚುತ್ತಿದೆ. ನಮ್ಮಲ್ಲಿ ಇನ್ನೂ ಬಿಸಿ ಏರುವಂತೆ ಮಾಡುತ್ತಿರುವುದು ಈ ಸಾರಿಯ ಲೋಕಸಭಾ ಇಲೆಕ್ಷನ್! ಇಲ್ಲಿ ಯಾವ ಪಕ್ಷ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ? ಯಾರು ದೇಶವನ್ನು ಮುನ್ನಡೆಸುವ ಸಮರ್ಥ ಪ್ರಧಾನಿಯಾಗು ತ್ತಾರೆ? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಈ ದೀರ್ಘಕಾಲಿಕ ಬೇಸಿಗೆ ರಜೆಯಲ್ಲಿ ಹೈಸ್ಕೂಲ್ ಮಕ್ಕಳನ್ನೇ ಮೊದಲು ಮಾಡಿಕೊಂಡು ಯುವಕರು, ಹಿರಿಯರು ಎಲ್ಲರೂ ತಂಡೋಪತಂಡವಾಗಿ ವಿವಿಧ ಪಕ್ಷಗಳ ನೇತಾರರ ಮನೆ ಮುಂದೆ ಪ್ರತೀ ದಿನವೂ ಹಾಜರ್! ಪಕ್ಷದ ಪ್ರಚಾರ, ಬ್ಯಾನರ್ ಕಟ್ಟುವುದು, ಹಣ-ಹೆಂಡ ಹಂಚುವುದು ಇವೆಲ್ಲವೂ ನಮ್ಮ ಕಣ್ಣಿಗೆ ಕಾಣುವ ಸರ್ವೇ ಸಾಮಾನ್ಯ ದೃಶ್ಯಗಳು. ಪವಿತ್ರವಾದ ರಾಜಕೀಯ ಇಂದು ಉಡಾಳರ, ಬಂಢರ, ಅನಾಚಾರಿಗಳ, ಗೂಂಡಾಗಳ ಕೈಗೆ ಸಿಕ್ಕು ಅಪವಿತ್ರವಾಗುತ್ತಿರುವುದಂತೂ ಸತ್ಯ.

ರಾಜಕೀಯದ ಮೂಲ ಧ್ಯೇಯವಾದ ‘ಜನ ಸೇವೆಯೇ ಜನಾರ್ಧನ ಸೇವೆ’ ಎನ್ನುವುದರ ಬದಲು ‘ನಮ್ಮ ಸ್ವಾರ್ಥ ಸೇವೆಯೇ ಜನಾರ್ಧನ ಸೇವೆ’ ಎಂಬಂತಾಗಿದೆ. ಇದರ ಪರಿಣಾಮವಾಗಿ ಅಧಿಕಾರದ ಆಕಾಂಕ್ಷಿಗಳ ಪಟ್ಟಿ ವರ್ಷ ದಿಂದ ವರ್ಷಕ್ಕೆ ಬೆಳೆಯುತ್ತಾ ಸಾಗುತ್ತಿದೆ. ಯಾವ ಪಕ್ಷ ಗೆದ್ದರೇನು? ಯಾರು ಅಧಿಕಾರಕ್ಕೆ ಬಂದರೇನು? ಜನಸಾಮಾನ್ಯರಿಗೆ ನಯಾಪೈಸೆಯ ಲಾಭವೂ ಇಲ್ಲವೆಂಬಂತಾಗಿದೆ ಇಂದಿನ ಪರಿಸ್ಥಿತಿ. ಇಲೆಕ್ಷನ್ ಬಂದರೆ ಸಾಕು ಯಾವುದೇ ಒಂದು ಸಮಸ್ಯೆಯನ್ನು ಹಿಡಿದುಕೊಂಡು ಜನರಿಗೆ ‘ನಮ್ಮನ್ನು ಬಹುಮತದಿಂದ ಆರಿಸಿ ತನ್ನಿ, ಕ್ಷಣದಲ್ಲಿ ಆ ಸಮಸ್ಯೆಯನ್ನು ಪರಿಹರಿಸುತ್ತೇವೆ’ ಎಂದು ಆಶ್ವಾಸನೆ ಕೊಡುವುದು ಸರ್ವೇ ಸಾಮಾನ್ಯವಾಗಿದೆ.

