ಕಾಂಗ್ರೆಸ್ ಪ್ರಚಾರ ಶೈಲಿಯಲ್ಲಿ ಹೊಸತನ…. ಜನರ ಜತೆ ಸಂವಾದಕ್ಕೆ ಆದ್ಯತೆ ನೀಡುತ್ತಿರುವ ರಾಹುಲ್, ಪ್ರಿಯಾಂಕ ..

ಕಾಂಗ್ರೆಸ್ ಪ್ರಚಾರ ಶೈಲಿಯಲ್ಲಿ ಹೊಸತನ…. ಜನರ ಜತೆ ಸಂವಾದಕ್ಕೆ ಆದ್ಯತೆ ನೀಡುತ್ತಿರುವ ರಾಹುಲ್, ಪ್ರಿಯಾಂಕ ..


ನವದೆಹಲಿ, ಮಾ 2 ಕಾಂಗ್ರೆಸ್ ನಾಯಕರ ಪ್ರಚಾರ ಶೈಲಿ ಈಗ ಸಂಪೂರ್ಣ ಬದಲಾಗಿದೆ. ಜನರೊಂದಿಗೆ ಬೆರತು, ಅವರೊಂದಿಗೆ ಹಾಡುತ್ತಾ, ಹರಟುತ್ತಾ ಅವರ ಮನಸ್ಸು ಸೆಳೆಯಲು ಉತ್ಸಾಹದಲ್ಲಿ ಮುಂದಡಿ ಇರಿಸುತ್ತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ತಾವು ಭೇಟಿ ನೀಡುತ್ತಿರುವ ಪ್ರದೇಶಗಳಲ್ಲಿ ಸ್ಥಳೀಯರೊಂದಿಗೆ ಕಲೆತು, ಬೆರೆತು ತಿರುಗಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಕಠಿಣ ಟೀಕೆಗಳ ಬದಲು ಜನರೊಂದಿಗೆ ತಮ್ಮ ನಾಯಕರು ಮುಕ್ತವಾಗಿ ಬೆರೆಯುತ್ತಿರುವುದಕ್ಕೆ ಕಾಂಗ್ರೆಸ್ ವರ್ಗಗಳಲ್ಲಿ ಸಂಭ್ರಮ ಮೂಡಿದೆ.
ಪಶ್ಚಿಮ ಬಂಗಾಳ (294 ಸ್ಥಾನಗಳು), ಕೇರಳ (140 ಸ್ಥಾನಗಳು), ತಮಿಳುನಾಡು (234 ಸ್ಥಾನಗಳು), ಅಸ್ಸಾಂ (126 ಸ್ಥಾನಗಳು) ಹಾಗೂ ಪುದುಚೇರಿ (30 ಸ್ಥಾನಗಳು) ವಿಧಾನಸಭೆ ಚುನಾವಣೆಗಳು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಸೋಮವಾರ, ಮಂಗಳವಾರ ಅಸ್ಸಾಂನಲ್ಲಿ, ರಾಹುಲ್ ಗಾಂಧಿ ಕನ್ಯಾಕುಮಾರಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇಬ್ಬರೂ ಜನರನ್ನು ಸೆಳೆಯಲು ಹೊಸತನ ತೋರಿಸುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಬಿಶ್ವಾನಾಥ್ ಜಿಲ್ಲೆಯ ಚಹಾ ತೋಟಕ್ಕೆ ತೆರಳಿ ತೋಟದ ಕೂಲಿಕಾರರೊಂದಿಗೆ ಚಹಾ ಕೊಯ್ಲು ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಅಸ್ಸಾಂನಲ್ಲಿ ಚಹಾ ತೋಟಗಳು ಸ್ಥಳೀಯರಿಗೆ ಜೀವನೋಪಾಯದ ಮೂಲವಾಗಿದೆ.
ರಾಹುಲ್ ಗಾಂಧಿ ಭಾನುವಾರ ಕನ್ಯಾಕುಮಾರಿಯಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಹ ಪಾಠಿಯಂತೆ ಬೆರೆತರು. ಒಬ್ಬ ವಿದ್ಯಾರ್ಥಿ ಹಾಕಿದ ಪುಷ್-ಅಪ್ಸ್ ಸವಾಲು ಸ್ವೀಕರಿಸಿ, ಪುಷ್-ಅಪ್ಸ್ ಮಾಡಿದರು. ರಾಹುಲ್ ಗಾಂಧಿ ಜಪಾನಿನ ಸಮರ ಕಲೆ ಐಕಿಡೊದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಅವರ ಒಂದು ಕೈಯಲ್ಲಿ ಮಾಡಿದ ಸಾಹಸ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಕೆಲವು ದಿನಗಳ ಹಿಂದೆ ಅವರು ಕೇರಳದಲ್ಲಿ ಮೀನುಗಾರರೊಂದಿಗೆ ಸಮುದ್ರಕ್ಕೆ ಹಾರಿದ್ದರು. ಮಶ್ರೂಮ್ ಬಿರಿಯಾನಿ ತಯಾರಿಸಲು ನೆರವು ನೀಡಿದ್ದರು. ಈ ಹಿಂದೆ ಉತ್ತರ ಪ್ರದೇಶದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳನ್ನು ಭೇಟಿಯಾದಾಗಲೂ ಇಂತಹ ಕ್ರಮಗಳಿಂದ ಜನರನ್ನು ಆಕರ್ಷಿಸಿದ್ದರು.

ಜನರನ್ನು ನೇರ ಭೇಟಿಮಾಡಲು ಇರುವ ಎಲ್ಲ ಅಡೆತಡೆಗಳನ್ನು ಬದಿಗೆ ತಳ್ಳಿ ಚುನಾವಣಾ ಪ್ರಚಾರದಲ್ಲಿ ಅಣ್ಣ ತಂಗಿ ಪಾಲ್ಗೊಳ್ಳುತ್ತಿದ್ದಾರೆ. ಭಾರಿ ಸಮಾವೇಶಗಳಿಗಿಂತ ವ್ಯಕ್ತಿಗತವಾಗಿ ಜನರನ್ನು ಭೇಟಿಯಾಗಿ, ಅವರೊಂದಿಗೆ ಮಾತುಕತೆ ನಡೆಸಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿದೆ.

, ,

Leave a Reply

Your email address will not be published. Required fields are marked *