ಭಾಷೆಯಲ್ಲಿ ಶುದ್ಧತೆ ಅಶುದ್ಧತೆ ಎಂಬುದಿದೆಯೇ? -ಶಾಂತಕುಮಾರಿ ಅಂಕಣ

ಅಂಕಣ: ಸೂರಂಚಿನ ನೀರು -೧
ಭಾಷೆಯಲ್ಲಿ ಶುದ್ದತೆ ಅಶುದ್ದತೆ ಎಂಬುದಿಲ್ಲ. ಭಾಷೆ ಸಂವಹನ ಮಾದ್ಯಮ ಅಷ್ಟೆ. ತನಗನಿಸಿದ್ದನ್ನು ಬೇರೆಯವರಿಗೆ ತಲುಪಿಸುವ ಸಾಧನವೇ ನುಡಿ. ಮನುಷ್ಯನ ಭಾವಕೋಶ ತುಂಬಿದಾಗ ಎದೆಯಲ್ಲಿ ತಳಮಳ ಉಂಟಾದಾಗ ಹೊಟ್ಟೆಯಲ್ಲಿ ಸಂಕಟವಾದಾಗ ಕೋಪ ಬಂದಾಗ ಹೀಗೆ ಅನೇಕ ಸನ್ನಿವೇಶಗಳಲ್ಲಿ ಭಾವ ಹೊರಹೊಮ್ಮಲು ಮೊದಲು ಸನ್ನೆಯಾಗಿ ಇದ್ದದ್ದು ಕ್ರಮೇಣ ಭಾಷೆಯ ಉಗಮಕ್ಕೆ ಕಾರಣವಾಯಿತು. ಅದು ಅಕ್ಷರಲೋಕಕ್ಕೂ ಮೊದಲು ಭಾವಸೆಲೆಯಾಗಿ ಹೊಮ್ಮಿದ್ದು ಮುಂದೆ ಅಕ್ಷರಗಳ ಸೃಷ್ಟಿಯೊಡನೆ ಅದಕ್ಕೊಂದು ನಿಖರತೆಯನ್ನು ಕೊಡಲು ಸಾಧ್ಯವಾಯಿತು.

“ಆಡುನುಡಿ ಆಗ ತಾನೆ ಹುಟ್ಟಿದ ಶಿಶುವಿನಂತೆ ಮುಗ್ದ ಮನೋಹರ. ಅದಕ್ಕಾವುದೂ ತಿದ್ದಿತೀಡಿದ ರೂಪವಿಲ್ಲ. ಶಿಷ್ಟಭಾಷೆ ಎನ್ನುವುದು ಮಗುವನ್ನು ನೀನು ಹೆಣ್ಣು /ಗಂಡು ನಿನ್ನ ನಡೆನುಡಿ ಬಟ್ಟೆಬರೆ ಎಲ್ಲ ಹೀಗಿರಬೇಕು ಅಂತ ತಿದ್ದಿತೀಡಿದ ಮನುಷ್ಯರಂತೆ! ಶಿಷ್ಟ ಭಾಷೆ ಅಂದರೆ ಆಡುನುಡಿಗೆ ವ್ಯಾಕರಣದ ಉಡುಗೆತೊಡಿಗೆ ತೊಡಿಸಿದಂತೆ. ಮಗುವಿಲ್ಲದೆ ಮನುಷ್ಯನಿಲ್ಲ. ಹಾಗಾಗಿ ಆಡುನುಡಿ ಇಲ್ಲದೆ ಶಿಷ್ಟಭಾಷೆ ಇಲ್ಲ.”