ನಿಜ ಹೇಳಬೇಕೆಂದರೆ ನಮ್ಮನ್ನಾಳುವ ಬಹುಪಾಲು ಈ ರಾಜಕೀಯ ಧುರೀಣರಿಗೆ ಆ ಸಮಸ್ಯೆಗಳನ್ನು ಪರಿಹರಿ ಸುವ ಗೋಜು ಬೇಕಿಲ್ಲ. ಬದಲಾಗಿ ತೋರಿಕೆ ನಟನೆ ಮಾತ್ರ ಎಲ್ಲರಿಗೂ ಕಾಣುವಂತಹ ದೃಶ್ಯವೇ ಆಗಿರುತ್ತದೆ. ಅಭಿವೃದ್ಧಿಯ ಆಧಾರದ ಮೇಲೆ ಜನರಿಂದ ಮತ ಯಾಚಿಸುವಷ್ಟು ಪ್ರೌಢಿಮೆ ನಮ್ಮನ್ನಾಳುವ ಕೆಲವು ಪುಢಾರಿ ಗಳಿಗೆ ಇನ್ನೂ ಬಂದಿಲ್ಲ. ಬದಲಾಗಿ ಬರೀ ಪ್ರತ್ಯಾರೋಪಗಳಲ್ಲೇ ಕಾಲ ದೂಡುತ್ತಾ ನೈಜ ಪ್ರಜಾಪ್ರಭುತ್ವ ಆಶಯದ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರಕಾರ ಎನ್ನುವುದು ಬರೀ ನಾವು ಪಠ್ಯ ಪುಸ್ತಕದಲ್ಲಿ ಓದಿ ಕಂಠಸ್ತಮಾಡಿ ಪರೀಕ್ಷೆ ಬರೆದು ಪಾಸು ಮಾಡಿದ ಸಂದರ್ಭಕ್ಕಷ್ಟೆ ಸೀಮಿತವಾದಂತೆ ಅನಿಸುತ್ತಿದೆ.

ಸದ್ಯದ ಪರಿಸ್ಥಿಯಲ್ಲಿ ಯಾರಿಗೆ ಮತ ಹಾಕಿದರೇನು ಪ್ರಯೋಜನ? ಕಳ್ಳರಲ್ಲಿ ತಕ್ಕ ಮಟ್ಟಿನ ಒಳ್ಳೆಯ ಕಳ್ಳನನ್ನು ಆರಿಸಿ ತರುವ ಗುರುತರ ಜವಾಬ್ದಾರಿಯ ಹಣೆಬರಹದಂತೆ ಆಗಿದೆ ಇಂದಿನ ನಮ್ಮ ಪರಿಸ್ಥಿತಿ. ಎಂತಹುದೇ ಪರಿಸ್ಥಿತಿ ಇದ್ದರೂ ಎಲ್ಲರೂ ಸ್ವಾರ್ಥಿಗಳಾಗಿರುವುದಿಲ್ಲ. ಅವರಲ್ಲಿ ಕೆಲವರಾದರೂ ದೇಶದ ಬಗ್ಗೆ ಉನ್ನತ ವಿಚಾರ, ಆದರ್ಶಗಳನ್ನು ಇಟ್ಟುಕೊಂಡು ಆಡಳಿತ ನಡೆಸಲು ಉತ್ಸುಕರಾಗಿರುತ್ತಾರೆ. ಅಂತಹ ಸೂಕ್ತ ವ್ಯಕ್ತಿಗಳನ್ನು ಗುರುತಿಸಿ ಚುನಾವಣೆಯಲ್ಲಿ ಆರಿಸಿ ತರುವುದು ನಮ್ಮೆಲ್ಲರ ಗುರುತರ ಜವಾಬ್ದಾರಿ.

