ಪ್ರಪಂಚ ಕೊರೋನಾ ಮುಕ್ತವಾಗಲಿ, ಬೇಗ ಲಸಿಕೆ ಸಿಗಲಿ; ಡಾ. ಮಂಜುನಾಥ್

ಪ್ರಪಂಚ ಕೊರೋನಾ ಮುಕ್ತವಾಗಲಿ, ಬೇಗ ಲಸಿಕೆ ಸಿಗಲಿ; ಡಾ.ಮಂಜುನಾಥ್
ಮೈಸೂರು, ಅ.17 ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.
ಸಿ.ಎನ್. ಮಂಜುನಾಥ್ ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ
ನೀಡಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.
ಸಿ.ಎನ್. ಮಂಜುನಾಥ್ ಮಾತನಾಡಿ, ಪ್ರಪಂಚ ಕೊರೋನಾ ಸಂಕಷ್ಟಗಳಿಂದ ಮುಕ್ತವಾಗಲಿ,
ಬೇಗ ಕೊರೋನಾಕ್ಕೆ ಲಸಿಕೆ ಸಿಗಲಿ ಹಾಗೂ ರಾಜ್ಯವು ಈ ಜಲಸಂಕಷ್ಟದಿಂದ ಮುಕ್ತವಾಗಲಿ
ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಕೇಳೊಕೊಂಡಿದ್ದೇನೆ. ವೈಯುಕ್ತಿಕವಾಗಿ ಹಾಗೂ
ಕುಟುಂಬಕ್ಕೋಸ್ಕರ ಏನನ್ನೂ ಕೇಳಿಕೊಂಡಿಲ್ಲ. ಇದು ತಮ್ಮ ಪತ್ನಿ ಹಾಗೂ ಮಕ್ಕಳ
ಉದ್ದೇಶವೂ ಆಗಿದೆ ಎಂದು ತಿಳಿಸಿದರು.
ದಸರಾ ಮಹೋತ್ಸವದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ಘಾಟನೆ ಮಾಡಲು
ವೈದ್ಯರಿಗೆ ಅವಕಾಶ ಮಾಡಿಕೊಟ್ಟ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು.
ಈ ದಸರಾ ಮಹೋತ್ಸವವು ನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ದೇಶೀಯತೆ
ಯನ್ನು ಸಾರುತ್ತದೆ ಎಂದು ತಿಳಿಸಿದರು.
ಪರಿಸರವನ್ನು ನಾವು ಬೆಳೆಸಬೇಕು. ಅದನ್ನು ಹಾಳು ಮಾಡಿದರೆ ಹೇಗೆ ಸಂಕಷ್ಟ
ಎದುರಾಗುತ್ತದೆ ಎಂಬುದನ್ನು ಇಂದು ಪ್ರಕೃತಿ ತೋರಿಸುತ್ತಿದೆ. ಇದಕ್ಕಾಗಿ ನಾವು
ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಸ್ಯಾನಿಟೇಷನ್‌ ಮಾಡಿಕೊಳ್ಳಬೇಕು, ವ್ಯಕ್ತಿಗತ
ಅಂತರವನ್ನು ಕಾಯ್ದುಕೊಳ್ಳಬೇಕು. ಮಾಸ್ಕ್ ಹಾಕಿಕೊಳ್ಳಬೇಕು ಎಂದು ನಾನು ಮನವಿ
ಮಾಡುತ್ತೇನೆ ಎಂದು ಡಾ. ಮಂಜುನಾಥ್ ಹೇಳಿದರು.
ಕೊರೋನಾ ಸಂಕಷ್ಟಗಳ ವಿರುದ್ಧ ರಾಜ್ಯ ಸರ್ಕಾರ ಸಹ ಹೋರಾಡುತ್ತಿದೆ. ಈಗಾಗಲೇ
150ಕ್ಕೂ ಹೆಚ್ಚು ಲ್ಯಾಬ್ ಟೆಸ್ಟ್ ಕೇಂದ್ರಗಳಿದ್ದು, ದಿನಕ್ಕೆ 1 ಲಕ್ಷ ಪರೀಕ್ಷೆಗಳಾಗುತ್ತಿದೆ
ಎಂದು ತಿಳಿಸಿದರು.
ಕೊರೋನಾ ಸೋಂಕಿನಿಂದ ಬಳಲುತ್ತಿದ್ದವರಿಗೆ ಪ್ರೀತಿ ಹಾಗೂ ಮಾನವೀಯತೆ ತೋರಬೇಕು.
ಇಂದು ಕೊರೋನಾ ಕಾಯಿಲೆಗಿಂತ ಅದರ ಭಯದ ಕಾಯಿಲೆಯೇ ಹೆಚ್ಚುತ್ತಿದೆ. ನಾವು
ಸೋಂಕಿತರಿಂದ ದೈಹಿಕವಾಗಿ ಮಾತ್ರ ದೂರವಿರಬೇಕು, ಮಾನಸಿಕವಾಗಲ್ಲ ಎಂದು ಡಾ.
ಮಂಜುನಾಥ್ ತಿಳಿಸಿದರು.
ಇಂದು ವೈದ್ಯರಿಗೆ ಅಭದ್ರತೆ ಕಾಡುತ್ತಿದೆ. ಅವರು ವೃತ್ತಿಯ ಒತ್ತಡ, ಮಾನಸಿಕ ಒತ್ತಡ
ಹಾಗೂ ದೈಹಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಹಲ್ಲೆ ಭೀತಿಯಿಂದ ಗ್ರಾಮೀಣ
ಭಾಗಗಳಿಗೆ ವೈದ್ಯರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರಿಗೆ
ಸೌಹಾರ್ದಯುತ ವಾತಾವರಣ ಹಾಗೂ ಭದ್ರತೆಯನ್ನು ಸರ್ಕಾರ ಕಲ್ಪಿಸಬೇಕಿದೆ ಎಂದು ಡಾ.
ಮಂಜುನಾಥ್ ತಿಳಿಸಿದರು.
ಸಮಾಜ ಜಾಲಾಡುತ್ತಿರುವ ಸಾಮಾಜಿಕ ಜಾಲತಾಣ; ಸಾಮಾಜಿಕ ಜಾಲತಾಣಗಳು ಸಮಾಜದ
ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಸಮಾಜವನ್ನು ಜಾಲಾಡುತ್ತಿದೆ. ಜನರ ದಿಕ್ಕಿ
ತಪ್ಪಿಸುತ್ತಿದೆ. ಕೊರೋನಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಪ್ಪು ಮಾಹಿತಿಗಳು

