ಕೋಲ್ಕತ್ತಾ: ಜನೆವರಿ 23 (ಉದಯಕಾಲ) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ ಬ್ಯಾರಕ್ಪೋರ್ನಲ್ಲಿ ನೇತಾಜಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ ನಡೆದಿದೆ.
ಪಶ್ಚಿಮ ಬಂಗಾಳದ ಬ್ಯಾರಕ್ಪೋರ್ನಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿತು ಎಂದರೆ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ನೇತಾಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಎರಡೂ ಕಡೆಯವರು ಸೇರಿದ್ದಾಗ ವಿವಾದ ಹುಟ್ಟಿಕೊಂಡಿತು. ಅರ್ಜುನ್ ಸಿಂಗ್ ಸ್ಥಳಕ್ಕಾಗಮಿಸುತ್ತಿದ್ದಂತೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡಿತು. ಅರ್ಜುನ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಾದ ನಂತರ ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಅರ್ಜುನ್ ಸಿಂಗ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ಪೊಲೀಸರು ಕೂಡ ಸ್ಥಳದಲ್ಲಿಯೇ ಇದ್ದರು.
ಪೊಲೀಸರಿಂದ ಲಾಠಿಚಾರ್ಜ್
ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು. ಅರ್ಜುನ್ ಸಿಂಗ್ ಅವರ ಕಾರನ್ನು ಕೂಡ ಧ್ವಂಸಗೊಳಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ 7 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ
ಟಿಎಂಸಿ ಜನರ ಮೇಲೆ ಹಲ್ಲೆ: ಬಿಜೆಪಿ ಸಂಸದ
“ಇಂದು ಬೆಳಗ್ಗೆ 10:30ಕ್ಕೆ ನೇತಾಜಿಯವರಿಗೆ ನಮನ ಸಲ್ಲಿಸಲು ನಮ್ಮ ಶಾಸಕ ಪವನ್ ಸಿಂಗ್ ತೆರಳಿದ್ದರು. ಟಿಎಂಸಿ ಗೂಂಡಾಗಳು ಅವರ ಮೇಲೆ ದಾಳಿ ನಡೆಸಿ, ಗುಂಡು ಹಾರಿಸಿ ಇಟ್ಟಿಗೆ ಎಸೆದಿದ್ದಾರೆ. ನಾನು ಬಂದ ಮೇಲೆ ಅವರು ನನ್ನ ಮೇಲೆಯೂ ಹಲ್ಲೆ ನಡೆಸಿದರು ಎಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೇಳಿದ್ದಾರೆ. . ಪೋಲೀಸರ ಮುಂದೆಯೇ ಎಲ್ಲವೂ ನಡೆಯುತ್ತಿತ್ತು…ನನ್ನ ಕಾರನ್ನು ಸಹ ಒಡೆದು ಹಾಕಲಾಯಿತು ಎಂದರು.”
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ಬಡಿದಾಟ, ಆರೋಪ-ಪ್ರತ್ಯಾರೋಪ, ಹಿಂಸಾಚಾರ ಸಾಮಾನ್ಯವಾಗಿಬಿಟ್ಟಿದೆ. ಇಂದು ಬ್ಯಾರಕ್ಪೋರ್ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ಇದು ಮುಂದುವರಿದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.