ಕನ್ನಡ ಭಾಷೆಯ ವೈವಿಧ್ಯತೆ ಅಪಾರ. ಪ್ರತಿ ಹನ್ನೆರಡು ಕಿ.ಮಿ.ಗೆ ಭಾಷೆಯ ಸೊಗಡು ಬದಲಾಗತ್ತೆ ಎನ್ನುತ್ತಾರೆ. ಚನ್ನಪಟ್ಟಣ, ಹಾಸನ, ಪಿರಿಯಾಪಟ್ಟಣ, ಮಂಡ್ಯ,ಮಳವಳ್ಳಿ, ಮೈಸೂರು, ಚಾಮರಾಜನಗರ ಇವೆಲ್ಲ ಕೆಲವೇ ಕಿ.ಮೀ. ಅಂತರದಲ್ಲಿದ್ದರೂ ಭಾಷೆ ಸಾಕಷ್ಟು ಬದಲಾವಣೆಯಾಗುತ್ತದೆ. ಆಕ್ಸೆಂಟ್ ಕೂಡಾ ಬದಲಾಗುತ್ತದೆ. ಹಾಗೆಯೇ ಹವ್ಯಕ ಕನ್ನಡ ಕೂಡಾ ಒಂದೇ ಅಲ್ಲ. ಸಾಗರ ಸೀಮೆ ಕ್ಯಾಸನೂರು ಸೀಮೆ ಸಿರಸಿ ದಕ್ಷಿಣ ಕನ್ನಡ ಕಾಸರಗೋಡು ಈ ಎಲ್ಲ ಜಿಲ್ಲೆಗಳ ಹವ್ಯಕ ಕನ್ನಡ ಅಲ್ಲಿಯ ಪ್ರಾದೇಶಿಕ ಪ್ರಭಾವಕ್ಕನುಗುಣವಾಗಿ ಬದಲಾಗುತ್ತದೆ. ಹಾಗೆಯೇ ಬಯಲುಸೀಮೆಯ ಭಾಷೆ ಕೂಡಾ ಧಾರವಾಡ ಹುಬ್ಬಳ್ಳಿ ಹಾಗೂ ರಾಯಚೂರು ಗುಲ್ಬರ್ಗಾ, ಬಿಜಾಪುರ ಈ ಎಲ್ಲಾ ಕಡೆಯೂ ಸಾಕಷ್ಟು ವ್ಯತ್ಯಯಗಳಿವೆ. ಕರಾವಳಿ ಕನ್ನಡ ಅಂದರೆ, ಉಡುಪಿ, ಕುಂದಾಪುರ, ಮಂಗಳೂರು,ಕಾಸರಗೋಡು ಎಲ್ಲಾ ಕಡೆಯೂ ಸಾಕಷ್ಟು ಬದಲಾವಣೆಗಳಿವೆ. ಕೊಡಗಿನ ಕನ್ನಡ, ಸುಳ್ಯದ ಅರೆಭಾಷೆ…ಹೀಗೆ ಹಲವು ಕನ್ನಡಗಳನ್ನು ಸೇರಿಸಿ ಕನ್ನಡವೇ ಹೊರತು ಕನ್ನಡ ಎನ್ನುವುದು ಕೇವಲ ಯಾವುದೇ ಒಂದು ಪ್ರದೇಶಕ್ಕೆ ಮಾತ್ರಾ ಸೀಮಿತವಾಗಿಲ್ಲ.

ತಿಂಡಿ ಅಂದರೆ ಮಲೆನಾಡಿನ ಕಡೆ ಬೆಳಗಿನ ಉಪಾಹಾರ ಆದರೆ, ಧಾರವಾಡದ ಕಡೆ ತಿಂಡಿ ಎಂದರೆ, ಕಡಿತ ಎಂದಾಗುತ್ತದೆ. ಮಲೆನಾಡಿನವರು ದೋಸೆಹಿಟ್ಟು ಅಂದರೆ ಚಾಮರಾಜನಗರದವರು ದೋಸೆ ಸಂಪಣ ಅನ್ನುತ್ತಾರೆ. ಹೀಗೆ ಪದಗಳ ವ್ಯತ್ಯಾಸವೇ ಸಾಕಷ್ಟಿದೆ.

