ಕುವೆಂಪು ಕಂಡ ಕಲಾಸುಂದರಿ

23.9.193 ರಲ್ಲಿ ರಚಿಸಿದ ‘ಕಲಾಸುಂದರಿ’ ಎಂಬ ಕವಿತೆಯಲ್ಲಿ ಕುವೆಂಪು ಅವರು ತಮ್ಮ ದೃಷ್ಟಿಯಲ್ಲಿ ‘ಕಾವ್ಯಾಂಗನೆ’ಯನ್ನು ಬಗೆ ಬಗೆಯ ವಿಷೇಷಣಗಳಿಂದ ವರ್ಣಿಸಿ ನಿರೂಪಿ ಸಿದ್ದಾರೆ. ಈ ವಿಶೇಷಣಾ ಮಾಲಿಕೆಯನ್ನು ಒಳಹೊಕ್ಕು ಅರಿತುಕೊಂಡರೆ, ಕಾವ್ಯತತ್ವದ ವಸ್ತುನಿಷ್ಠ ಗತಿಶೀಲತೆಯು ಮನದಟ್ಟಾಗುತ್ತದೆ…

ಕಾಡು ಮತ್ತು ಪರ್ವತಗಳು ಎಲ್ಲಾ ನಾಗರಿಕತೆಗಳ ಜನನೀ ಜನ್ಮಭೂಮಿ. ಇಲ್ಲಿಂದ ಹುಟ್ಟಿ ಹರಿಯುವ ನದಿದಂಡೆಗಳ ಮೇಲೆ ಜಗತ್ತಿನ ಮೊಟ್ಟಮೊದಲ ನಾಗರಿಕತೆಗಳು ತಲೆ ಯೆತ್ತಿದವು. ಅಂದರೆ ‘ಭೂರಂಗದ ಮೇಲೆ ಕಾಣಿಸಿಕೊಳ್ಳುವ ಮಾನವರ ಜೀವನ ನಾಟಕಗಳಿಗೆಲ್ಲಾ ಕಾಡು ಮತ್ತು ಪರ್ವತಗಳೇ ನೇಪಥ್ಯವಾಗಿದೆ. ಇದನ್ನು ಚೆನ್ನಾಗಿ ಅರಿತಿದ್ದ ಕುವೆಂಪುರವರು ತಮ್ಮ ಮೊದಲ ಕವನ ಸಂಕಲನದ ಮೊದಲ ಕವಿತೆಯಲ್ಲಿ ಕಾಡಿನ ಕವಿಯು ನಾ ! ನಾಡಿನ ಜನರು ಇದನು ಒಲಿದು ಆಲಿಪುದು ಎಂದು ಭಿನ್ನವಿಸಿಕೊಂಡಿದ್ದಾರೆ.

ಡಾ.ಜಿ.ಎಸ್.ಶಿವರುದ್ರಪ್ಪನವರು ಕುವೆಂಪು ಸಮಗ್ರ ಸಾಹಿತ್ಯದ ಅನನ್ಯತೆ ನಿರೂಪಿಸುತ್ತಾ ಸಹಸ್ರಮಾನವನ್ನು ಮೀರಿದ ಕನ್ನಡಸಾಹಿತ್ಯ ಪರಂಪರೆಯಲ್ಲಿ ಕುವೆಂಪು ಮೊದಲ ನೆಯ ಕಾಡುಕವಿ ಎಂದು ಖಚಿತವಾಗಿ ಹೇಳಿದ್ದಾರೆ. ಪರ್ವತಾರಣ್ಯಗಳು ಮತ್ತು ಗಿರಿಜನರ ಸಂಸ್ಕೃತಿ ಈ ಪ್ರಮಾಣದಲ್ಲಿ ಹಿಂದೆಂದೂ ಕನ್ನಡ ಸಾಹಿತ್ಯದಲ್ಲಿ ಮೂಡಿಬಂದಿಲ್ಲ. ಈ ಕಾರಣದಿಂದಲೇ ಕುವೆಂಪು ಅವರು ಕಲಾ ಸುಂದರಿಯನ್ನು ‘ಅರಣ್ಯರಮಣಿ’ ಎಂದು ಪರಿಗಣಿಸಿದ್ದಾರೆ.