ರವಾನೆಯಾಗುತ್ತಿದೆ. ಇಂಥದ್ದು ನಿಲ್ಲಬೇಕಿದ್ದು, ನೈಜ ಸುದ್ದಿಯನ್ನು ಮಾತ್ರ ರವಾನಿಸಬೇಕು
ಎಂದು ಡಾ. ಮಂಜುನಾಥ್ ಮನವಿ ಮಾಡಿದರು.
ಯಾರು ಎಷ್ಟೇ ವಿದ್ಯೆ ಪಡೆದಿದ್ದರೂ ನಮ್ಮ ಸಂಸ್ಕಾರ ಬಹಳ ಮುಖ್ಯವಾಗುತ್ತದೆ. ನಾವು
ಸಹ ಜನರ ಜೀವ ಮೊದಲು ಆಮೇಲೆ ಶುಲ್ಕ ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಣೆ
ಮಾಡಲಾಗುತ್ತಿದೆ ಎಂದು ಡಾ. ಮಂಜುನಾಥ್ ತಿಳಿಸಿದರು.
ಮಾಸ್ಕ್ – ಸಾಮಾಜಿಕ ಅಂತರ – ಸ್ಯಾನಿಟೈಸರ್ ಬಳಸಿ;
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ದೇಶ ಹಾಗೂ ರಾಜ್ಯ ಕೊರೋನಾ
ಮುಕ್ತವಾಗಲಿ ಎಂದು ತಾಯಿ ಚಾಮುಂಡೇಶ್ವರಿ ಬಳಿ ಕೋರಿಕೊಂಡಿದ್ದೇನೆ. ದೇವಿಯ
ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. ವೈದ್ಯರು, ಆಶಾ
ಕಾರ್ಯಕರ್ತೆಯರು, ಪೌರಕಾರ್ಮಿಕರು, ದಾದಿಯರು ಕೊರೋನಾ ಸಂದರ್ಭದಲ್ಲಿ ವಿಶೇಷ
ಸೇವೆ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಮಾಸ್ಕ್ – ಸಾಮಾಜಿಕ ಅಂತರ – ಸ್ಯಾನಿಟೈಸರ್ ಅನ್ನು ಬಳಸಿ ಕೊರೋನಾ ಹೋಗಲಾಡಿಸಲು
ಶ್ರಮಿಸಬೇಕು. ಅಲ್ಲದೆ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು,
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ
ವಿವರಣೆ ಪಡೆದುಕೊಂಡಿದ್ದಾರೆ. ಜೊತೆಗೆ ಬೆಂಬಲಕ್ಕೆ ಲಭ್ಯವಿರುವುದಾಗಿ ಹೇಳಿದ್ದರಿಂದ
ನೆಮ್ಮದಿ ಉಂಟಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಲಬುರಗಿಯಲ್ಲಿ ಪ್ರವಾಹಪೀಡಿತ ಗ್ರಾಮವೊಂದನ್ನು ಸ್ಥಳಾಂತರ ಮಾಡಲಾಗಿದ್ದು,
ಕಂದಾಯ ಮಂತ್ರಿಗಳು ಹಲವು ಕಡೆ ಭೇಟಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಅಗತ್ಯ
ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರವಾಹಪೀಡಿತ ಪ್ರದೇಶಗಳ ನಿರ್ವಹಣೆಗೊಸ್ಕರ 34 ಕೋಟಿ
ರೂ.ವನ್ನು ನೇರವಾಗಿ ನೆರೆ ಸಂತ್ರಸ್ತರ ಖಾತೆಗೆ ಹಾಕಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ
ಈಗಾಗಲೇ ಹಣ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಂಪ್ರದಾಯಕ್ಕಾಗಿ ಸರಳ ದಸರಾ ಆಚರಣೆ; ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ
ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಈ ಬಾರಿ ಕೊರೋನಾ ಮಹಾಮಾರಿ
ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಬೇಕಾದ ಅನಿವಾರ್ಯತೆ
ಬಂದಿದೆ. ಆ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಎಸ್ ಟಿ
ಎಸ್ ತಿಳಿಸಿದರು.
ರಾಜಪ್ರಭುತ್ವದ ನಂತರ ಈ ಸಂಪ್ರದಾಯವನ್ನು ಕರ್ನಾಟಕ ಸರ್ಕಾರ ಆಚರಿಸಿಕೊಂಡು
ಬಂದಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದು. ಕೊರೋನಾ ಇದ್ದರೂ ದಸರಾ
ಮಹೋತ್ಸವದ ಸಂಪ್ರದಾಯ ಮತ್ತು ಪರಂಪರೆಯನ್ನು ನಿಲ್ಲಿಸಬಾರದು ಎಂಬ

