ರಾಜ್ಯ ಸರ್ಕಾರವು ಗರ್ಭಕಂಠದ ಕ್ಯಾನ್ಸರ್ ತಡೆಯಲು 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ ನೀಡಲು ನಿರ್ಧರಿಸಿದೆ. ಗಣಿ ಬಾಧಿತ ಮತ್ತು ಕಲ್ಯಾಣ ಕರ್ನಾಟಕದ 20 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ವ್ಯಾಕ್ಸಿನ್ ನೀಡಲು ತೀರ್ಮಾನಿಸಿದೆ.
ಗಣಿಗಾರಿಕೆಯಿಂದ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, 9 ಕೋಟಿ ರೂ. ವೆಚ್ಚದಲ್ಲಿ ಹೆಚ್‌ಪಿವಿ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ. ತುಮಕೂರು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳ 20 ತಾಲೂಕುಗಳಲ್ಲಿ 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ ನೀಡುವಂತೆ ಸೂಚನೆ ನೀಡಲಾಗಿದೆ.
ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್ ಮತ್ತು ಜನನಾಂಗದ ನರಹುಣ್ಣುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಲೈಂಗಿಕವಾಗಿ ಸಕ್ರಿಯವಾಗುವ ಮೊದಲು 9ರಿಂದ 14ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಶೇ. 80ರಷ್ಟು ಹೆಣ್ಣುಮಕ್ಕಳಿಗೆ ಲಸಿಕೆ ನೀಡುವುದರಿಂದ ಗಂಡುಮಕ್ಕಳಿಗೆ ಹೆಚ್.ಪಿ.ವಿ ಸೋಂಕು ಹರಡುವಿಕೆ ತಡೆಯಬಹುದಾಗಿದೆ.