ಸಿಎಂ ಬೊಮ್ಮಾಯಿ ಮೊದಲ ಬಜೆಟ್ ; ನಿರೀಕ್ಷೆ ಮಹಾಪೂರ 2.60 ಲಕ್ಷ ಕೋಟಿ ರೂ. ಗಾತ್ರ ಮೀರುವ ಸಾಧ್ಯತೆ

ಬೆಂಗಳೂರು: ಮಾರ್ಚ್‌ ೦೩ (ಯು.ಎನ್.‌ಐ.) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಚೊಚ್ಚಲ ಬಜೆಟ್ ಮಂಡಿಸಲಿದ್ದು 2022-23 ನೇ ಸಾಲಿನ ಬಜೆಟ್ ಗಾತ್ರ 2.60 ಲಕ್ಷ ಕೋಟಿ ರೂ. ಮೀರುವ ಅಂದಾಜಿದ್ದು, ಸಾಲದ ಹೊರೆಯೂ ಹೆಚ್ಚಳವಾಗಲಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಕೆಲವೊಂದು ಜನಪ್ರಿಯ ಯೋಜನೆಗಳ ಘೋಷಣೆಯ ನಿರೀಕ್ಷೆಯಿದೆ. ಸತತ ಮೂರು ವರ್ಷಗಳ ಕೊರೊನಾ ಸಂಕಷ್ಟದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಆದರೆ, ಚುನಾವಣೆಗೆ ಒಂದೇ ವರ್ಷ ಇರುವುದರಿಂದ ಮುಖ್ಯಮಂತ್ರಿಯವರು ಆದಷ್ಟೂ ತೆರಿಗೆ ಹೊರೆ ಇಲ್ಲದ ಬಜೆಟ್ ಮಂಡನೆ ಕಸರತ್ತಿನಲ್ಲಿ ತೊಡಗಿದ್ದಾರಾದರೂ ಸಂಪನ್ಮೂಲ ಕ್ರೂಢೀಕರಣ ಸವಾಲಾಗಿ ಪರಿಣಮಿಸಿದೆ. ಆದರೂ ತಮ್ಮದೇ ಆದ ಕೆಲವೊಂದು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಜನಪ್ರಿಯ ಯೋಜನೆ ಘೋಷಣೆ ?
ರಾಜ್ಯಪಾಲರ ಭಾಷಣದಲ್ಲಿ ಘೋಷಿಸಿದಂತೆ ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ, ವಿದೇಶದಲ್ಲಿರುವ ಭಾರತೀಯರ ಜ್ಞಾನವನ್ನು ಸ್ವದೇಶದಲ್ಲಿ ಬಳಸಿಕೊಳ್ಳಲು ‘ಮರಳಿ ತಾಯ್ನಾಡಿಗೆ’ ಯೋಜನೆ ಅನುಷ್ಟಾನ, ಮುಂಬೈ -ಬೆಂಗಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್‌ಗಳಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆ, ಮೇಕೆದಾಟು, ಮಹದಾಯಿ ಹಾಗೂ ಕೃಷ್ಣಾ 3 ನೇ ಹಂತದ ಯೋಜನೆಗಳಿಗೆ ಹೆಚ್ಚಿನ ಅನುದಾನ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಒತ್ತು ನೀಡಲು ಕರಾವಳಿ ಭಾಗದಲ್ಲಿ ಬೀಚ್ ಟೂರಿಸಂ ಕ್ಲಸ್ಟರ್, ಹೆರಿಟೇಜ್ ಟೂರಿಸಂ ಹಾಗೂ ಫೋರ್ಟ್ ಟೂರಿಸಂ ಕ್ಲಷ್ಟರ್ ನಿರ್ಮಾಣ, ಕೆಎಂ ಎಫ್ ಮಾದರಿಯಲ್ಲಿ ಗೋವಿನ ಇತರ ಉತ್ಪನ್ನಗಳ ಮಾರಾಟಕ್ಕೆ ಮಹಾಮಂಡಳ, ಗೋಶಾಲೆಗಳ ನಿರ್ಮಾಣಕ್ಕೆ ಅನುದಾನವನ್ನು ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.
ಉತ್ತರ ಕರ್ನಾಟಕಕ್ಕೆ ಒತ್ತು ;