ಲಕ್ಷ್ಮೀದೇವತೆಗೆ ನೆಲೆವೀಡು ಕಮಲಪುಷ್ಪ. ತಾಯಿ ಸರಸ್ವತಿಗೆ ಕಾಡೇ ಬೀಡು. ವಾಗ್ದೇವಿಗೆ ಹಿನ್ನೆಲೆಯಾಗಿ ರವಿವರ್ಮನ ಚಿತ್ರಕಲೆಯಲ್ಲಿ ಕಾಡು ತೊರೆ ಬೆಟ್ಟ ಇರುವ ಸಂಗತಿ ಸುಪ್ರಸಿದ್ಧ. ಆದ್ದರಿಂದಲೇ ಕವಿರನ್ನ ಗದಾಯುದ್ಧ ಕಾವ್ಯದಲ್ಲಿ ‘ಕಾನನಸರಸ್ವತಿ’ಯನ್ನು ಕಾವ್ಯಾರಂಭದಲ್ಲಿ ಪ್ರಾರ್ಥಿಸಿದ್ದಾನೆ. ನಮ್ಮ ಮುಖನಯನಗಳಂತೆ ದೇಶನಯನಗಳೆನ್ನ ಬಹುದಾದ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳಲ್ಲಿ ಅರಣ್ಯಕಾಂಡ ಮತ್ತು ಅರಣ್ಯಪರ್ವಗಳಿವೆ. ರಾಮಾದಿಗಳು ಮತ್ತು ಪಾಂಡವಾದಿಗಳು ಘನಗಟ್ಟಿಯ ಚೇತನಗಳಾಗಿ ರೂಪುಗೊಂಡದ್ದು ಅರಣ್ಯ ಸನ್ನಿಧಿಯಲ್ಲೇ! ಮತೀಯ ದೃಷ್ಟಿಯ ಅಯೋಧ್ಯಾ ರಾಮನಿಗಿಂತಲೂ ವಾಲ್ಮೀಕಿ ಮತ್ತು ಕುವೆಂಪು ಕೈಗಳಲ್ಲಿ ಅರಳಿದ ‘ಗಿರಿವನ ಪ್ರಿಯರಾಮ’ ನಮಗೆ ಅತ್ಯಂತ ಪ್ರಸ್ತುತ. ಕಲೆ ಕಾವ್ಯ ವಿಜ್ಞಾನಾದಿಗಳ ನಿರಂತರ ಸ್ಫೂರ್ತಿಯಾಗಿರುವ ಅರಣ್ಯ ಕೋಶಾವಸ್ಥೆಯನ್ನು ಮನನ ಮಾಡಿದರೆ ಕಲಾಸುಂದರಿಯನ್ನು ಚಿರವನವಾಸಿನಿ’ ‘ಕಾನನಕೋಮಲೆ’ ಎಂದು ಕುವೆಂಪು ಕರೆದ ಔಚಿತ್ಯವು ಅರ್ಥವಾಗುತ್ತದೆ.

ಕುವೆಂಪುರವರ ಸಮಗ್ರ ಸಾಹಿತ್ಯದಲ್ಲಿ ಪರ್ವತಾರಣ್ಯಗಳ ಜೀವನಾಡಿಯ ಮಿಡಿತವನ್ನು ಆಲಿಸಬಹುದು. – ಮಲೆಯನಾಡೆನಗೆ ತಾಯಿಮನೆ; ಕಾಡು ದೇವರಬೀಡು; ಬನವೆಣ್ಣೇ ಮೊದಲಿನಾ ಮನದನ್ನೆ ; ಗಿರಿಯಮುಡಿ ಶಿವನಗುಡಿ….- ಕಾಡು: ಭೀರುಗೆ ಭಯಂಕರಂ; ರಸಿಕಗೆ ಕಲಾಶಂಕರಂ….- ಅನ್ನಮಯದಾಚೆಯಲಿ ಪ್ರಾಣಮಯ ದೀಚೆಯಲಿ, ಎನಗಿರುವುದೊಂದಲ್ತೆ ಆರಣ್ಯಮಯಕೋಶಂ ಪರ್ವತಾರಣ್ಯಗಳಿಂದ ಹರಿದು ಬರುವ ನದಿಯ ದಂಡೆಗಳೇ ಮಾನವ ಜೀವನದ ಮೊದಲ ತೊಟ್ಟಿಲು.

