ಕಾರ್ಪೊರೇಟ್ ಕಂಪೆನಿಗಳಿಗೆ ದೇಶ ಮಾರುತ್ತಿರುವ ಸರ್ಕಾರ: ಮುರುಳೀಧರ ಹಾಲಪ್ಪ ಟೀಕೆ

ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಕಾರ್ಪೊರೇಟ್ ಕಂಪೆನಿಗಳಿಗೆ ದೇಶ ಮಾರುತ್ತಿರುವ ಸರ್ಕಾರ: ಮುರುಳೀಧರ ಹಾಲಪ್ಪ ಟೀಕೆ

ಗುಬ್ಬಿ: ಅಗತ್ಯವಸ್ತುಗಳ ಬೆಲೆ ಏರಿಕೆ ಜತೆಗೆ ಇಡೀ ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಸನ್ನದ್ದವಾದ ಕೇಂದ್ರ ಬಿಜೆಪಿ ಸರ್ಕಾರ ಸಾರ್ವಜನಿಕರ ಸೇವೆ ಎಂಬುದು ಮರೆತು ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗಿದೆ ಎಂದು ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಟೀಕಿಸಿದರು.

ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಹೆದ್ದಾರಿ ತಡೆ ನಡೆಸಿ ನಂತರ ತಾಲ್ಲೂಕು ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಎಲ್ಲಾ ವರ್ಗದ ಜನರ ಅನಿವಾರ್ಯವಾಗಿದೆ. ಇದರ ಬೆಲೆಯನ್ನು ನಿತ್ಯ ಏರಿಸುತ್ತಿರುವ ಕೇಂದ್ರ ಸರ್ಕಾರ ತನ್ನ ತಪ್ಪು ಒಪ್ಪಿಕೊಳ್ಳದೆ ಮೇಕೆಯ ಬಾಯಿಗೆ ಮೊಸರು ಬಳಿದ ಕೋತಿಯಂತೆ ಈ ಹಿಂದಿನ ಯುಪಿಎ ಸರ್ಕಾರದ ಮೇಲೆ ಹೇಳುವುದು ಸರಿಯಲ್ಲ. ಈ ಬಗ್ಗೆ ಜನಸಾಮಾನ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಜೆಟ್ ನಂತರದಲ್ಲಿ ಎಲ್ಲಾ ವಸ್ತುಗಳು ದುಬಾರಿಯಾಗುತ್ತಿವೆ. ದಿನಸಿ ಪದಾರ್ಥ, ತರಕಾರಿಗಳ ಬೆಲೆ ಗಗನಕ್ಕೇರಿಸಿದ ಸರ್ಕಾರದ ಆರ್ಥಿಕ ಚೇತರಿಕೆಗೆ ಸಾಮಾನ್ಯರ ಮೇಲೆ ಬರೆ ಎಳೆದು ಸರ್ಕಾರದ ಕೀಲಿ ಹಿಡಿದ ಕೆಲ ಸಿರಿವಂತ ಉದ್ದಿಮೆದಾರರ ಕೈಯಲ್ಲಿ ಸರ್ಕಾರ ಅಧಿಕಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು ಹೆದ್ದಾರಿ ರಸ್ತೆಗೆ ಇಳಿದರೆ ಟೋಲ್ ಫೀಸ್ ಡಬ್ಬಲ್ ಎನ್ನುತ್ತಾರೆ. ಈಗಾಗಲೇ ಇಂ‘ನದ ಬೆಲೆಗೆ ತತ್ತರಿಸಿದ ಜನರಿಗೆ ರಸ್ತೆ ಮೇಲೆ ಓಡಾಡುವ ಹಕ್ಕು ಕಸಿಯಲಾಗುತ್ತಿದೆ. ಮುಂದಿನ ದಿನದಲ್ಲಿ ನಮ್ಮ ಮನೆಗಳಿಂದ ಹೊರ ಬಂದರೂ ತೆರಿಗೆ ರೂಪದಲ್ಲಿ ಹಣ ಪಾವತಿಸಿಯೇ ನೆಮ್ಮದಿ ಕಂಡುಕೊಳ್ಳಬೇಕಿದೆ. ಈ ವ್ಯಾಪಾರೀಕರಣದ ಸರ್ಕಾರದ ವಿರುದ್ದ ಜನರು ದಂಗೆ ಎದ್ದೇಳುವ ಸಮಯ ಹತ್ತಿರದಲ್ಲಿದೆ ಎಂದರು.

ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ ಮಾತನಾಡಿ, ಬಿಪಿಎಲ್ ಕಾರ್ಡ್ ಅಕ್ರಮ ಕಂಡು ಹಿಡಿಯುವ ಭರದಲ್ಲಿ ಸಲ್ಲದ ಮಾನದಂಡ ರೂಪಿಸಿ ಅರ್ಹ ಬಡವನ ಆಹಾರ ಕಿತ್ತುಕೊಳ್ಳಲಾಗುತ್ತಿದೆ.

ಕೂಲಿ ಕಾರ್ಮಿಕನೂ ಇಂದು ಬೈಕ್ ಬಳಸುತ್ತಾನೆ. ದುಡಿಯಲು ವಾಹನವನ್ನು ಅವಲಂಬಿಸಿದ ಬಡಜನರು ವ್ಯಾಪಾರ ನಿಲ್ಲಿಸಿ ಬೀದಿಗೆ ಬರಬೇಕಿದೆ. ಇಂತಹ ರೂಲ್‌ಗಳ ಮೂಲಕ ಬಿಜೆಪಿ ಸರ್ವಾಧಿಕಾರ ಪ್ರವೃತ್ತಿಯನ್ನು ತೋರುತ್ತಿದೆ. ಎಲ್ಲಾ ರಂಗದಲ್ಲೂ ಆರ್ಥಿಕ ಪೆಟ್ಟು ತಿನ್ನುವ ಬಡವರಿಂದಲೇ ಬಿಜೆಪಿ ಪೆಟ್ಟು ತಿನ್ನಲಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿ.ವಿ.ಮಂಜುನಾಥ್ ಮತ್ತು ನಾಗಸಂದ್ರ ವಿಜಯ್‌ಕುಮಾರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ರೇವಣಸಿದ್ದಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಭರತ್‌ಗೌಡ, ಮುಖಂಡರಾದ ಸಲೀಂಪಾಷ, ಜಿ.ಎಸ್.ಮಂಜುನಾಥ್, ಮಹಮದ್ ರಫಿ, ವಿನಯ್, ಗಂಗಸಂದ್ರ ಮಂಜುನಾಥ್, ಜ್ಲೋನ್, ವಿಜಯಲಕ್ಷ್ಮೀ, ಸೌಭಾಗ್ಯಮ್ಮ, ರೂಪಾ, ಬೃಂದಾ ಇತರರು ಇದ್ದರು.

Leave a Reply

Your email address will not be published. Required fields are marked *