ಆಡು ಭಾಷೆ ಎಂದರೆ, ಭಾವ, ಶೈಲಿ, ರಾಗ ಇವೆಲ್ಲ ಕೂಡಿರುತ್ತದೆ. ವ್ಯಾಕರಣ ಶುದ್ದರೂಪದಲ್ಲಿ ಏಕೆ ಎನ್ನುವುದು ಆಡುಮಾತಿನಲ್ಲಿ ಯಾಕೆ ಆಗುತ್ತದೆ. ಉತ್ತರ ಕರ್ನಾಟಕದವರು ಎದಕ್ರಿ ಎನ್ನುತ್ತಾರೆ. ಮುಂದುಗಡೆ ಎನ್ನುವುದು ಆಡುಮಾತಿನಲ್ಲಿ ಮುಚೇಕಡೆ ಆಗುತ್ತದೆ.(ಮುಚೇಕಡೆ ಬಾಗಿಲು ಹಾಕು ಮಲೆನಾಡಿನ ಕಡೆ ಬಳಕೆಯಲ್ಲಿದೆ.)

ಹೀಗೆ ಆಡುಮಾತಿಗೆ ಕಟ್ಟುಪಾಡುಗಳಿಲ್ಲ ಅದು ಮೌಖಿಕವಾಗಿ ಪರಂಪರಾಗತವಾಗಿ ಬೆಳೆದುಬಂದದ್ದು. ಅದರ ಮುಖ್ಯ ಉದ್ದೇಶವೇ ನಾವು ಹೇಳುವವರಿಗೆ ಅರ್ಥವಾಗುವುದು ಅಷ್ಟೆ !
ಆಡುವ ಭಾಷೆ ಕನ್ನಡವೇ ಆದರೂ ಆಯಾ ಪ್ರಾಂತ್ಯದ ಭಾಷೆಯ ನುಡಿ ಸೊಗಡು ಭಿನ್ನವಾಗಿರುವುದರಿಂದ ಅಲ್ಲಿನವರಿಗೆ ಆ ನುಡಿಸೊಗಡಿನ ಬಗ್ಗೆ ವಿಶೇಷ ಅಭಿಮಾನವಿರುತ್ತದೆ ಮತ್ತು ಅಲ್ಲಿನ ಜನರ ಹೃದಯವನ್ನು ನೇರವಾಗಿ ತಲುಪುತ್ತದೆ. “ಕ್ಯಾಂಡಿಯ ಹೆಣೆ, ಒಬ್ಬ ಎತ್ತಿನ ಕೇಂಬ್ಕ್ ಬಂದಿದ್ದ. ನಾನ್ ಏನ್ ಮಾಡ್ದೆ ಹಂಡ್ಗ್ ಆರೊರ-ಹುಂಡ್ಗ್ ಮೂರೊರ ಅಂದೆ. ಅಂವ ಬಾರಿ ರ‍್ತಿ ಮಾಡ್ತಾ ಆಯ್ಕಂಡ..ನನ್ಗ್ ಅತ್ ಸಿಟ್ ಬಂದ್ ನಾನ್ ಕಚ್ಚಿದ್ ಬಾಯ್ ಬಿಡುದಿಲ್ಲೆ ಚಿಕ್ಕಾಸ್ಕಮ್ಮಿಯಾರೆ ನಾನ್ ಕೊಡವ್ನ್ ಅಲ್ಲ” ಇದು ಕುಂದಾಪುರ ಭಾಷೆಯ ಮಾತು. ಇದು ಅಲ್ಲಿ ಎತ್ತಿನ ವ್ಯಾಪಾರಕ್ಕೆ ಬಂದವನ ಚಿತ್ರಣವನ್ನು ಹೆಂಡತಿಗೆ ಅವನು ಹೇಳುವ ರೀತಿಯನ್ನು ಕಟ್ಟಿಕೊಡುತ್ತದೆ. ಆ ಪ್ರಾದೇಶಿಕ ಮಾತಾಡುವವರಿಗೆ ಬಹಳ ಚೆನ್ನಾಗಿ ಅರ್ಥವಾಗುವ ಜೊತೆಗೆ ಆಪ್ತ ಭಾವನೆಯನ್ನು ಹುಟ್ಟುಹಾಕುತ್ತದೆ.