ಅದೇನೇ ಇರಲಿ. ಮತದಾನ ಮಾಡುವುದು ನಮ್ಮ ಆದ್ಯ ಕರ್ತವ್ಯಗಳಲ್ಲೊಂದು. ಇದಕ್ಕೆ ನಮ್ಮ ಸಂವಿಧಾನ ನಮಗೆ ಅವಕಾಶ ಕಲ್ಪಿಸಿದೆ. ನಮ್ಮನ್ನಾಳುವ ಮಂದಿಯನ್ನು ನಾವೇ ಚುನಾಯಿಸಿಕೊಳ್ಳುವ ಬಹುಅಮೂಲ್ಯ ಅವಕಾಶವನ್ನು ನಮ್ಮ ಪ್ರಜಾಪ್ರಭುತ್ವ ನಮಗೆ ದಯಪಾಲಿಸಿದೆ. ಅದಕ್ಕೆಂದೇ ಭಾರತದ ಸಂವಿಧಾನದಲ್ಲಿ ಈ ಮತದಾನವನ್ನು ಹಕ್ಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಪ್ರಕಾರ, ನಮ್ಮ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದಾಗ್ಯೂ ನಮ್ಮ ಹಕ್ಕಿಗೆ ಚ್ಯುತಿ ಬಂದರೆ ಅದನ್ನು ಪ್ರಶ್ನಿಸುವ ಅವಕಾಶವನ್ನೂ ಸಂವಿಧಾನ ನಮಗೆ ಕೊಟ್ಟಿದೆ. ಇಷ್ಟೆಲ್ಲಾ ಅನುಕೂಲಗಳನ್ನು ಸಂವಿಧಾನ ನಮಗೆ ಕೊಟ್ಟಿದ್ದರೂ ನಾವು ರಾಜಕೀಯ ವ್ಯವಸ್ಥೆಯಿಂದ ಬೇಸತ್ತು ಮತದಾನದಿಂದ ದೂರ ಉಳಿಯುವುದು ಸರಿಯಲ್ಲ.

ಜಗತ್ತಿನ ಬಹಳಷ್ಟು ರಾಷ್ಟ್ರಗಳಲ್ಲಿ ಅಲ್ಲಿನ ಪ್ರಜೆಗಳಿಗೆ ಮತದಾನದ ಮುಕ್ತ ಹಕ್ಕು ನೀಡಲಾಗಿಲ್ಲ. ಕೆಲವು ರಾಷ್ಟ್ರ ಗಳಲ್ಲಿ ನಿರ್ಬಂಧಿತ ಪ್ರಜಾಪ್ರಭುತ್ವ, ನಿರಂಕುಶ ಸರ್ವಾಡಳಿತ ಜಾರಿಯಲ್ಲಿದೆ. ಅಂತಲ್ಲಿ ಪ್ರಜೆಗಳು ಆಳುವ ದೊರೆಗಳಿಗೆ ಚಕಾರವೆತ್ತದೆ, ಅನ್ಯಾಯದ ವಿರುದ್ಧ ಧ್ವನಿಯೆತ್ತದೆ ಸುಮ್ಮನಿರುವ ಪದ್ಧತಿ ರೂಢಿಯಲ್ಲಿದೆ. ಆದರೆ, ಅಮೇರಿಕಾ, ಭಾರತದಂತಹ ರಾಷ್ಟ್ರಗಳಲ್ಲಿ ತಮ್ಮ ನಾಯಕರನ್ನು ಆರಿಸುವ ಹಕ್ಕನ್ನು ಅಲ್ಲಿನ ಪ್ರಜೆಗಳಿಗೆ ಕೊಡಲಾಗಿದೆ. ಇಲ್ಲಿ ಜನಪ್ರತಿನಿಧಿಗಳ ಸಂಬಳ, ವಿಶೇಷ ಭತ್ಯೆಗಳು, ಜನಪರ ಅಭಿವೃದ್ಧಿ ಕಾರ್ಯಗಳು ಮೊದಲಾದ ಎಲ್ಲ ಖರ್ಚು ವೆಚ್ಚಗಳನ್ನು ಪ್ರಜೆಗಳು ಪಾವತಿಸಿದ ತೆರಿಗೆಯಿಂದ ಭರಿಸಲಾಗುತ್ತದೆ. ಇದಾಗ್ಯೂ ಸರಕಾರದಿಂದ ಖರ್ಚು ಅಧಿಕವಾದರೆ ಅದನ್ನು ಪ್ರಜೆಗಳ ಮೇಲೇ ಹೇರಲಾಗುತ್ತದೆ. ನಾವು ಸರಕಾರಕ್ಕೆ ಕಟ್ಟುವ ತೆರಿಗೆ ಹಣದಿಂದಲೇ ಆಡಳಿತ ನಡೆದುಕೊಂಡು ಹೋಗುತ್ತಿರುವಾಗ ನಾವು ಮತದಾನ ಮಾಡದೇ ದೂರ ಉಳಿದರೆ ನಮಗೆ ಅದರಿಂದ ಲಾಭಕ್ಕಿಂತಲೂ ಹಾನಿಯೇ ಜಾಸ್ತಿ!