ಸಕಲ ಸಂಸ್ಕೃತಿ ಮತ್ತು ನಾಗರಿಕತೆಗಳ ಸಾರಸರ್ವಸ್ವಗಳೇ ಬೆಟ್ಟಗುಡ್ಡ ಕಾಡುಮೇಡುಗಳೆಂದು ಅರಿತುಕೊಳ್ಳಬೇಕಾದ ಕಾಲವಿದು. ‘ಸರ್ವರಸ ಪ್ರದಾಯಕಿ’ ಎಂಬ ನುಡಿಯು ಕಾಡಿನ ಸಮರ್ಪಕ ವ್ಯಾಖ್ಯಾನವೆನ್ನಬಹುದು. ಆದರೆ ಆಧುನಿಕ ಮನುಷ್ಯರಿಗೆ ಕಾಡಿನ ಮಹತ್ವ ತಿಳಿಯದು. ನಿಸರ್ಗವನ್ನು ಆರ್ಥಿಕ ಸಂಪನ್ಮೂಲವೆಂದು ತಿಳಿದು ಲೂಟಿ ಮಾಡುವ ಆಧುನಿಕ ಮನುಷ್ಯ ಮತ್ತು ನಾಗರಿಕತೆಗಳಿಗೆ ಅರಣ್ಯಕಾಂಡ ಮತ್ತು ಅರಣ್ಯಪರ್ವಗಳೇ ಇಲ್ಲವಾಗಿದೆ. ಈ ಕೊರತೆಯನ್ನು ಕುವೆಂಪು ತಮ್ಮ ಸಾಹಿತ್ಯದ ಮೂಲಕ ತುಂಬಿಕೊಟ್ಟು ಯಾವುದೇ ದೇಶ ತನ್ನ ನಿಸರ್ಗ ಸಂಪತ್ತನ್ನು ಯಾಕೆ ಕಾಪಾಡಿಕೊಳ್ಳಬೇಕೆಂಬುದನ್ನು ಹೃದಯಕ್ಕೆ ನಾಟುವಂತೆ ನಿರೂಪಿಸಿದ್ದಾರೆ. ಇಂದು ಕುವೆಂಪು ಹೆಸರಿನಲ್ಲಿ ಕುಪ್ಪಳಿ ಸುತ್ತ ಮುತ್ತಲಿನ ಕಾಡನ್ನು ‘ಕುವೆಂಪು ಜೈವಿಕ ಅರಣ್ಯವೆಂದು ಘೋಷಿಸಿ ಸಂರಕ್ಷಣೆ ಮಾಡಿರುವುದು ನಿಸರ್ಗಕ್ಕೆ ಮತ್ತು ಕವಿಚೇತನಕ್ಕೆ ಸಲ್ಲಿಸಿದ ನಮನ ಎಂದು ಹೇಳಬಹುದು.

‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಶ್ರೀರಾಮ ಮತ್ತು ವಿಶ್ವಾಮಿತ್ರ ಸಂವಾದವಿದೆ. ಆ ಕಾಲದ ಮಹಾನಗರ ಅಯೋಧ್ಯೆಯ ಅರಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬೆಳೆದು, ನಿಸರ್ಗ ಸನ್ನಿಧಿಯಿಂದ ದೂರ ಸಿಡಿದ ಚೇತನಗಳಾಗಿದ್ದ ರಾಮ ಲಕ್ಷ್ಮಣರು ವಿಶ್ವಾಮಿತ್ರನ ದೆಸೆಯಿಂದ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಕಾಡನ್ನು ನೋಡು ತ್ತಾರೆ. ಕಾಡಿನ ನಿಸರ್ಗ ಶಯ್ಯೆಯಲ್ಲಿ ಕಳೆದ ರಾತ್ರಿ, ಚಂದ್ರೋದಯ, ನಕ್ಷತ್ರ ಖಚಿತ ಆಕಾಶ, ಸೂರ್ಯೋದಯ, ಹಕ್ಕಿಗಳ ಗಿಲಗಚ್ಚಿ, ದೇವರು ಮಾಡಿದ ರುಜುವಿನಂತೆ ಕಾಣುವ ಹಾರಾಡುವ ಹಕ್ಕಿ ಸಾಲು …. ಇವೆಲ್ಲಾ ರಾಮನ ಮನಸ್ಸಿನ ಮೇಲೆ ತೀವ್ರವಾದ ಪ್ರಭಾವ ಬೀರುತ್ತವೆ. ಇದೇ ಗುಂಗಿನಲ್ಲಿದ್ದ ರಾಮನು ವಿಶ್ವಾಮಿತ್ರನನ್ನು ಕುರಿತು..