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅತ್ಯಂತ ಹಿಂದುಳಿದಿರುವ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಕೆಲವು ವಿಶೇಷ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಕೋಟೆಗಳ ಅಭಿವೃದ್ಧಿ ಮತ್ತು ಪ್ರವಾಸಕ್ಕೆ ಕೋರ್ಟ್ ಟೂರಿಸಂ ಕ್ಲಸ್ಟರ್, ಉತ್ತರ ಕನ್ನಡದಲ್ಲಿ ವಾಟರ್ ಫಾಲ್ಸ್ ಟೂರಿಸಂಗೆ ವಿಶೇಷ ಕ್ಲಸ್ಟರ್ ನಿರ್ಮಾಣ, ಆಂಜನೇಯನ.ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ಅಂಜನಾದ್ರಿ ತೀರ್ಥ ಕ್ಷೇತ್ರ ಎಂದು ಘೋಷಣೆ, ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ, ಹುಬ್ಬಳ್ಳಿಗೆ ಜಯದೇವ ಆಸ್ಪತ್ರೆ ಘಟಕ, ಬೆಳಗಾವಿಗೆ ಕಿದ್ವಾಯಿ ಕ್ಯಾನ್ಸರ್ ಕೇಂದ್ರ ಸ್ಥಾಪನೆ, ಶಿಶುನಾಳ ಶರೀಫರ ಊರನ್ನು ಭ್ಯಾವೈಕ್ಯತಾ ಕೇಂದ್ರವೆಂದು ಅಭಿವೃದ್ಧಿ ಮಾಡುವ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಅದೇ ರೀತಿ, ಬೆಂಗಳೂರು ನಗರ ಅಭಿವೃದ್ಧಿ ಸಂಬಂಧ ಈಗಾಗಲೇ ಘೋಷಿಸಿರುವ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪಿಸುವ ನಿರೀಕ್ಷೆ ಇದೆ. ಕೈಗಾರಿಕೆ, ಪ್ರವಾಸೋದ್ಯಮ ವಲಯದ ಬೇಡಿಕೆಗಳೂ ಹೆಚ್ಚಾಗಿವೆ. ಶಿಕ್ಷಣ, ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ, ಇಂಧನ, ಕೃಷಿ, ತೋಟಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ ಇಲಾಖೆಗಳಿಂದ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಬಂದಿದೆ. ಕಳೆದ ಎರಡು ವರ್ಷದ ಬಜೆಟ್ ಮೊತ್ತದಲ್ಲಿ ಬಹುತೇಕ ಕೊರೊನಾ ಹಿನ್ನೆಲೆಯಲ್ಲಿ ಮೂಲಸೌಕರ್ಯಕ್ಕೆ ಬಳಸಲಾಗಿದೆ. ಬೇರೆ ಇಲಾಖೆಗಳ ಅನುದಾನ ಕಡಿತಮಾಡಿ ಕೊರೊನಾ ಬಾಬ್ತಿನಲ್ಲಿ ವೆಚ್ಚ ಮಾಡಲಾಗಿದೆ. ಹೀಗಾಗಿ, ಈ ವರ್ಷ ಪ್ರಮುಖ ಇಲಾಖೆಗಳು ಕಡಿತಗೊಂಡ ಅನುದಾನ ಸೇರಿಸಿ ಹೊಸದಾಗಿ ಹೆಚ್ಚುವರಿ ಅನುದಾನಕ್ಕೂ ಬೇಡಿಕೆ ಇಟ್ಟಿಿವೆ ಎಂದು ಹೇಳಲಾಗಿದ್ದು ಆದಷ್ಟೂ ಸ್ಪಂದಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ ಲಾಕ್‌ಡೌನ್ ಹಾಗೂ ಪ್ರವಾಹದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿತ್ತಾದರೂ ಕಳೆದ ಮೂರ್ನಾಲ್ಕು ತಿಂಗಳಿನಿಂದ ಚೇತರಿಕೆಯಾಗುತ್ತಿದೆ. ಇದರ ನಡುವೆ ಜಿಎಸ್‌ಟಿ ಪರಿಹಾರ 2022ಕ್ಕೆ ಮುಕ್ತಾಯವಾಗುವ ಆತಂಕವೂ ಇದ್ದು ಸ್ವಂತ ತೆರಿಗೆ ಮೂಲಗಳಿಂದಲೇ ಹೆಚ್ಚು ಸಂಪನ್ಮೂಲ ಕ್ರೂಢೀಕರಣದ ಅನಿವಾರ್ಯತೆ ಎದುರಾಗಿದೆ.
ಚುನಾವಣೆ ವರ್ಷ ಆದ ಕಾರಣ ಆಡಳಿತಾರೂಢ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ದೊಡ್ಡ ಮೊತ್ತದ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕೊಟ್ಟರೆ ಪ್ರತಿಪಕ್ಷ ಶಾಸಕರೂ ಒತ್ತಡ ಹೇರಬಹುದು. ಆದರೆ, ಸಂಪನ್ಮೂಲದ ಲಭ್ಯತೆಯ ಮೇಲೆ ಜನರಿಗೆ ಹೊರೆಯಾಗದ, ಕೊರತೆಯಲ್ಲದ ಸಮತೋಲನ ಬಜೆಟ್ ಮಂಡಿಸುವ ನಿರೀಕ್ಷೆ ಇದೆ.