ಭಾರತದಲ್ಲಿ ಬಹು ರಾಜಕೀಯ ಪದ್ಧತಿ ( ಮಲ್ಟಿ ಪಾಲಿಟಿಕಲ್ ಸಿಸ್ಟಮ್ – ಎರಡಕ್ಕಿಂತ ಹೆಚ್ಚು ಪಕ್ಷಗಳನ್ನು ಹೊಂದುವ ಅವಕಾಶ) ಜಾರಿಯಲ್ಲಿದೆ. ಇಂಗ್ಲೆಂಡ್ ಮತ್ತು ಅಮೇರಿದಲ್ಲಿ ಎರಡೇ ಪಕ್ಷಗಳಿಗೆ ಮಾತ್ರ ಅವಕಾಶವಿದೆ. ಆದರೆ, ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಕಾಣೋ ಉದ್ದೇಶದಿಂದ ಪ್ರಾದೇಶಿಕ ಪಕ್ಷಗಳನ್ನು ಹುಟ್ಟು ಹಾಕಲು ಸಂವಿಧಾನವು ಅವಕಾಶ ಕಲ್ಪಿಸಿದೆ. ಅಂದರೆ ಯಾರೇ ಆದರೂ ತಮ್ಮದೇ ಆದ ಸಂಘಟನೆಯ ಮೂಲಕ ಹೊಸ ಪಕ್ಷವನ್ನು ಕಟ್ಟಬಹುದು. ಈಗ ನಮ್ಮನ್ನಾಳುತ್ತಿರುವ ರಾಜಕೀಯ ಪಕ್ಷಗಳು ಸರಿಯಾಗಿ ಕೆಲಸ ಮಾಡದೇ ಭ್ರಷ್ಟತೆಯಿಂದ ಕೂಡಿವೆಯೇ! ಹಾಗಿದ್ದಲ್ಲಿ ಬರುವ ಚುನಾವಣೆಗೆ ನಮ್ಮದೇ ಆದ ಜನಪರ ಅಭಿವೃದ್ಧಿಗೆ ಒತ್ತು ಕೊಡುವ ಹೊಸ ಪಕ್ಷ ಕಟ್ಟಿಕೊಳ್ಳಬಹುದು. ಜೊತೆಗೆ ಮೊದಲಿನ ಭ್ರಷ್ಟ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ದೇಶದ, ರಾಜ್ಯದ ಅಭಿವೃದ್ಧಿಯನ್ನು ಸಾಕಾರಗೊಳಿಸಬಹುದು. ಇದರಿಂದ ನಮ್ಮ ಒಂದು ಮತದ ಬೆಲೆ ಏನೆಂಬುದು ಗೊತ್ತಾಗುತ್ತದಲ್ಲವೆ!