“ಹಾಗೂ ಹೀಗೂ ಸಾಕವ್ವ ಹಟ್ಟಿಯ ಅಂಗಳಕ್ಕೆ ಬಂದಳು. ವಸ್ತುಲ ಮೇಲ(ಹೊಸ್ತಿಲು ಮೇಲೆ)ಅವಳ ಮಗ ಶಿವು ನಿಂತಿದ್ದನು. ಬಂತಾ ನನ ಕಂದಾ ಎಂದು ಶಿವೂನ ಕೇಳಿದಳು. ಶಿವು ಏನಮ್ಮಾ ಎಂದಿತು. ಶಿವು ಬಾಯಿಂದ ಆ ವಾಕ್ಷ(ಶಕಾರ ಗಮನಿಸಿ) ಕೇಳಿ ಸಾಕವ್ವನಿಗೆ ದುಕ್ಕ ಕೋಪ ಅನ್ನೋವು ಉಕ್ಕಿದವು.”

“ನನ್ನ ಕೋಳಿ ತಿಂದವರ ಮನೆ ಮಣ್ಣಾಗಲೊ ನನ್ನ ಮನೆದೇವರ ಸತ್ಯ ಇದ್ದುದೇ ಉಂಟಾದರೆ ನನ್ನ ಕೋಳಿ ಮುರಿದವರ ಮನೆ ಮುರಿದು ಹೋಗಲೋ”ಅಂತ ಒಂದು ಬೈಗುಳ ಬೈಯ್ಯೋದು ಒಂದು ಸಲ ಧೂಳು ಎರಚೋದು ಮಾಡ್ತಾ ಬಿದ್ದು ಒದ್ದಾಡುತ್ತಿದ್ದಳು.” “ಸಾಕು ಏಳವ್ವೋ ಓದ್ದು ತರ‍್ಗಾ ಬಂದಾದ” ಕಾದಂಬರಿಯನ್ನು ಪರ‍್ತಿ ಓದಿದರೆ ಈ ಸಂದರ್ಭ ಬರೀ ವಾಕ್ಯಗಳಾಗಿ ನಮ್ಮ ಮುಂದೆ ಬರದೆ ಒಂದಿಡೀ ದೃಶ್ಯವನ್ನೆ ನಮ್ಮ ಕಣ್ಮುಂದೆ ಇರಿಸುತ್ತದೆ. ದಲಿತರ ಅಸಹಾಯಕತೆ ಭಾಷೆಯಲ್ಲಿ ಸಶಕ್ತವಾಗಿ ಹೊಮ್ಮುತ್ತದೆ. ಆಯಾ ಪ್ರದೇಶದ ಭಾಷೆ ನುಡಿಗಟ್ಟಿನೊಂದಿಗೆ ಅದರದೇ ಆದ ಸೊಗಡಿನೊಂದಿಗೆ ಪರಿಣಾಮಕಾರಿಯಾಗಿ ಮೂಡಲು ಸಾಧ್ಯ. ದೃಶ್ಯ ಕಾವ್ಯವಾಗಲು ಸಾಧ್ಯ.

ಕಾಪಿ ಪೋನು ಇವೆಲ್ಲ ಹಿಂದಿನ ಜನ ಹೆಚ್ಚಾಗಿ  ಬಳಸುತಿರಲಿಲ್ಲ.. ಇದು ಮೇಲ್ಜಾತಿ ಕೆಳಜಾತಿ ಅಂತ ಇಲ್ಲದೆ ಸಾಮಾನ್ಯವಾಗಿ ಹಳ್ಳಿಯ ಜನ ಬಳಸುತ್ತಿದ್ದರು. ಹವ್ಯಕರಲ್ಲಂತೂ ಶ ಕಾರ ಜಾಸ್ತಿ ಬಳಸುತ್ತಾರೆ. ಸೇರುವುದಿಲ್ಲವೇನೆ ಎಂದು ಕೇಳಲು ಶರ‍್ತಲ್ಯನೇ ಎನ್ನುತ್ತಾರೆ. ಮಂಡ್ಯ ಚಾಮರಾಜನಗರದವರು ಹೆಚ್ಚಾಗಿ ಶ ಕಾರ ಕ್ಕೂ ಸ ಕಾರ ಬಳಸುತ್ತಾರೆ.

