ನವದೆಹಲಿ: ಡಿ,21 (ಉದಯಕಾಲ ) ಲಖಿಂಪುರ ಖೇರಿ ಪ್ರಕರಣದಲ್ಲಿ ರಾಜ್ಯ ಗೃಹ ಸಚಿವ ಅಜಯ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಪಿಎಂ ಮಂತ್ರಿ ಕೆ ಬಾರೆ ಮೇ ಕುಚ್ ನಹೀಂ ಕರ್ತೇ ಹೈಂ. ನಾ ಮೀಡಿಯಾ ಕಾಮ್ ಕರ್ ರಹೀ ಹೈ, ನಾ ಸರ್ಕಾರ್. ಸಚಿವ ಅಜಯ್ ಮಿಶ್ರಾ ವಿರುದ್ಧ ಪ್ರಧಾನಿ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಮಾಧ್ಯಮವೂ ತನ್ನ ಕೆಲಸವನ್ನು ಮಾಡುತ್ತಿಲ್ಲ, ಪ್ರಧಾನ ಮಂತ್ರಿಯೂ ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಾವು ಈ ವಿಷಯದ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲ. ದೇಶದ ಜನರ ವಿರುದ್ಧದ ಸರ್ಕಾರದ ಕೃತ್ಯಗಳನ್ನು ನಾವು ಸಹಿಸುವುದಿಲ್ಲ. ನಾವು ಅವರನ್ನು ಬಿಡುವುದಿಲ್ಲ. ಇಂದು ಅಥವಾ ನಾಳೆ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ರಾಹುಲ್ ಗಾಂಧಿ ಎಂಒಎಸ್ಗೆ ಎಚ್ಚರಿಕೆ ನೀಡಿದರು.
ಸಚಿವರ ಪುತ್ರ ರೈತರನ್ನು ಕೊಂದಿದ್ದಾರೆ. ಎಸ್‌ಐಟಿ ವರದಿ ಇದನ್ನು ಪಿತೂರಿ ಎಂದು ಹೇಳಿದೆ. ಪ್ರಧಾನಿ ಇದರ ಬಗ್ಗೆ ಏನನ್ನೂ ಮಾಡುತ್ತಿಲ್ಲ. ನೀವು (ಪ್ರಧಾನಿ) ರೈತರ ಬಳಿ ಕ್ಷಮೆಯಾಚಿಸಿ, ಆದರೆ ಸಚಿವರನ್ನು ತೆಗೆದುಹಾಕುತ್ತಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಮಂಗಳವಾರ ಸಂಸತ್ತಿನ ಗಾಂಧಿ ಪ್ರತಿಮೆಯಿಂದ ವಿಜಯ್ ಚೌಕ್‌ಗೆ ಮೆರವಣಿಗೆ ನಡೆಸಿದರು. ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯನ್ನು ಯೋಜಿಸಲಾಗಿದೆ ಎಂದು ಎಸ್‌ಐಟಿ ವರದಿ ಹೇಳಿದಾಗಿನಿಂದ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಮಿಶ್ರಾ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ರಾಹುಲ್ ಗಾಂಧಿ ಗೃಹ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು “ಅಪರಾಧಿ” ಎಂದು ಕರೆದಿದ್ದಾರೆ. ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಲಖಿಂಪುರ ಖೇರಿ ಪ್ರಕರಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಉಭಯ ಸದನಗಳನ್ನು ಹಲವು ಬಾರಿ ಮುಂದೂಡಲಾಗಿದೆ.