ಹೆಚ್ಚುತ್ತಿದೆ ಸಾಲದ ಹೊರೆ:
ಬಜೆಟ್ ಗಾತ್ರ ಹೆಚ್ಚಾದಂತೆ ಸಾಲ ಪಡೆಯುವ ಪ್ರಮಾಣವೂ ಹೆಚ್ಚಾಗಲಿದೆ. ಪ್ರಸ್ತುತ ರಾಜ್ಯದ ಸಾಲ ಮಾರ್ಚ್ ಅಂತ್ಯಕ್ಕೆ 4,57,899 ಕೋಟಿ ರೂ. ಇದ್ದು, 2022-23 ನೇ ಸಾಲಿನಲ್ಲಿ 5 ಲಕ್ಷ ಕೋಟಿ ರೂ. ದಾಟಲಿದೆ. 2018-19 ರಲ್ಲಿ 2,92,220 ಕೋಟಿ ರೂ. ಇದ್ದ ಸಾಲ 2021-22 ನೇ ಸಾಲಿನಲ್ಲಿ 4,57,899 ಕೋಟಿ ರೂ.ಗೆ ತಲುಪಿದೆ. 2021-22 ನೇ ಸಾಲಿನಲ್ಲಿ 71,332 ಕೋಟಿ ರೂ. ಸಾಲ ಪಡೆಯಲಾಗಿದೆ. ಕೇಂದ್ರ ಸರ್ಕಾರ ಜಿಎಸ್ ಟಿ ಪರಿಹಾರವಾಗಿ ನೀಡಬೇಕಿರುವ ಹಣದ ಬದಲು ರಾಜ್ಯ ಸರ್ಕಾರಗಳಿಗೆ ಸಾಲ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ರಾಜ್ಯ ಸರ್ಕಾರ ಈ ವರ್ಷ ಇನ್ನಷ್ಟು ಹೆಚ್ಚಿನ ಸಾಲ ಪಡೆಯುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದ ಮೂಲಗಳ ಪ್ರಕಾರ ಸರ್ಕಾರ ಪ್ರತಿ ತಿಂಗಳು 5000 ಕೋಟಿ ಸಾಲವನ್ನು ವಿವಿಧ ಮೂಲಗಳಿಂದ ಪಡೆದುಕೊಳ್ಳುತ್ತಿದೆ.

, ,

Leave a Reply

Your email address will not be published. Required fields are marked *