ರಾಮ : ಗುರುದೇವ! ನಿಮ್ಮ ಕರುಣೆಯಿಂ ಎಮಗೆ ಲಭಿಸಿತೀ ವನ್ಯಸುಖಂ! ದಾರಿದ್ರ್ಯಂ ಅಲ್ತೆ ಆ ನಾಗರಿಕಜೀವನಂ, ಈ ವನ್ಯ ಸಂಸ್ಕೃತಿಯ ಮುಂದೆ ?
ವಿಶ್ವಾಮಿತ್ರ: ದಿಟವೊರೆದೆ ಹೇ ವತ್ಸ! ಗಿರಿವನ ಪ್ರೀತಿ ತಾಂ ದೈವಕೃಪೆ ದಲ್! ಜಗದೀಶ್ವರನ ಮಹಿಮೆ ಸಂವೇದ್ಯವಹುದಿಲ್ಲಿ ; ಭವ್ಯ ಸೌಂದರ್ಯಶೀಲದ ವನ್ಯಶಾಂತಿಯಲಿ! ಉಪನಿಷತ್ತಿನ ಮಹಾ ಮಂತ್ರಾನುಭವಗಳುಂ ಹೃದ್ಗಮ್ಯವಿಲ್ಲಿ! ಸೃಷ್ಟಿ ಸೌಂದರ್ಯದ ಒಲ್ಮೆಯೆ ಸೃಷ್ಟಿಕರ್ತಂಗೆ ಪೂಜೆಯಯ್!

ಈ ಸಂವಾದದ ಮೂಲಕ ಕುವೆಂಪು ಅರಣ್ಯರಮಣಿಯ ಮಹತ್ವವನ್ನು ತಿಳಿಸುವುದರ ಜೊತೆಗೆ ಆಧುನಿಕ ಮನುಷ್ಯರಿಗೆ ಅಗತ್ಯವಾದ ಆದಿಮತೆಯ ಸತ್ವವನ್ನು ನಿರೂಪಿಸಿದ್ದಾರೆ. ಶೃಂಖಲೆ ಎಂದರೆ ಸಂಕೋಲೆ; ಬೇಡಿ ಎಂದರ್ಥ. ಕೈಗಳಿಗೆ ಬೇಡಿ ಹಾಕಿ ಜೈಲಿಗೆ ತಳ್ಳುವುದುಂಟು. ಅಪರಾಧಿಗಳಿಗೆ, ಯುದ್ಧಖೈದಿಗಳಿಗೆ ಮಾತ್ರವಲ್ಲ! ರಾಜಕೀಯ ಕಾರಣಗಳಿ ಗಾಗಿಯೂ ವಿರೋಧಿಗಳನ್ನು ಸೆರೆಮನೆಗೆ ನೂಕುತ್ತಾರೆ. ಕಾವ್ಯಾದಿ ಕಲೆಗಳು ಸದಾ ವಿರೋಧಪಕ್ಷವೇ ! ಕುವೆಂಪು ರಚಿಸಿದ ಕನ್ನಡ ಸಂಸ್ಕೃತಿಯ ನಿತ್ಯಸಚಿವ ಸಂಪುಟವನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಪಟ್ಟಭದ್ರ ಶಕ್ತಿಗಳಿಗೆ ತಲೆಬಾಗದೆ ಸ್ವಯಂ ಸರ್ಕಾರದ ಶಿಸ್ತಿನಿಂದ ಜನತೆಯ ಹಿತಕ್ಕೆ ಸದಾ ಬದ್ಧವಾಗಿರುವ ನಿರಂಕುಶಮತಿಯ ಆತ್ಮಶ್ರೀಯನ್ನು ಹೊಂದಿರುವ ಕಲಾಸುಂದರಿ ಅನವರತ (ಎಂದೆಂದಿಗೂ) ಅಶೃಂಖಲೆ (ಸರಪಳಿಯಿಲ್ಲದವಳು). ‘ಸರಪಳಿ’ ಎಂದರೆ ಲೋಹಸರಪಳಿ ಎಂದೇ ತಿಳಿಯಬಾರದು. ಜಾತಿ, ಮತ ಧರ್ಮ, ದೇಶ, ಭಾಷೆ, ಕಾಲ ಇತ್ಯಾದಿಗಳೆಲ್ಲವೂ ಸರಪಳಿಗಳೇ! ಕವಿ ಕಲಾವಿದರು ವಿಶ್ವ ಮಾನವರು.