ದೇಶ-ದೇಸ ಹೀಗೆ. ಶ ಕಾರ ಬಳಸುವ ಮಲೆನಾಡಿನವರನ್ನು ಅಣಕಿಸುವುದಿಲ್ಲವಾದಲ್ಲಿ ಮಂಡ್ಯದವರನ್ನೂ ಆಡಿಕೊಳ್ಳುವುದು ತಪ್ಪೇ..ಹವ್ಯಕ ಭಾಷೆಯಲ್ಲಿ ಮೇಷ್ಟ್ರು ಬಂದಾ…(ಇಲ್ಲಿ ಆಞ ಎನುವುದು ಅನುನಾಸಿಕ…ಆ ಗೆ ನ್ಯಾ ಕಾರವನ್ನು ಸೇರಿಸಿ ಹೇಳಿದರೆ ಅದು ಬಹುವಚನವಾಗುತ್ತದೆ.) ಆದರೆ ಈ ಭಾಷೆ ಗೊತ್ತಿಲ್ಲದವರು ಗುರುಗಳನ್ನು ಏಕವಚನದಲ್ಲಿ ಕರೆಯುತ್ತಿದ್ದೇವೆ ಎಂದು ಭಾವಿಸಬಹುದು.

ಹಾಗಾಗಿ ಭಾಷೆಯಲ್ಲಿ ಶುದ್ದತೆ ಅಶುದ್ಧತೆ ಎನ್ನುವುದೇ ತಪ್ಪು..ನಮಗೆ ಸರಿ ಅನಿಸಿದ್ದು ಇನ್ಯಾರಿಗೊ ತಪ್ಪು  ಎನಿಸಿರತ್ತೆ. ಆದ್ದರಿಂದಲೇ ಆಡು ಮಾತು ಕತೆಕಾವ್ಯ ನಾಟಕ ಸಿನಿಮಾ ಗಳಲ್ಲಿ ಬಳಸಬಹುದು. ಆದರೆ ಆಡಳಿತ ಭಾಷೆಯಲ್ಲಿ ಗ್ರಾಂಥಿಕ ಕನ್ನಡವೇ ಬೇಕು ಸಾಮಾನ್ಯ ವೇದಿಕೆಗಳಲ್ಲಿ, ಸುದ್ದಿ ವಾಚಿಸುವವರೂ ಪ್ರಾಂತೀಯ ಭಾಷೆ ಮಾತನಾಡಿದರೆ ಒಬ್ಬರಿಗೆ ಅರ್ಥವಾದರೆ ಇನ್ನೊಬ್ಬರಿಗೆ ಆಗುವುದಿಲ್ಲ. ಅಲ್ಲದೆ ಅವರವರ ಪ್ರಾಂತೀಯ ಭಾಷೆಯ ಬಗ್ಗೆ ಎಲ್ಲರಿಗೂ ಅಭಿಮಾನವಿರುತ್ತದೆ. ಭಾಷೆಯ ಉದ್ದೇಶವೇ ಸಂವಹನವಾದ್ದರಿಂದ ಇಲ್ಲಿ ಮೂಲ ಉದ್ದೇಶ ಸೋಲುತ್ತದೆ. ಹಾಗಾಗಿ ಎಲ್ಲರ-ಕನ್ನಡ ಎಂದರೆ, ನನಗೆ ತಿಳಿದಂತೆ ಗ್ರಾಂಥಿಕ ಕನ್ನಡವೇ.