ಉದ್ದೇಶದಿಂದ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿ ಚಾಮುಂಡಿಬೆಟ್ಟದಲ್ಲಿ
ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.
ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ನಡೆಯುವ ಈ ಬಾರಿಯ ದಸರಾ
ಕಾರ್ಯಕ್ರಮವನ್ನು ವರ್ಚುವಲ್ ಆಗಿ ಪ್ರಸಾರ ಮಾಡಲಾಗುತ್ತಿದ್ದು, ಸಾರ್ವಜನಿಕರು ಟಿ.ವಿ
ಹಾಗೂ ಸೋಷಿಯಲ್ ಮೀಡಿಯಾ ಮೂಲಕ ನೇರಪ್ರಸಾರ ವೀಕ್ಷಿಸಲು ಕೋರುತ್ತಿದ್ದೇನೆ
ಎಂದು ಸೋಮಶೇಖರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇನ್ನು ಬಹುಮುಖ್ಯವಾಗಿ ಸಾರ್ವಜನಿಕರು ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಸರ್ ಬಳಸಿ
ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಹೊರಗಡೆ ಓಡಾಡದೆ ಮನೆಯಲ್ಲೇ
ಇದ್ದು ದಸರಾ ಆಚರಿಸಬೇಕು ಎಂದು ಸೋಮಶೇಖರ್ ಮನವಿ ಮಾಡಿದರು.
ನಿರ್ಬಂಧ ತೆರವು: ಕೆಆರ್ ಎಸ್, ಮೈಸೂರು ಮೃಗಾಲಯ, ಚಾಮುಂಡಿಬೆಟ್ಟ ಹಾಗೂ
ಅರಮನೆಗಳಿಗೆ ಪ್ರವಾಸಿಗರನ್ನು ದಸರಾ ಮುಗಿಯುವವರೆಗೆ ಪ್ರವೇಶ ನಿರ್ಬಂಧ ಹೇರಿರುವ
ಕ್ರಮವನ್ನು ಮುಖ್ಯಮಂತ್ರಿಗಳು ಹಿಂಪಡೆಯುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳು
ಶುಕ್ರವಾರ ಸಭೆ ನಡೆಸುವ ವೇಳೆ ಈ ಬಗ್ಗೆ ವಿವರಣೆ ಪಡೆದು, ಈ ಆದೇಶವನ್ನು
ಹೊರಡಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಮಾಸ್ಕ್ ಗಳನ್ನು
ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಎಲ್ಲರಿಗೂ ಪ್ರವೇಶವನ್ನು ನೀಡಲು
ಸೂಚನೆ ನೀಡಿದ್ದಾರೆಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಶಾಸಕರಾದ ಜಿ.ಟಿ.ದೇವೇಗೌಡ ಮಾತನಾಡಿ, ಮೈಸೂರು ದಸರಾಕ್ಕೆ ಅದರದ್ದೇ ವಿಶೇಷ
ಇತಿಹಾದವಿದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರೂ ಸಹ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು
ಶ್ರಮವಹಿಸುತ್ತಿದ್ದಾರೆ. ಇನ್ನು ಕೊರೋನಾ ಸಂದರ್ಭದಲ್ಲಿ ವಾರಿಯರ್ಸ್ ಗಳಾಗಿ
ಕಾರ್ಯನಿರ್ವಹಿಸಿದ ರಾಜ್ಯದ 42,608 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರದಂತೆ
12.75 ಕೋಟಿ ರೂಪಾಯಿಯನ್ನು ಸಹಕಾರ ಇಲಾಖೆಯಿಂದ ಕೊಟ್ಟಿದ್ದಾರೆ. ಅಲ್ಲದೆ,
ರೈತರಿಗೂ ಸಾಲ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಾರೆ
ಎಂದು ತಿಳಿಸಿದರು.
ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ; ಬಳಿಕ ಕೊರೋನಾ ವಾರಿಯರ್ಸ್ ಗಳಾದ
ಮೈಸೂರಿನ ಪೌರ ಕಾರ್ಮಿಕರಾದ ಮರಗಮ್ಮ, ವೈದ್ಯಕೀಯ ಅಧಿಕಾರಿ ಡಾ. ನವೀನ್
ಕುಮಾರ್, ಸ್ಟಾಫ್ ನರ್ಸ್ ರುಕ್ಮಿಣಿ, ಆಶಾ ಕಾರ್ಯಕರ್ತೆಯಾದ ನೂರ್ ಜಾನ್, ಪೊಲೀಸ್
ಕಾನ್ಸ್ ಟೇಬಲ್ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತರಾದ ಆಯೂಬ್ ಅಹಮದ್
ಅವರನ್ನು ಆಯಾ ಕ್ಷೇತ್ರದ ಪ್ರತಿನಿಧಿಗಳನ್ನಾಗಿ ಸನ್ಮಾನಿಸಲಾಯಿತು.

ಈ ಸಂಭ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಹಕಾರ ಹಾಗೂ ಮೈಸೂರು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕೃಷಿ ಸಚಿ ಬಿ.ಸಿ.ಪಾಟೀಲ್,
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್,
ನಾಗೇಂದ್ರ, ಹರ್ಷವರ್ಧನ್, ಮಹೇಶ್, ನಿರಂಜನ್, ವಿಧಾನಪರಿಷತ್ ಸದಸ್ಯರಾದ ವಿಶ್ವನಾಥ್
ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

,

Leave a Reply

Your email address will not be published. Required fields are marked *