ನಿಸ್ಸೀಮೆಯ ಬಾನಾಡಿಗಳು. ಪರಾಧೀನ ಕಲೆಗೂ ಗುಲಾಮಗಿರಿಗೂ ವ್ಯತ್ಯಾಸವಿಲ್ಲ. ಕಲಾಸುಂದರಿಯ ಸ್ವಾತಂತ್ರ್ಯದಾಹ ಅಪರಿಮಿತವಾದುದು. ಆದಿಕವಿ ಪಂಪನು ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್ ಎಂದು ಬಯಸಿರುವುದು ಧ್ವನಿ ಪೂರ್ಣ! ಕಡ್ಡಿಜೇನಿನ ಮರಿದುಂಬಿಗಳನ್ನು ಮತ್ತು ಕೋಗಿಲೆಗಳನ್ನು ಯಾರೂ ಸಾಕುವುದಿಲ್ಲ!

ಮನುಷ್ಯ ತನ್ನ ಸ್ವಾಧೀನ ಮಾಡಿಕೊಳ್ಳಲು ಸಾಧ್ಯವಿಲ್ಲದ ಇವೆರಡನ್ನು, ಮರುಹುಟ್ಟು ಪಡೆಯಲು ಪಂಪನು ಆಯ್ಕೆ ಮಾಡಿಕೊಂಡು ಜೀವದ ವಿಶೃಂಖಲತೆ ಬಿಂಬಿಸಿದ್ದಾನೆ. ಈ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಯೂ ಬಂಧನ ವಿರೋಧಿಯೇ! ಒಂದು ಕೀಟವನ್ನು ಬೆಂಕಿ ಪೆಟ್ಟಿಗೆಯಲ್ಲಿ ಬಂಧಿಸಿದರೆ ಅದು ಹೊರಬರಲು ಸರ್ವಸಾಹಸ ಮಾಡುತ್ತದೆ. ವಸಾ ಹತುಶಾಹಿ ನವೋದಯ ಕಾಲದಲ್ಲಿ ಕುವೆಂಪುರವರು ‘ಕಾಜಾಣ’ವನ್ನು ತಮ್ಮ ಸಾಹಿತ್ಯದ ಲಾಂಛನ ಮಾಡಿಕೊಂಡು ಯಾರಿಗೂ ತಲೆಬಾಗದ ಪನ್ನತಿಕೆಯನ್ನು ಮೆರೆದಿದ್ದಾರೆ. ಕಾಜಾಣಗಳ ನಿರ್ಭೀತಿ ವನ್ಯಸತ್ಯ! ಹಿಂಸ್ರ ಪಕ್ಷಿಗಳನ್ನು ಅಟ್ಟಿಸಿಕೊಂಡು ಓಡಿಸಬಲ್ಲ ಕಾಜಾಣಗಳು ಇರುವ ಕಡೆಯೇ ಕೆಲವು ಸಾಧುಪಕ್ಷಿಗಳು ಗೂಡು ಕಟ್ಟಿಕೊಂಡು ವಾಸ ಮಾಡುತ್ತವೆ. ಸಂರಕ್ಷಣೆ ಮತ್ತು ಸಂಗೋಪನೆಯ ಭಾವದ ಕಾಜಾಣ ಕುವೆಂಪು ಸಮಗ್ರ ಸಾಹಿತ್ಯದ ಸಮರ್ಥ ಪ್ರತೀಕವಾಗಿದೆ.