ಈಗಿರುವ ರಾಜಕೀಯ ವ್ಯವಸ್ಥೆಯಿಂದ ರೋಸಿ ಹೋಗಿದ್ದೇನೆ, ಅದರಲ್ಲಿ ಭಾಗವಾಗಲು ಇಷ್ಟಪಡುವುದಿಲ್ಲ ಎಂದರೂ ಸಹ ನಾವು ಮತದಾನದಿಂದ ದೂರ ಉಳಿಯಲು ಆಗುವುದಿಲ್ಲ. ನಮ್ಮ ಹುಟ್ಟಿನೊಂದಿಗೆ ನಾವು ಸಂವಿಧಾನಾತ್ಮಕವಾದ ಉಳಿದೆಲ್ಲಾ ಹಕ್ಕುಗಳನ್ನು ಅನುಭವಿಸಿಯೂ ಮತದಾನದ ಹಕ್ಕನ್ನು ತಳ್ಳಿ ಹಾಕಲು ಆಗದು. ಒಂದು ವೇಳೆ, ನಾವು ಈ ಮತದಾನದಿಂದ ದೂರ ಸರಿದು ಬಂಡಾಯ ಪ್ರದರ್ಶನ ಮಾಡಿದ್ದೇ ಆದಲ್ಲಿ ನಮ್ಮಿಂದ ಕೈ ತಪ್ಪಿದ ಒಂದು ಮತದಿಂದ ಏನು ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಮತಗಟ್ಟೆಯಲ್ಲಿ ನಮಗೆ ಮೀಸಲಾದ ಒಂದು ಹನಿ ಶಾಹಿ ಉಳಿಯುತ್ತದಷ್ಟೆ ! ಇದರಿಂದ ಬೇರಾವ ಪ್ರಯೋಜನವೂ ಆಗದು.

ಈ ಸಾರಿ ನಡೆಯುವ ಇಲೆಕ್ಷನ್ ನಲ್ಲಿ ಮತದಾನ ಮಾಡುವುದಿಲ್ಲ, ಇದರ ಮೂಲಕ ಭ್ರಷ್ಟರಿಗೆ ತಕ್ಕ ಪಾಠ ಕಲಿಸು ತ್ತೇನೆ ಎಂಬ ನಮ್ಮ ಧೋರಣೆಯಿಂದ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ಮತದಾನ ಮಾಡುವುದು ನಮ್ಮ ಆದ್ಯ ಕರ್ತವ್ಯವೆಂದು ತಿಳಿದು ಮತದಾನದಲ್ಲಿ ಭಾಗವಹಿಸಿ ನಮ್ಮ ಮತ ಚಲಾಯಿಸೋಣ. ಈ ಕೆಟ್ಟ ಜನಪ್ರತಿನಿಧಿಗಳ, ಸರಕಾರದ ವಿರುದ್ಧ ಸಮರ ಸಾರುವ ಉದ್ದೇಶದಿಂದ ವೈಯಕ್ತಿಕವಾಗಿ ಮನನೊಂದು ಮತಚಲಾಯಿಸದೇ ನಾನು ದೂರ ಉಳಿಯಬಹುದು. ಇದಕ್ಕಾಗಿ, ನನ್ನ ಕುಟುಂಬದ, ಸ್ನೇಹಿತರ, ನೆರೆಹೊರೆಯ, ಊರ ಜನರ ಮತ ಹಾಳು ಮಾಡುವ ಹಕ್ಕು ನನಗಿಲ್ಲವೆಂಬುದನ್ನು ಮೊದಲು ಅರಿತಿರಬೇಕು. ನಾನು ಮತದಾನ ಮಾಡದೇ ಇರುವುದು ನನ್ನ ಮೊದಲ ತಪ್ಪು. ಅದಕ್ಕಾಗಿ, ಉಳಿದವರಿಗೂ ಮತ ಚಲಾಯಿಸುವುದು ಬೇಡವೆನ್ನುವುದು ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ.