ಇನ್ನು ಇದರಲ್ಲಿ ಅಕ್ಷರಮಾಲೆಯ ಸುಧಾರಣೆ ಬಗ್ಗೆ ಹೇಳುವುದಾದರೆ, ಇವತ್ತಿಗೆ ಹಳೆಗನ್ನಡ ನಡುಗನ್ನಡ ದಾಟಿ ಹೊಸಗನ್ನಡಕ್ಕೆ ಬರುವಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಈಗ ಕನ್ನಡವೇ ಮರೆಯಾಗುತ್ತಿರುವ ಹೊತ್ತಿನಲ್ಲಿ ತಿನ್ನುವ ಅನ್ನವೇ ವೈಟ್ ರೈಸ್ ಆದ ಹೊತ್ತಲ್ಲಿ ಈ ಗೊಂದಲಕ್ಕಿಂತಲೂ ಆದ್ಯತೆ ಬೇರೆಯೇ ಇದೆ ಎನಿಸುತ್ತದೆ. ಬೇರೆ ಭಾಷೆಯ ಪದಗಳನ್ನು ಅದರಲ್ಲೂ ಸಂಸ್ಕೃತವನ್ನು ಕಿತ್ತು ಹಾಕಬೇಕೆನ್ನುವ ಹಟದ ಹಿಂದೆ ಬೇರೆಯೇ ಅರ್ಥ ಧ್ವನಿಸುತ್ತದೆ. ಹೇರಿಕೆಯ ಹೆಸರಿನಲ್ಲಿ ಹೋರಾಟದ ಹಾದಿಯೇ ಬೇರೆ ಆಗಿ ಡೈಲ್ಯೂಟ್ ಆಗಿಬಿಡಬಾರದು. ಘಂಟೆ -ಗಂಟೆ ಆಗಿದೆ ಎನ್ನುವುದಾದರೆ, ಘಂಟಾಘೋಷವಾಗಿ ಎನ್ನುವುದು ಕೊಡುವ ಭಾವವನ್ನೇ ಗಂಟಾಗೋಸವಾಗಿ ಅನ್ನುವುದು ಕೊಡಲಾರದೆಂದೇ ನನಗನಿಸುತ್ತದೆ.

ಶಿಶ್ನ ಯೋನಿ ಎಂದು ಸಲೀಸಾಗಿ ಕಾವ್ಯದಲ್ಲಿ ಬಳಸುವ ನಾವು ಗ್ರಾಮ್ಯ ಕನ್ನಡದ ಈ ಶಬ್ದಗಳನ್ನು ಬಳಸಲಾರೆವು. ಕತೆಯಲ್ಲಿ ಬರುವ ಡೈಲಾಗ್ ಗಳಲ್ಲಿ ಬಯ್ಗುಳಗಳಲ್ಲಿ ಬಳಸುವುದು ಬೇರೆ…ಇದನ್ನು ಕೀಳರಿಮೆ ಎನ್ನಲಾಗುವುದಿಲ್ಲ. ಭಾಷೆ ಪ್ರಾದೇಶಿಕವಾಗಿರುವ ಹಾಗೇ ಸಾಮಾಜಿಕವಾದುದು ಕೂಡಾ. ಅಭ್ಯಾಸ ಕೂಡ ಬಹಳ ಸಹನೀಯವಾಗಿರಬೇಕಾಗುತ್ತದೆ. ವಚನಕಾರರು ಸಾಕಷ್ಟು ಕನ್ನಡ ಪದಬಳಕೆಗೆ ಆದ್ಯತೆ ನೀಡಿದರು. ಹಾಗೆಯೇ ಒಂದು ಭಾಷೆಯ ಬೆಳವಣಿಗೆಗೆ ಹಲವು ಭಾಷೆಗಳಿಂದ ಎರವಲಾಗಿ ಪಡೆಯುವುದು ಅನಿವರ‍್ಯ. ಕೊಡುಕೊಳ್ಳುವಿಕೆ ಒಂದು ಭಾಷೆಯ ಜೀವಂತಿಕೆಯ ಲಕ್ಷಣ. ಇವತ್ತು ರ‍್ಜೆಂಟು, ಗೇಟು ಎನ್ನುವ ಇಂಗ್ಲೀಷ್ ಶಬ್ದಗಳೇ ನಮ್ಮವಾಗಿವೆ. ಭೂದಾಖಲೆಯ ಭಾಷೆಯಲ್ಲಿ ಇರುವುದು ಹೆಚ್ಚಾಗಿ ಪರ್ಷಿಯನ್ ಮತ್ತು ರ‍್ದು ಶಬ್ದಗಳು. ಇವತ್ತು ಖರಾಬು ಲ್ಯಾಂಡು ಅನ್ನುವ ಶಬ್ದ ಹಳ್ಳಿಯ ಅವಿದ್ಯಾವಂತರಿಗೂ ಗೊತ್ತು. ಎಲ್ಲಾ ಭಾಷೆಗಳಿಂದಲೂ ಇಂಗ್ಲೀಷ್ ನಿಘಂಟು ಪ್ರತಿ  ಹೊಸ ಹೊಸ ಶಬ್ದಗಳನ್ನು ಆಮದು ಮಾಡಿಕೊಂಡು ಶ್ರೀಮಂತವಾಗುತ್ತದೆ. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಅದು ಹಿಂದೆಂದಿಗಿಂತಲೂ ಅಗತ್ಯ. ಅದನ್ನು ನಮ್ಮ ಸ್ವಂತಿಕೆ ಬಿಟ್ಟುಕೊಡದೆ ಕನ್ನಡೀಕರಣ ಮಾಡಿಕೊಳ್ಳುವುದು ಮುಖ್ಯ.

