ಕೊವಿಡ್ ಲಸಿಕೆ ನೀಡಿಕೆ ರಾಜ್ಯ ಅಪೂರ್ವ ಸಾಧನೆ

ಬೆಂಗಳೂರು, ಜ ೨೩(ಉದಯಕಾಲ) ಕೊರೋನಾ ಲಸಿಕೆ ವಿಚಾರದಲ್ಲಿ ರಾಜ್ಯ ಅಪೂರ್ವ ಸಾಧನೆ ಮಾಡಿದ್ದು, ೧೮ ವರ್ಷ ಮೀರಿದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು, ರಾಜ್ಯದಲ್ಲಿ ೧೮ ವರ್ಷ ಮೀರಿದ ನಾಲ್ಕು ಕೋಟಿ ೮೯ ಲಕ್ಷದ ೧೬ ಸಾವಿರ ಮಂದಿಯನ್ನು ಲಸಿಕೆಗಾಗಿ ಗುರುತಿಸಲಾಗಿತ್ತು. ನಿನ್ನೆ ರಾತ್ರಿಯ ವೇಳೆಗೆ ೪ ಕೋಟಿ ೮೯ ಲಕ್ಷದ ೨೯ ಸಾವಿರದ ೮೧೯ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದು, ಗುರಿ ಮೀರಿ ಶೇಕಡ ೧೦೦.೧ ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಶೇಕಡ ೮೫.೩ ಮಂದಿ ೨ನೇ ಡೋಸ್ ಲಸಿಕೆ ಪಡೆದಿದ್ದಾರೆ. ೧೫ ರಿಂದ ೧೮ ವರ್ಷದ ಮಕ್ಕಳ ಲಸಿಕೀಕರಣದಲ್ಲಿ ಶೇಕಡ ೬೮ರಷ್ಟು ಪ್ರಗತಿಯಾಗಿದೆ. ೪ ಲಕ್ಷದ ೮೦ ಸಾವಿರಕ್ಕಿಂತಲೂ ಹೆಚ್ಚು ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ ಎಂದರು.
ಈ ಮಧ್ಯೆ ಕೊರೋನಾ ಪರೀಕ್ಷೆಯಲ್ಲೂ ರಾಜ್ಯ ಉತ್ತಮ ಸಾಧನೆ ತೋರಿದ್ದು, ೬ ಕೋಟಿಗೂ ಹೆಚ್ಚು ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಕಳೆದ ಡಿಸೆಂಬರ್ ನಿಂದ ಒಟ್ಟು ಪರೀಕ್ಷೆಗಳ ಪೈಕಿ ಶೇಕಡ ೨೮ರಷ್ಟು ಮಕ್ಕಳಿದ್ದಾರೆ. ರಾಜ್ಯಕ್ಕಿಂತ ದುಪ್ಪಟ್ಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಂತರ ಕರ್ನಾಟಕಕ್ಕೆ ೩ನೇ ಸ್ಥಾನ ಲಭಿಸಿದೆ. ಈ ಸಾಧನೆಗೆ ಶ್ರಮಿಸಿದ ಆರೋಗ್ಯ ಕಾರ್ಯಕರ್ತರು, ಜಿಲ್ಲಾಡಳಿತಗಳು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

,

Leave a Reply

Your email address will not be published. Required fields are marked *