ಇದು ನಾ ಮಾಡುವ ಕಾನೂನಾತ್ಮಕ ಅಪರಾಧವೆನಿಸುತ್ತದೆ. ಇದರ ಬದಲಾಗಿ ವಿವೇಚನೆಯಿಂದ ಮತ ಚಲಾಯಿಸಿ ಪರಿಸ್ಥಿತಿಯ ವಿರುದ್ಧ ಹೋರಾಡಬಹುದಲ್ಲ! ಇದಕ್ಕೆ ಸಂವಿಧಾನಾತ್ಮಕವಾಗಿ ಅವಕಾಶವಿದೆ ಎಂಬು ದನ್ನು ತಿಳಿದುಕೊಂಡಿರಬೇಕು. ಈಗ ಹೊಸದಾಗಿ ಮತ ಚಲಾವಣೆಯಲ್ಲಿ ಮತದಾರರಿಗೋಸ್ಕರವಾಗೇ ನೋಟಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ನಮಗೆ ನಮ್ಮ ಕ್ಷೇತ್ರದಲ್ಲಿ ಇಲೆಕ್ಷನ್‌ಗೆ ನಿಂತ ಯಾವುದೇ ಅಭ್ಯರ್ಥಿ ಸೂಕ್ತನಲ್ಲ ವೆಂದಾದರೆ, ಇವಿಎಮ್ (ಇಲೆಕ್ಟ್ರಾನಿಕ್ ಓಟಿಂಗ್ ಮಷಿನ್) ನಲ್ಲಿ ನೋಟಾ ಆಯ್ಕೆಗುಂಡಿಯನ್ನು ಒತ್ತಿ ಮತದಾನ ಪೂರ್ಣಗೊಳಿಸಬಹುದು. ಇದರಿಂದ ಅಧಿಕ ಪ್ರಮಾಣದಲ್ಲಿ ಮತದಾನವಾಗಿದೆ ಎಂಬುದು ಸಾಬೀತಾಗಿ, ಭ್ರಷ್ಟ ರಾಜಕಾರಿಣಿಯ ಆಯ್ಕೆ ತಪ್ಪಿದಂತಾಗುತ್ತದೆ.

ಆ ಕ್ಷೇತ್ರದಲ್ಲಿ ಗರಿಷ್ಟ ನೋಟಾ ಆಯ್ಕೆ ಅಧಿಕವಾದರೆ ರಾಜಕಾರಣಿಗೆ ತನ್ನ ತಪ್ಪಿನ ಸ್ಪಷ್ಟ ಚಿತ್ರಣದ ಅರಿವಾಗು ತ್ತದೆ. ಇದರಿಂದ ಆತ ಎಚ್ಚೆತ್ತುಕೊಂಡು ಜನರಪರ ಕಾಳಜಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಇಲ್ಲವಾದರೆ, ಮುಂದಿನ ಸಾರಿ ನಾನು ಠೇವಣಿ ಕಳೆದುಕೊಳ್ಳುವೆನೆಂಬ ಭಯ ಆತನಲ್ಲಿ ಕಾಡಹತ್ತುತ್ತದೆ. ಅದ ಗಿ, ಈಗ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡು ನಮ್ಮ ಅಮೂಲ್ಯ ಮತವನ್ನು ಸೂಕ್ತ ವ್ಯಕ್ತಿಗೆ ನೀಡುವ ಮೂಲಕ ಆರಿಸಿ ತಂದು ಬಲಿಷ್ಠ, ಸುಸ್ಥಿರ ಆಡಳಿತದೊಂದಿಗೆ ನಮ್ಮ ದೇಶವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಿಂದ ಕಿತ್ತೆಸೆದು ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳ ಪಟ್ಟಿಯಲ್ಲಿ ಕಾಣುವಂತೆ ಮಾಡೋಣ.

  • ಎಲ್.ಪಿ.ಕುಲಕರ್ಣಿ, ಅಧ್ಯಾಪಕರು, ಮೊ: 8217769289

Leave a Reply

Your email address will not be published. Required fields are marked *