ಮಂಡ್ಯ ಹಾಸನ ಮತ್ತು ಚಾಮರಾಜನಗರ ಮುಂತಾದ ಕಡೆಗಳ ಕನ್ನಡದಲ್ಲಿ ಮಹಾಪ್ರಾಣ ವ್ಯಂಜನಗಳಿಲ್ಲ. ಅದೇ ಹವ್ಯಕ ಕನ್ನಡದಲ್ಲಿ ಮಹಾಪ್ರಾಣಗಳ ಬಳಕೆ ಅತಿ ಎನಿಸುವಷ್ಟು ಇದೆ. ಭಾಷೆಯ ಈ ವೈವಿಧ್ಯತೆಯನ್ನು ಅರ್ಥಮಾಡಿಕೊಂಡು ನಮ್ಮ ಪ್ರಾದೇಶಿಕ ಭಾಷೆಯ ಸೊಗಡನ್ನು ಉಳಿಸಿ ಬೆಳೆಸಬೇಕು ಹಾಗೆಯೇ ವೇದಿಕೆಗೆ ಬೇಕಾದ, ವ್ಯವಹಾರಕ್ಕೆ ಬೇಕಾದ ಶಿಷ್ಟ ಕನ್ನಡವನ್ನೂ ಸಂವೃದ್ಧಿಗೊಳಿಸಬೇಕು. ಇದುವರೆಗೂ ಸಾಕಷ್ಟು ಬದಲಾವಣೆ ಕಂಡಿರುವ ಕನ್ನಡ ಲಿಪಿ ಮುಂದೆಯೂ ಸುಧಾರಣೆ ಕಾಣುವುದು ಅಗತ್ಯ ಮತ್ತು ಅನಿವಾರ್ಯ ಅದು ಕಾಲಕ್ರಮೇಣ ಆಗಬೇಕು ಮತ್ತು ಸಹೃದಯದಿಂದ ಆಗಬೇಕೆ ಹೊರತು ಯಾವುದೋ ಗುಂಪುಗಾರಿಕೆಗೆ ಹೇರಿಕೆಗೆ ಕನ್ನಡ ಲಿಪಿ ಬಲಿಯಾಗಬಾರದು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಬದಲಾವಣೆಗೆ ತೆರೆದುಕೊಂಡಿದೆ. ಅನಿವಾರ್ಯ ಎನಿಸಿದಾಗ ಆಗುತ್ತದೆ. ಆದರೆ ಕನ್ನಡ ಕಲಿಯಲು ಮಾತಾಡಲು ಕನ್ನಡಿಗರಿಗೇ ಕಷ್ಟ ಅನ್ನುವುದಾದರೆ, ಅದಕ್ಕಾಗಿ ಆ ಅಕ್ಷರಗಳನ್ನೇ ತೆಗೆದುಬಿಡಬೇಕು ಅಂದರೆ ಒಪ್ಪುವುದು ಕಷ್ಟ.
ನಮ್ಮ ಜಾನಪದ ಸಾಹಿತ್ಯ ಹೊಲಗದ್ದೆಗಳಲ್ಲಿ ಬೀಜ ಬಿತ್ತುವಾಗ ನಾಟಿ ಮಾಡುವಾಗ ಕಾಳು ತೂರುವಾಗ ಕುಟ್ಟುವಾಗ ಬೀಸುವಾಗ ಹುಟ್ಟಿದವುಗಳು. ಸೋಬಾನೆ ಹಾಡುಗಳು ತಲೆಮಾರಿನಿಂದ ಬಂದಂತವು. ಇವುಗಳು ಯಾವ ವ್ಯಾಕರಣ ಅಥವಾ ಸುಧಾರಣೆಯ ಹಂಗಿಲ್ಲದೆ “ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತಿಮತಿಗಳ್”ಎಂಬುದಕ್ಕೆ ಸೋದಾಹರಣೆಯಾಗಿವೆ. ಪ್ರತಿಯೊಂದು ಭಾಷೆಯೂ ತನ್ನ ಮೂಲಸ್ವರೂಪವನ್ನು ಸರ‍್ಥಿಸಿಕೊಳ್ಳುತ್ತಲೇ ವಿಕಾಸಗೊಳ್ಳುತ್ತಾ ಸಮೃದ್ಧವಾಗಬೇಕು.

