ನಾನು ಬಂಡೆ ಅಲ್ಲ, ಈ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲು: ಡಿ.ಕೆ ಶಿವಕುಮಾರ್

ನಾನು ಬಂಡೆ ಅಲ್ಲ, ಈ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲು: ಡಿ.ಕೆ ಶಿವಕುಮಾರ್

ಬೆಂಗಳೂರು:

‘ನಾನು ಬಂಡೆಯಾಗಲು ಇಚ್ಚಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿಕಲ್ಲಾಗುವ ಆಸೆ. ಈ ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಕುಸುಮಾ ಎಚ್ ಅವರ ಪರವಾಗಿ ಆರ್.ಆರ್. ನಗರದ ಐಡಿಯಲ್ ಹೋಂಮ್ಸ್ ನಲ್ಲಿ ಒಕ್ಕಲಿಗ ಸಮುದಾಯದ ನಾನಾ ಸಂಘಟನೆಗಳ ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಹೇಳಿದ್ದಿಷ್ಟು:

‘ಕೆಲವರು ಬಂಡೆನ ಡೈನಮೇಟ್ ಇಟ್ಟು ಪುಡಿ ಪುಡಿ ಮಾಡುತ್ತೇವೆ ಅಂತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರಡುಗಂಭವಾಗಿ ನಿಲ್ಲಲು, ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗಲು ಸಾಧ್ಯ. ಮಿತಿ ಮೀರಿದರೆ . ಈ ಜನ ವಿರೋಧಿ ಸರ್ಕಾರಕ್ಕೆ ಜನ ಬೀಸುವ ಕಲ್ಲಾಗುವೆ. ಹೀಗಾಗಿ ನಾನು ಕೇವಲ ಬಂಡೆಯಾಗಲು ಇಚ್ಚಿಸುವುದಿಲ್ಲ. ಜನರಿಗೆ ನನ್ನಿಂದ ಉಪಯೋಗವಾದರೆ ಸಾಕು.

ನಾವು ಬೀಜ ಬಿತ್ತುವಾಗ ಅದು ಮರವಾಗಿ ಹಣ್ಣಾದರೂ ನೀಡಲಿ, ನೆರಳಾದರು ನೀಡಲಿ ಎಂಬ ಒಳ್ಳೆ ಭಾವನೆಯಿಂದ ಬಿತ್ತುತ್ತೇವೆ. ಎಲ್ಲ ಬೀಜಗಳು ಹಣ್ಣನೇ ನೀಡಬೇಕು ಎಂದು ಬಯಸುವುದಿಲ್ಲ. ಕೆಲವೊಮ್ಮೆ ಒಬ್ಬರು ಮರ ಬೆಳೆಸುವವರೆ, ಮತ್ತೊಬ್ಬರು ಹಣ್ಣು ತಿನ್ನುತ್ತಾರೆ. ಯಾರೋ ಕಟ್ಟಿದ ಹುತ್ತದಲ್ಲಿ ವಿಷ ಸರ್ಪ ಬಂದು ಸೇರುತ್ತದೆ. ಇದು ಪ್ರಕೃತಿ ನಿಯಮ.

ನಮ್ಮ ರವಿ ಪತ್ನಿ ಕುಸುಮ. ಅವರ ಕುಟುಂಬ ನನಗೆ ಮುಂಚೆಯಿಂದಲೂ ಗೊತ್ತಿದೆ. ಪಾಪ ಆತ ಯಾವುದೋ ಕಾರಣಕ್ಕೆ ಹೇಡಿತನ ತೋರಿಬಿಟ್ಟ. ಆತ ಯಾವುದೇ ಪರಿಸ್ಥಿತಿ ಇದ್ದರೂ ಧೈರ್ಯದಿಂದ ಎದುರಿಸಿ ತನ್ನ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ನೋಡಿಕೊಳ್ಳಬೇಕಿತ್ತು. ನಮ್ಮ ಸಮಾಜ ಅವರನ್ನು ಎಷ್ಟು ಪ್ರೀತಿ, ಗೌರವದಿಂದ ನೋಡುತ್ತಿತ್ತು.

ಆದರೆ ನಷ್ಟ ಆಗಿದ್ದು ಯಾರಿಗೆ? ಆತನ ಸಾವಿಗೆ ಅನೇಕರು ಕೊಲೆಯಾಯ್ತು ಅಂತಾ ಧರಣಿ ಮಾಡಿದ್ದನ್ನು ನೋಡಿದ್ದೇವೆ. ನಮ್ಮದೇ ಸರ್ಕಾರ ಸಿಬಿಐ ತನಿಖೆಗೆ ಕೊಟ್ಟೆವು. ಯಾವ ಯಾವ ಹೇಳಿಕೆ ಕೊಡಿಸಿದ್ದಾರೆ ಎಂಬ ದಾಖಲೆಯೂ ನಮ್ಮ ಬಳಿ ಇದೆ. ಆದರೆ ನಾವು ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬೇಡ.