‘ಬಂಧನಮೋಹಿನಿ’ ಎಂಬ ನುಡಿಯೂ ಗಮನಾರ್ಹ! ಅಧಿಕಾರವನ್ನು ಎದುರು ಹಾಕಿಕೊಂಡ ಮೇಲೆ ಬಂಧನ ಮೋಹಿನಿ ಆಗುವುದು ಅನಿವಾರ್ಯ! ವರ್ಣಬೇಧ ನೀತಿಯನ್ನು ಪಾಲಿಸುವ ಸರ್ಕಾರಕ್ಕೆ ತೆರಿಗೆ ಕಟ್ಟುವುದಿಲ್ಲವೆಂದು ಹೇಳಿ ಜೈಲುವಾಸ ಅನುಭವಿಸಿದ ನಿಸರ್ಗದ ರಸಋಷಿ ಲೇಖಕ ಹೆನ್ರಿ ಡೇವಿಡ್ ತೋರೋ, ಎಡಪಂಥೀಯ ಎಂಬ ಕಾರಣಕ್ಕೆ ನಿಷೇಧಕ್ಕೊಳಗಾದ ಚಿಲಿ ದೇಶದ ‘ಸಮುದ್ರಕವಿ’ ಪಾಬ್ಲೋ ನೆರೂಡ, ವಿಯೆಟ್ನಾಂ ಭಾಗ್ಯವಿಧಾತ ಹೊ ಚಿ ಮಿನ್ ಅವರ ಪ್ರಿಸನ್ ಡೈರಿ, ಟರ್ಕಿಯ ಕವಿ ನಜೀಮ್ ಹಿಕ್ಮತ್ ಅವರ ‘ಸಿನ್ಸ್’ ಐ ವಾಸ್ ಜೈಲ್ಡ್ ಕವಿತೆ, ‘ನರಬಲಿ’ ಕವಿತೆ ರಚನೆಗಾಗಿ ಜೈಲುಕಂಡ ಕವಿಬೇಂದ್ರೆ, ತೆಲುಗಿನ ‘ದಿಗಂಬರ’ ಮತ್ತು ‘ವಿರಸಂ’ ಕವಿಗಳಲ್ಲಿ ಬಹುಮಂದಿ ಜೈಲುವಾಸ ಅನುಭವಿಸಿದರು ಮತ್ತು ಇವರ ಬಹಳಷ್ಟು ಕವನ ಸಂಕಲನಗಳು ನಿಷೇಧಗೊಂಡವು.

ಕನ್ನಡ ಸಾಹಿತ್ಯದ ಹರಿಹರ ರಾಘವಾಂಕ, ಆಂಧ್ರಸಾಹಿತ್ಯದ ಶ್ರೀನಾಥ ಸ ಪೋತನ ರಾಜಾಶ್ರಯ ಮತ್ತು ಸ್ವಾತಂತ್ರ್ಯದ ಘರ್ಷಣೆಗೆ ಹೆಸರಾದವರು. ಭಕ್ತಿಪಂಥಕ್ಕೆ ಸೇರಿದ ಸಂತಕವಿಗಳನೇಕರು ದೇವರ ಬಡಿಗೆಗಲ್ಲದೆ ಬಾಗಲರಿಯೆವು ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಆದ್ದರಿಂದಲೇ ‘ಕಲಾಸುಂದರಿ’ ಕಠೋರ ಕೋಮಲೆ! ಅರೂಪಸುಂದರಿ ಎಂಬ ನುಡಿ ಅರ್ಥವತ್ತಾಗಿದೆ. ರೂಪನೆ ಕಂಡರು, ನಿರೂಪನೆ ಕಾಣರು ಎಂದು ಅಲ್ಲಮನ ವಚನವಿದೆ. ಕುವೆಂಪು ಕಾವ್ಯಕಲೆಯನ್ನು ‘ಅರೂಪಸುಂದರಿ’ ಎಂದು ಕರೆದದ್ದು ಗಮನಾರ್ಹ! ಏಕೆಂದರೆ, ನವ್ಯಪಂಥದವರು ಚಾಲನೆಗೆ ತಂದ ‘ರೂಪನಿಷ್ಠವಿಮರ್ಶೆ’ಗೂ ಕುವೆಂಪು ಹೇಳಿದ ‘ಅರೂಪಸುಂದರಿ’ಗೂ ಇರುವ ವಿರುದ್ಧ ಭಾವವನ್ನು ಮನಗಂಡಲ್ಲಿ ಕಲಾತತ್ವ ವಿಚಾರದಲ್ಲಿ ಕುವೆಂಪು ಅವರಿಗೆ ಇದ್ದ ಮುಂಗಾಣ್ಕೆಯ ಖಚಿತ ದೃಷ್ಟಿಯು ಸುಸ್ಪಷ್ಟವಾಗುತ್ತದೆ.

– ಚಂದ್ರಶೇಖರ ನಂಗಲಿ, ಲೇಖಕರು

Leave a Reply

Your email address will not be published. Required fields are marked *