ಲೇಖಕರ ಪರಿಚಯ: ಶಾಂತಕುಮಾರಿ ಅವರು ಮೂಲತಃ ಉದ್ಯಮಿ, ಕಂಫ್ಯೂಟರ್‌ ಬಂದ ಹೊಸತರಲ್ಲಿಯೇ ಅದರ ಸಾಧ್ಯತೆಗಳೆವನ್ನು ದುಡಿಸಿಕೊಳ್ಳಲು ಆರಂಭಿಸಿದವರು. ಇತ್ತೀಚೆಗೆ ಓಟಿಟಿ ವೇದಿಕೆಯಲ್ಲಿಯೂ ಅವರು ಉದ್ಯಮದ ಕಾರ್ಯಶೀಲತೆ ವಿಸ್ತರಿಸಿಕೊಂಡಿದ್ದಾರೆ. ಅವರ ಬರೆಹಗಳೆಂದರೆ ನನಗೆ ಸದಾ ಬೆರಗು. ಅವುಗಳಲ್ಲಿ ತಿಳಿಹಾಸ್ಯ, ವಿಡಂಬನೆ- ಮೊನಚು – ವ್ಯಂಗ್ಯ ಎಲ್ಲವೂ ಸಮ್ಮಿಳಿತವಾಗಿರುತ್ತದೆ. ಈ ಮಾದರಿ ಬರೆಹ ಎಲ್ಲರಿಗೂ ಸಿದ್ಧಿಸುವುದು ಕಷ್ಟಸಾಧ್ಯವೇ ಸರಿ. ಮುಖ್ಯವಾಗಿ ಇವರು ಸಾಮಾಜಿಕ ಜಾಲತಾಣಗಳನ್ನು ಕಾಡುಹರಟೆಯ ವೇದಿಕೆಯೆಂದು ಭಾವಿಸಿಲ್ಲ. ಈ ಕಾರಣದಿಂದಲೇ ಇವರು ಕಂಡ ವಿಷಯ – ವಿಚಾರಗಳು ಬರೆಹ ರೂಪಕ್ಕಿಳಿದು ಓದುಗರಿಗೆ ಏಕಕಾಲದಲ್ಲಿ ವಿಚಾರ ಮಥನೆಗೂ, ಸಮಾಧಾನಕ್ಕೂ ಕಾರಣವಾಗುತ್ತದೆ. ಸಮಾಧಾನ ಅಂತ ಏಕೆ ಹೇಳಿದೆ ಎಂದರೆ ಇವರು ಆಪ್ತ ಸಮಾಲೋಚಕರು ಸಹ. ಇವರು “ಸೂರಂಚಿನ ನೀರು” ಹೆಸರಿನಲ್ಲಿ ಬರೆಯುವ ಅಂಕಣ  ಇಂದಿನಿಂದ ಆರಂಭವಾಗಿ ಪ್ರತಿ ಭಾನುವಾರ ಪ್ರಕಟವಾಗುತ್ತದೆ ಎಂದು ತಿಳಿಸಲು ಹರ್ಷವಾಗುತ್ತದೆ.

Leave a Reply

Your email address will not be published. Required fields are marked *