ಟಿಪ್ಪು ಕುರಿತು ಹೆಚ್​. ವಿಶ್ವನಾಥ ಹೇಳಿಕೆ ಸ್ವಾಗತಾರ್ಹ: ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ ಅವರ ಟಿಪ್ಪು ಕುರಿತ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಟಿಪ್ಪು ಇತಿಹಾಸ ಮರೆಮಾಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಟಿಪ್ಪು ದೇಶ ಭಕ್ತ ಎಂದು ಹೇಳಿರುವುದು ಸತ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಚ್. ವಿಶ್ವನಾಥ್ ಅವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಟಿಪ್ಪು ಸುಲ್ತಾನ್ ದೇಶ ಭಕ್ತ, ವೀರ ಸೇನಾನಿ ಎಂಬುದನ್ನು ಮರೆಮಾಚುವಂತಿಲ್ಲ. ಟಿಪ್ಪು ಕಟ್ಟಿರುವ ದೇವಾಲಯಗಳು, ಕೋಟೆಗಳನ್ನು ಅವರು ಅಳಿಸಲು ಸಾಧ್ಯವೇ? ಟಿಪ್ಪು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅವರು ಕಟ್ಟಿದ ಕೋಟೆ ಅಳಿಸುತ್ತಾರಾ? ಪಠ್ಯದಿಂದ ಟಿಪ್ಪು ಇತಿಹಾಸ ತೆಗೆಯುವುದರ ಬಗ್ಗೆ ಇವತ್ತು ಅವರದೇ ನಾಯಕರಲ್ಲಿ ಅಪಸ್ವರ ಕೇಳಿ ಬರುತ್ತಿದೆ ಎಂದರು ಆರೋಪಿಸಿದರು.
ಸತ್ಯವನ್ನು ಹೇಳುವವರು ಬಿಜೆಪಿಯಲ್ಲಿ ಅನೇಕರಿದ್ದಾರೆ. ಇದೇ ವೇಳೆ ಸಂಗೊಳ್ಳಿ ರಾಯಣ್ಣ ದೇಶದ ಆಸ್ತಿ, ರಾಷ್ಟ್ರದ ಹೆಮ್ಮೆಯ ಸುಪುತ್ರ, ಅವರಿಗೆ ಸಲ್ಲಬೇಕಾದ ಗೌರವ ರಾಜ್ಯ ಸರ್ಕಾರದಿಂದ ಸಿಗಬೇಕು ಎಂದು ಒತ್ತಾಯಿಸಿದರು.
ಗಲಭೆ ಕುರಿತು ನಿಷ್ಪಕ್ಷಪಾತ ತನಿಖೆ: ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆಯಲ್ಲಿ ಹಾಲಿ ನ್ಯಾಯಾಧೀಶರು ಇರಬೇಕು. ಎಸ್​ಡಿಪಿಐ‌ ಸಂಘಟನೆ ಬಿಜೆಪಿಯ ಬಿ ಟೀಮ್ ಆಗಿದೆ. ಅವರೇ ಚುನಾವಣೆ ವೇಳೆ ಎಸ್​ಡಿಪಿಐ‌ ಅಭ್ಯರ್ಥಿ‌ ನಿಲ್ಲಿಸುತ್ತಾರೆ ಎಂದರು.
ಮೆಡಿಕಲ್ ಕಿಟ್ ಹಗರಣದ ಬಗ್ಗೆ ಧ್ವನಿ ಎತ್ತಿದ್ದೇವೆ. ಸಿಎಜಿಯಿಂದ ಅಡಿಟ್ ಆಗಬೇಕೆಂದು ಒತ್ತಾಯಿಸಲಾಗಿದೆ. ಡಿ.ಜೆ. ಹಳ್ಳಿ ಘಟನೆ ಹಿಂದೆ ಯಾರೇ ಇದ್ದರೂ ಕ್ರಮ ಕೈಗೊಳ್ಳಿ. ನಮ್ಮ ಶಾಸಕರಿಗೆ ರಕ್ಷಣೆ ಕೊಡಿ ಎಂದು ಕೇಳಿದ್ದೇವೆ. ಆದರೆ, ಇವತ್ತಿನವರೆಗೂ ರಕ್ಷಣೆ ಕೊಟ್ಟಿಲ್ಲ. ಇದು ಅಕ್ಷಮ್ಯ ಅಪರಾಧ. ಈ ಕೃತ್ಯದಿಂದ ಯಾರ ಕುರ್ಚಿಗೆ ತೊಂದರೆ ಇದೆ. ಯಾರ ಕುರ್ಚಿ ಮೇಲೆ ಕೈ ಇಟ್ಟು ಈ ಘಟನೆ ಮಾಡಿದ್ದಾರೆ ಎಂಬುದರ ಬಗ್ಗೆ ಮುಕ್ತವಾಗಿ ತನಿಖೆ ಆಗಲಿ ಎಂದು ಹೇಳಿದರು.
ಆರೋಗ್ಯ ಕಿಟ್ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆ ಆಗಿದೆ. ಮೊದಲ ದಿನದಿಂದ ಖರೀದಿಯಲ್ಲಿ ಆದ ಎಲ್ಲ ಪ್ರಕ್ರಿಯೆಗಳ ಬಗ್ಗೆ ಅಡಿಟ್ ಆಗಬೇಕು. ಕಂಟ್ರೋಲ್ ಮತ್ತು ಆಡಿಟ್ ಜನರಲ್ ಅವರಿಂದ ಆಡಿಟ್ ಆಗಬೇಕು‌. ಸಾರ್ವಜನಿಕರ ಮುಂದೆ ಪ್ರಸ್ತಾಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಗಡಿಯಲ್ಲಿ ಕರ್ನಾಟಕದವರಿಗೆ ಪ್ರವೇಶ ಅಡ್ಡಿ ಪಡಿಸಿದ ವಿಚಾರದಲ್ಲಿ ಕೇರಳ-ಕರ್ನಾಟಕ ರಾಜ್ಯದವರಿಗೆ ಕಿರುಕುಳ ಕೊಡಬಾರದು. ಕೊರೊನಾ ಷರತ್ತು ಸಡಿಲಿಕೆ ಆಗಿದೆ. ಜನರ ಸಂಚಾರಕ್ಕೆ ಅವಕಾಶ ಮಾಡಿಕೊಡಲಿ ಎಂದರು.

Leave a Reply

Your email address will not be published. Required fields are marked *