ನಮ್ಮ ಹೆಣ್ಣು ಮಗಳು ಎಲ್ಲರ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡು, ಸಪ್ತಪದಿ ತುಳಿದು ಮದುವೆಯಾಗಿದ್ದಾಳೆ. ಆದರೆ ನಮ್ಮ ಶೋಭಕ್ಕ ಚುನಾವಣೆ ವೇಳೆ ಗಂಡನ ಹೆಸರು ಬಳಸಿಕೊಳ್ಳಬೇಡ ಅಂತಾರಲ್ಲ ಹೇಗೆ ಸಾಧ್ಯ? ಶೋಭಕ್ಕ ನೀನು, ನಿನ್ನ ಮಗಳೋ, ತಂಗಿನೋ ಆ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದೆ.

ರಾಜಕಾರಣಕ್ಕೆ ಸಂಪ್ರದಾಯವನ್ನೇ ತೆಗೆಯಬೇಕು ಎನ್ನುವುದು ಎಷ್ಟು ಸರಿ? ನಾನು ಕುಸುಮ ಅವರನ್ನು ಕೇಳಿದೆ ಮತದಾರ ಗುರುತಿನ ಚೀಟಿಯಲ್ಲಿ ಏನಂತಾ ಹೆಸರಿದೆ ಎಂದು. ಆರಂಭದಲ್ಲಿ ಕುಸುಮಾ ಹೆಚ್ ಅಂತಾ ಕೊಟ್ಟಿದ್ದು ಹಾಗೆ ಇದೆ ಎಂದರು. ಆದರೆ ಪಾಸ್ ಪೋರ್ಟ್ ಇತರ ದಾಖಲೆಯಲ್ಲಿ ಕುಸುಮ ಡಿ.ಕೆ ರವಿ ಅಂತಾನೆ ಇದೆ.

ಹೆಣ್ಣು ಮಗಳು ನೊಂದಿದ್ದಾಳೆ. ಸಮಾಜ ಸೇವೆ ಮಾಡಲು ಮುಂದೆ ಬಂದಿದ್ದಾಳೆ. ಅಂತಾ ನಾನು ಹಾಗೂ ಸುರೇಶ್ ಕೂತು ಮಾತನಾಡಿ ಈಕೆಯನ್ನು ಪಕ್ಷದ ಅಭ್ಯರ್ಥಿಯಾಗಿ ಮಾಡಲು ನಿರ್ಧರಿಸಿದೆವು. ಕಳೆದ ಎರಡು ಬಾರಿ ಈ ವ್ಯಕ್ತಿಯನ್ನು ಗೆಲ್ಲಿಸಲು ಶ್ರಮಪಟ್ಟಿದ್ದೆವು. ಆದರೆ ಈ ವ್ಯಕ್ತಿ ನಮ್ಮ ಮೂರು ಹೆಣ್ಣು ಮಕ್ಕಳಿಗೆ ಕಿರುಕುಳ ನೀದಿದ್ದನ್ನು ನಾವು ನೋಡಿದ್ದೇವೆ. ಆ ಸಮಯದಲ್ಲಿ ನಾನು ಸೇರಿದಂತೆ ಯಾರೂ ಆತನ ನೆರವಿಗೆ ಬರಲಿಲ್ಲ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಾಗಿದ್ದ ಪರಮೇಶ್ವರ್ ಅವರ ಮನೆಗೆ ಹೋಗಿ ಈ ರೀತಿ ನಡೆಯುತ್ತಿದೆ, ಈತನಿಗೆ ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದೆ.

ಈಗ ನವರಾತ್ರಿ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ರಕ್ಷಣೆ ನೀಡಲು ದುರ್ಗಾದೇವಿ, ರಾಜರಾಜೇಶ್ವರಿ ಆಶೀರ್ವಾದ ಬೇಕಿದೆ. ಈ ದೇವತೆಗಳ ಆಶೀರ್ವಾದದೊಂದಿಗೆ ನಾವು ಕ್ಷೇತ್ರದ ಹಿತ ಕಾಯಲು ನೊಂದು ಬೆಂದಿರುವ ಹೆಣ್ಣು ಮಗಳನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ.

Leave a Reply

Your email address will not be published. Required fields are marked *